×
Ad

ಗವರ್ನರ್‌ ತನ್ನ ಗುಡಿಸಲಿಗೆ ಭೇಟಿ ನೀಡಿದ್ದಕ್ಕೆ ಮಧ್ಯಪ್ರದೇಶದ ವ್ಯಕ್ತಿಗೆ 14,000 ರೂ. ಬಿಲ್‌ !

Update: 2021-12-26 18:21 IST
Photo: Ndtv.com

ಭೋಪಾಲ್: ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಬುಧ್ರಾಮ್ ಆದಿವಾಸಿ ಹುಲ್ಲಿನ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಆಗಸ್ಟ್‌ನಲ್ಲಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಅವರಿಗೆ ನಿರ್ಮಾಣ ಹಂತದಲ್ಲಿರುವ ಮನೆಯ ಕೀಗಳನ್ನು ನೀಡಲಾಯಿತು. ವಾಸ್ತವವಾಗಿ, ರಾಜ್ಯಪಾಲ ಮಂಗುಭಾಯ್ ಸಿ ಪಟೇಲ್ ಅವರು ಕೀಗಳನ್ನು ಸ್ವತಃ ಹಸ್ತಾಂತರಿಸಿದರು ಮತ್ತು ಬುಧ್ರಾಮ್ ಆದಿವಾಸಿಯೊಂದಿಗೆ ಕುಳಿತು ಊಟ ಮಾಡಿದರು. 

ಆದರೆ ಇದು ತನ್ನ ಜೀವನವನ್ನು ಸಂಕಷ್ಟಕ್ಕೀಡು ಮಾಡುತ್ತದೆ ಎಂಬುವುದಾಗಿ ಬುಧ್ರಾಮ್‌ ಗೆ ತಿಳಿದಿರಲಿಲ್ಲ. ರಾಜ್ಯಪಾಲರು ಗುಡಿಸಲಿಗೆ ಭೇಟಿ ನೀಡುತ್ತಾರೆ ಎಂದಾಗಲೇ ಅಲ್ಲಿನ ಅಧಿಕಾರಿಗಳು ಕಾರ್ಯಪ್ರವೃತ್ತರಾಗು ಬುಧಿರಾಮ್‌ ನ ನಿರ್ಮಾಣ ಹಂತದ ಮನೆಯ ಮುಂದೆ ಗೇಟ್‌ ಹಾಗೂ ಫ್ಯಾನ್‌ ಗಳನ್ನು ಅಳವಡಿಸಿದರು. ಆದರೆ ರಾಜ್ಯಪಾಲರು ತೆರಳಿದ ಮರುದಿನವೇ ಅಧಿಕಾರಿಗಳು ಬುಧ್ರಾಮ್‌ ಗೆ 14,000 ರೂ. ಯ ಬಿಲ್‌ ಅನ್ನು ನೀಡಿದ್ದು, 14,000 ರೂ. ಗೇಟ್‌ ಹಾಗೂ ಇನ್ನಿತರ ಕಾರ್ಯಗಳಿಗೆ ಖರ್ಚಾಗಿದೆ. ಅದನ್ನು ಮರಳಿ ನೀಡಬೇಕು ಎಂದಿದ್ದಾಗಿ ndtv.com ವರದಿ ಮಾಡಿದೆ.

“ಅಧಿಕಾರಿಗಳು ಬಂದರು... ಗವರ್ನರ್ ಸಾಹೇಬರು ಇಲ್ಲೇ ಊಟ ಮಾಡ್ತಾರೆ ಅಂದರು. ₹ 14 ಸಾವಿರಕ್ಕೂ ಹೆಚ್ಚು ಬೆಲೆಯ ಹೊಸ ಗೇಟ್ ಫಿಕ್ಸ್ ಮಾಡಿದರು. ಈ ಕೆಲಸಕ್ಕೆಲ್ಲಾ ಹಣ ನೀಡಬೇಕು ಎಂದು ಮೊದಲೇ ತಿಳಿದಿದ್ದರೆ ನಾನು ಖಂಡಿತಾ ಗೇಟ್‌ ನಿರ್ಮಿಸಲು ಬಿಡುತ್ತಿರಲಿಲ್ಲ" ಎಂದು ಬುಧ್ರಾಮ್‌ ಹೇಳಿದ್ದಾರೆ. ಇದೀಗ ತಿಂಗಳುಗಳು ಕಳೆದರೂ ಬುಧ್ರಾಮ್‌ ಗೆ ಗ್ಯಾಸ್‌ ಹಾಗೂ ಮನೆ ನೀಡಲಾಗಿಲ್ಲ. 

ಎನ್ಡಿಟಿವಿ, ನಗರಾಭಿವೃದ್ಧಿ ಸಚಿವ ಭೂಪೇಂದ್ರ ಸಿಂಗ್ ಅವರನ್ನು ಸಂಪರ್ಕಿಸಿದಾಗ, ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಗಲಿದೆ ಎಂದು ಹೇಳಿದರು. ಹೀಗಾಗಬಾರದಿತ್ತು... ಕ್ರಮ ಕೈಗೊಳ್ಳಲಾಗುವುದು ಎಂದರು. "ಇದು ರಾಜ್ಯಪಾಲರ ಘನತೆಗೆ ವಿರುದ್ಧವಾಗಿದೆ" ಎಂಬ ಕಾರಣಕ್ಕಾಗಿ "ಕ್ರಮ" ತೆಗೆದುಕೊಳ್ಳಲಾಗುವುದು ಎಂದು ಸಿಂಗ್ ನಂತರ ಸೂಚಿಸಿದರು. "ಅತಿಥಿಗಳು ಬಂದರೆ ಮನೆಯನ್ನು ಅಲಂಕರಿಸುವ ಸಂಪ್ರದಾಯ ನಮ್ಮಲ್ಲಿದೆ. ಆದರೆ ನೀವು ಹೇಳಿದಂತೆ ಇದು ಘನತೆವೆತ್ತ ರಾಜ್ಯಪಾಲರ ಘನತೆಗೆ ವಿರುದ್ಧವಾಗಿದೆ. ಹಾಗಾಗಿ ನಾವು ಕ್ರಮಕೈಗೊಳ್ಳುತ್ತೇವೆ" ಎಂದರು.

ಪ್ರಧಾನಮಂತ್ರಿ ಆವಾಸ್‌ ಯೋಜನೆಯನ್ನು ಬಳಸಿಕೊಂಡು ಲಂಚ ಪಡೆಯುತ್ತಿರುವುದರ ಕುರಿತು ಎನ್ಡಿಟಿವಿ ವರದಿ ಪ್ರಕಟಿಸಿತ್ತು. ಈ ವರದಿಯ ಆಧಾರದ ಮೇಲೆ ಇಬ್ಬರು ಕಿರಿಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News