ಲೆಬನಾನ್ ಸುಸ್ಥಿತಿಗೆ ಬರಲು ಇನ್ನೂ 7 ವರ್ಷ ಬೇಕು: ಅಧ್ಯಕ್ಷ ಮೈಕಲ್ ಆನ್ ಹೇಳಿಕೆ

Update: 2021-12-25 17:57 GMT
ಮೈಕಲ್ ಆನ್(photo:twitter/@General_Aoun)

ಬೆರೂತ್, ಡಿ.25: ದೇಶದಲ್ಲಿ ಈಗ ತಲೆದೋರಿರುವ ಬಿಕ್ಕಟ್ಟಿನಿಂದ ಪಾರಾಗಲು ಕನಿಷ್ಟ 6ರಿಂದ 7 ವರ್ಷ ಬೇಕಾಗಬಹುದು ಎಂದು ಲೆಬನಾನ್ ಅಧ್ಯಕ್ಷ ಮೈಕಲ್ ಆನ್ ಹೇಳಿದ್ದಾರೆ.

ಶುಕ್ರವಾರ ಟಿವಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಅವರು, ದುಷ್ಕೃತ್ಯ, ಆರ್ಥಿಕ ಅವ್ಯವಹಾರ , ಭ್ರಷ್ಟಾಚಾರ ಮತ್ತು ವ್ಯವಸ್ಥೆಯ ವೈಫಲ್ಯದ ಫಲವಾಗಿ ಲೆಬನಾನ್ ಈ ಹಂತಕ್ಕೆ ತಲುಪಿದೆ. ಇದನ್ನು ಸರಿಪಡಿಸಲು ಅಗತ್ಯವಿರುವ ಬೌದ್ಧಿಕ ಮತ್ತು ಪ್ರಾಯೋಗಿಕ ಬದಲಾವಣೆಯನ್ನು ಖಂಡಿತವಾಗಿಯೂ ಜಾರಿಗೊಳಿಸಲಾಗುವುದು ಎಂದರು. ಲೆಬನಾನ್‌ನ ಜನತೆ ಇಂದು ಅನುಭವಿಸುತ್ತಿರುವ ಕಷ್ಟ, ಯಾತನೆಗಳು ಈ ಹಿಂದೆ ಅಧಿಕಾರದಲ್ಲಿದ್ದವರು ಮಾಡಿದ್ದ ಕಾರ್ಯದ ಫಲವಾಗಿದೆ ಎಂದು ಆ ಬಳಿಕ ಅವರು ಟ್ವೀಟ್ ಮಾಡಿದ್ದಾರೆ.

ದಶಕಗಳ ಅವಧಿಯಲ್ಲಿ ನಡೆದ ಭ್ರಷ್ಟಾಚಾರ, ಆರ್ಥಿಕ ದುರುಪಯೋಗ ಮತ್ತು ಸಮರ್ಥನೀಯವಲ್ಲದ ಆರ್ಥಿಕ ಯೋಜನೆಗಳಿಂದಾಗಿ ವಿದೇಶಿ ವಿನಿಮಯದ ಕೊರತೆ, ಸರಕಾರದ ಮೇಲಿನ ಭಾರೀ ಆರ್ಥಿಕ ಹೊರೆಯ ಸಮಸ್ಯೆ 2019ರಿಂದ ಉತ್ತುಂಗಕ್ಕೇರಿದ್ದು ಸತತ 3 ವರ್ಷ ದೇಶದ ಅರ್ಥವ್ಯವಸ್ಥೆ ಕುಸಿತದ ಹಾದಿಯಲ್ಲಿದೆ.

ಲೆಬನಾನ್‌ನ ಅರ್ಥವ್ಯವಸ್ಥೆ ವಿಷಯದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ವ್ಯಕ್ತಪಡಿಸಿದ್ದ ಕಟು ಟೀಕೆಯ ವೀಡಿಯೊ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದೆ. ನನಗೆ ತಿಳಿದ ಮಟ್ಟಿಗೆ , ಲೆಬನಾನ್ ಈಗ ಪೋಂಝಿ ಯೋಜನೆಯನ್ನು ಪಾಲಿಸುತ್ತಿದೆ. ಇದರಂತೆ ಭ್ರಷ್ಟಾಚಾರ ಹಾಗೂ ಬಹುಷಃ ಹಣ ಲಪಟಾಯಿಸಿರುವುದು ಆರ್ಥಿಕ ವ್ಯವಸ್ಥೆಯ ಕುಸಿತಕ್ಕೆ ಕಾರಣ ಎಂದು ಗುಟೆರಸ್ ಹೇಳಿರುವ ವೀಡಿಯೊ ಇದಾಗಿದೆ.

ಲೆಬನಾನ್‌ನ ಆರ್ಥಿಕ ವ್ಯವಸ್ಥೆಯ ಕುರಿತು ಇದೇ ರೀತಿಯ ಅಭಿಪ್ರಾಯವನ್ನು ಗುಟೆರಸ್ ಮಂಗಳವಾರ ಲೆಬನಾನ್ನ ನಾಗರಿಕ ಸಮಿತಿಯ ನಿಯೋಗದ ಜತೆ ನಡೆದ ಸಭೆಯಲ್ಲೂ ವ್ಯಕ್ತಪಡಿಸಿದ್ದರು ಎಂದು ಲೆಬನಾನ್ ಆರ್ಥಿಕ ವ್ಯವಸ್ಥೆಯ ಕುರಿತ ತಜ್ಞ ಮೈಕ್ ಅಝರ್ ಹೇಳಿದ್ದಾರೆ. ಸಭೆಯ ಬಳಿಕ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಗುಟೆರಸ್ , ಐಎಂಎಫ್ ಆರ್ಥಿಕ ನೆರವು ಲಭಿಸಬೇಕಿದ್ದರೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸುಧಾರಣೆ ತರುವ ವಿಶ್ವಾಸಾರ್ಹ ಭರವಸೆಯನ್ನು ಲೆಬನಾನ್ ಮುಖಂಡರು ಅಂತರಾಷ್ಟ್ರೀಯ ಸಮುದಾಯಕ್ಕೆ ನೀಡುವ ಅಗತ್ಯವಿದೆ ಎಂದು ಹೇಳಿದ್ದರು.

ಲೆಬನಾನ್‌ನ ಆರ್ಥಿಕ ವ್ಯವಸ್ಥೆ ಪೋಂಝಿ ವ್ಯವಹಾರದಂತಿದೆ ಎಂದು ಇತರ ಹಲವು ಪ್ರಮುಖರೂ ಟೀಕಿಸಿದ್ದಾರೆ. ಸಾಲ ಪಾವತಿಗೆ ಮತ್ತಷ್ಟು ಸಾಲ ಮಾಡುವುದನ್ನು ಪೋಂಝಿ ವ್ಯವಹಾರ ಎಂದು ಕರೆಯಲಾಗುತ್ತದೆ. ಆದರೆ ಈ ಟೀಕೆಯನ್ನು ಲೆಬನಾನ್‌ನ ಕೇಂದ್ರ ಬ್ಯಾಂಕ್ ನಿರಾಕರಿಸಿದೆ. ಹಣದ ಮುಗ್ಗಟ್ಟಿನಿಂದಾಗಿ ಲೆಬನಾನ್‌ನ ಪೌಂಡ್ ತನ್ನ 90% ಮೌಲ್ಯವನ್ನು ಕಳೆದುಕೊಂಡಿದ್ದು ನಿಷ್ಕ್ರಿಯಗೊಂಡಿರುವ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಠೇವಣಿ ಇರಿಸಿರುವವರ ಖಾತೆಯನ್ನು ಸ್ಥಂಭನಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News