×
Ad

‘ನಾನು ಹುಡುಗಿ,ಹೋರಾಡಬಲ್ಲೆ’ ಪ್ರಿಯಾಂಕಾ ಗಾಂಧಿ ಅಭಿಯಾನಕ್ಕೆ ಉತ್ತರಪ್ರದೇಶದಲ್ಲಿ ಉತ್ತಮ ಪ್ರತಿಕ್ರಿಯೆ

Update: 2021-12-26 13:51 IST

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮಹಿಳಾ ಕೇಂದ್ರಿತ "ಲಡ್ಕಿ ಹೂ, ಲಡ್ ಸಕ್ತಿ ಹೂ (ನಾನು ಹುಡುಗಿ ಮತ್ತು ಹೋರಾಡಬಲ್ಲೆ)" ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಿಲ್ಲಾಡಳಿತ ಆದೇಶವನ್ನು ಧಿಕ್ಕರಿಸಿ ಇಂದು ಬೆಳಿಗ್ಗೆ ಪಕ್ಷದಿಂದ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಿದ್ದಾರೆ.

ಕೊರೋನದ ಹೊಸ ರೂಪಾಂತರ ಒಮೈಕ್ರಾನ್ ಪ್ರಕರಣ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿ ಜಿಲ್ಲಾಡಳಿತವು ಮ್ಯಾರಥಾನ್ ಅನುಮತಿ ನಿರಾಕರಿಸಿದ್ದರೂ ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಂಗ್ರೆಸ್ ಹಂಚಿಕೊಂಡ ವೀಡಿಯೊಗಳಲ್ಲಿ  ಲಕ್ನೋ ಹಾಗೂ  ಝಾನ್ಸಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗಿಯಾಗಿದ್ದರು.

ಝಾನ್ಸಿಯಲ್ಲಿ ಹುಡುಗಿಯರು ಮ್ಯಾರಥಾನ್ ನಿಂದ ಹಿಂತಿರುಗಲು ನಿರಾಕರಿಸಿದರು ಹಾಗೂ ಪೊಲೀಸರು ಅವರನ್ನು ಮುಂದೆ ಹೋಗಲು ಬಿಡಲಿಲ್ಲ.

“ಲ್ಯಾಪ್‌ಟಾಪ್‌ಗಳನ್ನು ವಿತರಿಸುವ ಸರಕಾರಿ ಕಾರ್ಯಕ್ರಮದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಕೋವಿಡ್ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದಾಗ ರಾಜ್ಯ ಸರಕಾರಕ್ಕೆ ಸಮಸ್ಯೆ ಇರಲಿಲ್ಲ. ಈಗ ಏಕೆ ನಮ್ಮನ್ನು ತಡೆಯುತ್ತಿದ್ದೀರಿ” ಎಂದು ಕಾಂಗ್ರೆಸ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಮಹಿಳೆಯೊಬ್ಬರು ಪ್ರಶ್ನಿಸುತ್ತಿರುವುದು ಕಂಡುಬಂದಿದೆ.

ಎರಡೂ ಮ್ಯಾರಥಾನ್‌ಗಳಲ್ಲಿ ಮೊದಲ ಮೂರು ವಿಜೇತರಿಗೆ ಕಾಂಗ್ರೆಸ್ ಪಕ್ಷ  ಸ್ಕೂಟಿ ಘೋಷಿಸಿದೆ ಮತ್ತು ನಾಲ್ಕರಿಂದ 25 ನೇ ಸ್ಥಾನ ಪಡೆಯುವವರಿಗೆ ಸ್ಮಾರ್ಟ್‌ಫೋನ್ ನೀಡಲಾಗುವುದು. ಮುಂದಿನ 100 ಮಂದಿಗೆ ಫಿಟ್ನೆಸ್ ಬ್ಯಾಂಡ್ ನೀಡಲಾಗುವುದು, ಮುಂದಿನ 1,000 ಮಹಿಳೆಯರಿಗೆ ಪದಕಗಳನ್ನು ನೀಡಲಾಗುವುದು ಎಂದು ಪಕ್ಷ ಹೇಳಿದೆ.

ಪಕ್ಷವು ಭಾಗವಹಿಸುವವರಿಗೆ ಪ್ರವೇಶ ಶುಲ್ಕವನ್ನು ವಿಧಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News