ಸನ್ನಿ ಲಿಯೋನ್ ʼಮಧುಬನ್ʼ ಹಾಡಿಗೆ ವಿರೋಧ: ಸಾಹಿತ್ಯ, ಹೆಸರು ಬದಲಾಯಿಸುತ್ತೇವೆ ಎಂದ ಸರಿಗಮ ಮ್ಯೂಸಿಕ್ ಲೇಬಲ್
ಭೋಪಾಲ್: ನಟಿ ಸನ್ನಿ ಲಿಯೋನ್ ನಟಿಸಿರುವ ವಿಡಿಯೋ ಹಾಡು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಆರೋಪಿಸಿದ ಬಳಕ ಸರಿಗಮ ಸಂಗೀತ ಲೇಬಲ್ ರವಿವಾರ "ಮಧುಬನ್" ಹಾಡಿನ ಸಾಹಿತ್ಯ ಮತ್ತು ಹೆಸರನ್ನು "ಬದಲಾಯಿಸಲಾಗುತ್ತದೆ" ಎಂದು ಹೇಳಿಕೆ ನೀಡಿದೆ.
ವೀಡಿಯೊದಲ್ಲಿ ನಟಿಸಿರುವ ನಟಿ ಸನ್ನಿ ಲಿಯೋನ್ ಮತ್ತು ಗಾಯಕರಾದ ಶರೀಬ್ ಮತ್ತು ತೋಶಿ ಅವರು ಕ್ಷಮೆಯಾಚಿಸುವಂತೆ ಮತ್ತು ಮೂರು ದಿನಗಳಲ್ಲಿ ತಮ್ಮ 'ಮಧುಬನ್ ಮೇ ರಾಧಿಕಾ, ಜೈಸೆ ಜಂಗಲ್ ಮೆ ನಾಚೆ ಮೋರ್' ಹಾಡನ್ನು ಹಿಂಪಡೆಯುವಂತೆ ಸಚಿವರು ಭಾನುವಾರ ಎಚ್ಚರಿಸಿದ್ದು, ಇಲ್ಲದಿದ್ದರೆ ಕ್ರಮ ಎದುರಿಸಬೇಕಾಗುತ್ತದೆ ಎಂದಿದ್ದರು.
"ಇತ್ತೀಚಿನ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಮತ್ತು ನಮ್ಮ ದೇಶವಾಸಿಗಳ ಭಾವನೆಗಳನ್ನು ಗೌರವಿಸಿ, ನಾವು ಮಧುಬನ್ ಹಾಡಿನ ಸಾಹಿತ್ಯ ಮತ್ತು ಹೆಸರನ್ನು ಬದಲಾಯಿಸುತ್ತೇವೆ. ಹೊಸ ಹಾಡು ಮುಂದಿನ 3 ದಿನಗಳಲ್ಲಿ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹಳೆಯದನ್ನು ಬದಲಾಯಿಸಿ ಬಿಡುಗಡೆ ಮಾಡಲಾಗುತ್ತದೆ," ಎಂದು ಸರಿಗಮ, ಡಿಸೆಂಬರ್ 22 ರಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡನ್ನು ಬಿಡುಗಡೆ ಮಾಡಿದ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.
ಮಧ್ಯಪ್ರದೇಶ ಸರ್ಕಾರದ ವಕ್ತಾರರೂ ಆಗಿರುವ ಮಿಶ್ರಾ, "ಹಿಂದೂಗಳು ಮಾ ರಾಧೆಯನ್ನು ಪೂಜಿಸುತ್ತಾರೆ ಮತ್ತು ಹಾಡು ಜನರ ಭಾವನೆಗಳಿಗೆ ಧಕ್ಕೆ ತಂದಿದೆ" ಎಂದು ಹೇಳಿದ್ದಾರೆ.
"ಕೆಲವು ವಿಧರ್ಮಿಗಳು ನಿರಂತರವಾಗಿ ಹಿಂದೂ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ. 'ಮಧುಬನ್ ಮೇ ರಾಧಿಕಾ ನಾಚೆ' ವೀಡಿಯೊ ಕೂಡಾ ಅಂತಹ ಖಂಡನೀಯ ಪ್ರಯತ್ನವಾಗಿದೆ. ನಾನು ಸನ್ನಿ ಲಿಯೋನ್ ಜಿ, ಶರೀಬ್ ಮತ್ತು ತೋಶಿ ಜಿ ಅವರಿಗೆ ಅರ್ಥಮಾಡಿಕೊಳ್ಳಲು ಎಚ್ಚರಿಕೆ ನೀಡುತ್ತಿದ್ದೇನೆ. ಅವರು ಮೂರು ದಿನಗಳಲ್ಲಿ ಕ್ಷಮೆಯಾಚಿಸಿದ ನಂತರ ಹಾಡನ್ನು ತೆಗೆದುಹಾಕದಿದ್ದರೆ ನಾವು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಮಿಶ್ರಾ ಹಾಡಿನ ಬಗ್ಗೆ ಕೇಳಿದಾಗ ಸುದ್ದಿಗಾರರಿಗೆ ತಿಳಿಸಿದ್ದರು.