×
Ad

ಉ.ಪ್ರದೇಶ: ಮಹಿಳೆಯರಿಗಾಗಿ ಕಾಂಗ್ರೆಸ್ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಒಮೈಕ್ರಾನ್ ನಿರ್ಬಂಧಗಳ ಉಲ್ಲಂಘನೆ

Update: 2021-12-26 21:23 IST

ಲಕ್ನೋ,ಡಿ.25: ರವಿವಾರ ಬೆಳಿಗ್ಗೆ ಕಾಂಗ್ರೆಸ್ ಆಯೋಜಿಸಿದ್ದ ಮ್ಯಾರಥಾನ್ ಓಟದಲ್ಲಿ ಪಾಲ್ಗೊಳ್ಳಲು ಸಾವಿರಾರು ಮಹಿಳೆಯರು ಜಿಲ್ಲಾಡಳಿತದ ಒಮೈಕ್ರಾನ್ ನಿರ್ಬಂಧಗಳನ್ನು ಉಲ್ಲಂಘಿಸಿ ಸಮಾವೇಶಗೊಳ್ಳುವುದರೊಡನೆ ಉತ್ತರ ಪ್ರದೇಶದಲ್ಲಿ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿಯವರ ಮಹಿಳಾ ಕೇಂದ್ರಿತ ‘ಲಡ್ಕಿ ಹೂಂ,ಲಡ್ ಸಕ್ತೀ ಹೂಂ (ನಾನು ಬಾಲಕಿ,ನಾನು ಹೋರಾಡಬಲ್ಲೆ)’ ಅಭಿಯಾನವು ಬಲ ಪಡೆದುಕೊಂಡಿದೆ. ಆದರೆ ಲಕ್ನೋದಲ್ಲಿ ಮ್ಯಾರಥಾನ್‌ಗೆ  ಪೊಲೀಸರು ಅವಕಾಶ ನೀಡಲಿಲ್ಲ.

ಒಮೈಕ್ರಾನ್ ಪ್ರಕರಣಗಳಲ್ಲಿ ಏರಿಕೆಯನ್ನು ಉಲ್ಲೇಖಿಸಿ ಮ್ಯಾರಥಾನ್‌ಗೆ ಜಿಲ್ಲಾಡಳಿತಗಳು ಅನುಮತಿಯನ್ನು ನಿರಾಕರಿಸಿದ್ದರೂ ಲಕ್ನೋ ಮತ್ತು ಝಾನ್ಸಿಗಳಲ್ಲಿ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದನ್ನು ಮತ್ತು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದನ್ನು ಕಾಂಗ್ರೆಸ್ ಟ್ವಿಟರ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿರುವ ವೀಡಿಯೊಗಳು ತೋರಿಸಿವೆ.

ಅನುಮತಿ ನಿರಾಕರಣೆ ಕುರಿತು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ,‘ನೀವು ಹುಡುಗಿಯರನ್ನು ನಿಯಂತ್ರಿಸುವಂತಹ ಮಹಿಳಾ ವಿರೋಧಿ ವಿಷಯಗಳ ಬಗ್ಗೆ ಮಾತನಾಡುತ್ತೀರಿ ಮತ್ತು ಇದೇ ಕಾರಣದಿಂದ ಲಕ್ನೋದಲ್ಲಿ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲು ಮಹಿಳೆಯರಿಗೆ ಅವಕಾಶ ನೀಡಿಲ್ಲ. ಝಾನ್ಸಿಯಲ್ಲಿಯ ಬಾಲಕಿಯರು ಇದನ್ನು ತಾವು ಸಹಿಸುವುದಿಲ್ಲ,ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತೇವೆ ಎಂಬ ಸಂದೇಶವನ್ನು ನಿಮಗೆ ರವಾನಿಸಿದ್ದಾರೆ. ನೀವು ರ್ಯಾಲಿಯನ್ನು ನಡೆಸಿದರೆ,ಬಾಲಕಿಯರು ಓಡಲು ಸಮರ್ಥರಿದ್ದಾರೆ ’ ಎಂದು ಟ್ವೀಟಿಸಿದ್ದಾರೆ.

ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗಿದ್ದ ಸರಕಾರಿ ಕಾರ್ಯಕ್ರಮದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಕೋವಿಡ್ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಾಗ ರಾಜ್ಯ ಸರಕಾರಕ್ಕೆ ಸಮಸ್ಯೆಯಾಗಿರಲಿಲ್ಲ. ಹಾಗಿದ್ದಾಗ ಈಗೇಕೆ ಎಂದು ಮಹಿಳೆಯೋರ್ವಳು ಪ್ರಶ್ನಿಸಿದ್ದು ವೀಡಿಯೊದಲ್ಲಿ ಕೇಳಿಬಂದಿದೆ.
ಆದಾಗ್ಯೂ,ಝಾನ್ಸಿಯಲ್ಲಿ ಪೊಲೀಸ್ ಅನುಮತಿಯೊಂದಿಗೆ ಮ್ಯಾರಥಾನ್ ಓಟ ನಡೆದಿದೆ.
ಎರಡೂ ಮ್ಯಾರಥಾನ್‌ಗಳಲ್ಲಿ ಮೊದಲ ಮೂವರು ವಿಜಯಿಗಳಿಗೆ ಸ್ಕೂಟಿ ಬಹುಮಾನವನ್ನು ಪ್ರಕಟಿಸಿದ್ದ ಕಾಂಗ್ರೆಸ್, ನಾಲ್ಕರಿಂದ 25ರವರೆಗೆ ಸ್ಥಾನ ಪಡೆದವರಿಗೆ ಸ್ಮಾರ್ಟ್‌ಫೋನ್‌ಗಳು, ಮುಂದಿನ ನೂರು ಸ್ಥಾನಿಗಳಿಗೆ ಫಿಟ್‌ನೆಸ್ ಬ್ಯಾಂಡ್‌ಗಳು ಮತ್ತು ನಂತರದ 1,000 ಮಹಿಳೆಯರಿಗೆ ಪದಕಗಳನ್ನು ನೀಡುವುದಾಗಿ ತಿಳಿಸಿತ್ತು. 

ಪಕ್ಷವು ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುವವರಿಗೆ ಯಾವುದೇ ಪ್ರವೇಶ ಶುಲ್ಕವನ್ನು ವಿಧಿಸಿರಲಿಲ್ಲ. ಪ್ರಿಯಾಂಕಾ ಎರಡೂ ಕಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲಿಲ್ಲ.
ಉತ್ತರ ಪ್ರದೇಶ ರಾಜಕೀಯದಲ್ಲಿ ನಗಣ್ಯವಾಗಿರುವ ಕಾಂಗ್ರೆಸ್ ರಾಜ್ಯದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಿಂಗ ಸಮಾನತೆಯ ಮೇಲೆ ಗಮನವನ್ನು ಕೇಂದ್ರೀಕರಿಸಿದೆ.

ಬಿಜೆಪಿಯೂ ವಿಧಾನಸಭಾ ಚುನಾವಣೆ ಸನ್ನಿಹಿತವಾಗಿರುವ ಉತ್ತರ ಪ್ರದೇಶದಲ್ಲಿ ಮಹಿಳೆಯರನ್ನು ಓಲೈಸಲು ಹಲವಾರು ಯೋಜನೆಗಳನ್ನು ಪ್ರಕಟಿಸಿದೆ. ರಾಜಕೀಯವಾಗಿ ನಿರ್ಣಾಯಕವಾಗಿರುವ ಈ ರಾಜ್ಯಕ್ಕೆ ಎರಡು ತಿಂಗಳುಗಳಲ್ಲಿ 10ಕ್ಕೂ ಹೆಚ್ಚು ಸಲ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗಷ್ಟೇ ಮಹಿಳಾ ಸ್ವಸಹಾಯ ಸಂಘಗಳ ಬ್ಯಾಂಕ್ ಖಾತೆಗಳಿಗೆ 1,000 ಕೋ.ರೂ.ಗೂ ಅಧಿಕ ಹಣವನ್ನು ವಗಾವಣೆ ಮಾಡಿದ್ದು, 16 ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಇದರ ಲಾಭ ಪಡೆಯಲಿದ್ದಾರೆ.
ಮಹಿಳೆಯರನ್ನು ಓಲೈಸುವಲ್ಲಿ ಎಸ್ಪಿ ಹಿಂದೆ ಬಿದ್ದಿಲ್ಲ. ಅಖಿಲೇಶ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಅವರ ಆಡಳಿತಗಳಲ್ಲಿ ಮಹಿಳೆಯರಿಗಾಗಿ ಕೈಗೊಂಡಿದ್ದ ಕ್ರಮಗಳನ್ನು ಪ್ರಮುಖವಾಗಿ ಬಿಂಬಿಸಲು ಅದು ಯತ್ನಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News