ಮಠದಗುಡ್ಡೆ: ದುರಂತ ಘಟಿಸಿ ವರ್ಷವಾದರೂ ಸಂತ್ರಸ್ತರ ಸಂಕಷ್ಟಕ್ಕೆ ಸಿಗದ ಸ್ಪಂದನೆ
ಮಂಗಳೂರು, ಡಿ.26: ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್‌ನಲ್ಲಿ ಭೂಕುಸಿತಗೊಂಡು ಮನೆಗಳನ್ನು ಕಳೆದುಕೊಂಡು ಎರಡು ವರ್ಷವಾದರೂ ಕೂಡ ದ.ಕ.ಜಿಲ್ಲಾಡಳಿತ ಸ್ಪಂದಿಸಿಲ್ಲ ಎಂದು ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎರಡು ವರ್ಷದ ಹಿಂದೆ ಇಲ್ಲಿನ ಗುಡ್ಡ ಕುಸಿದು ಐದು ಮನೆಗಳು ನೆಲಸಮವಾಗಿತ್ತು. ಆದರೆ ವಸತಿರಹಿತರಿಗೆ ಕಂದಾಯ ಇಲಾಖೆಯು ನಿವೇಶನ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.
ನೆಲಸಮಗೊಂಡ ಮನೆಯ ಸದಸ್ಯರು ಅಂದಿನಿಂದ ಈವರೆಗೆ ನಿವೇಶನಕ್ಕಾಗಿ ಕಂದಾಯ ಇಲಾಖೆ, ಗ್ರಾಪಂ ಕಚೇರಿಗೆ ಅಲೆದಾಡುತ್ತಿದ್ದಾರೆ. ಈ ಮಧ್ಯೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರೆಲ್ಲರಿಗೂ ಶೀಘ್ರ ನಿವೇಶನ, ಬಾಡಿಗೆ ಮೊತ್ತ ಸಿಗಲಿದೆ ಎಂದಿದ್ದರು. ಆದರೆ ಈವರೆಗೂ ನಿವೇಶನವೂ ಸಿಕ್ಕಿಲ್ಲ, ಬಾಡಿಗೆಯೂ ಕೊಟ್ಟಿಲ್ಲ ಎಂದು ಸಂತ್ರಸ್ತರು ದೂರಿಕೊಂಡಿದ್ದಾರೆ.
‘ಮನೆ ಕಳೆದುಕೊಂಡವರ ಪರಿಸ್ಥಿತಿ ಅಧಿಕಾರಿಗಳಿಗೆ ಅರ್ಥವಾಗುವುದಿಲ್ಲ. ಮನವಿ ನೀಡಿದಾಗಲೆಲ್ಲ ಶೀಘ್ರ ನಿವೇಶನ ನೀಡುವ ಭರವಸೆ ನೀಡುತ್ತಾರೆಯೇ ವಿನಃ ಬೇರೆ ಏನೂ ಮಾಡಿಲ್ಲ. ನಮಗೆ ಬದುಕುವ ಹಕ್ಕಿಲ್ಲವೇ?’ ಎಂದು ಸಂತ್ರಸ್ತೆಯೊಬ್ಬರು ಪ್ರಶ್ನಿಸಿದ್ದಾರೆ.
ಸಂತ್ರಸ್ತರಿಗೆ ಪಂಚಾಯತ್ ವ್ಯಾಪ್ತಿಯಲ್ಲಿ ಸಮತಟ್ಟಾದ ಸರಕರಿ ಖಾಲಿ ಜಾಗ ಒಂದೇ ಕಡೆಯಲ್ಲಿಲ್ಲ. ಆದಾಗ್ಯೂ ಪ್ರಯತ್ನಿಸಲಾಗು ತ್ತಿದೆ ಎಂದು ಗುರುಪುರ ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಪಂ ಪಿಡಿಒ ಅಬೂಬಕರ್ ತಿಳಿಸಿದ್ದಾರೆ.