ಬುರ್ಕಿನಾ ಫೆಸೊ: ಬಂಡುಗೋರ ಪಡೆಯ ದಾಳಿಗೆ 41 ಮಂದಿ ಸಾವು

Update: 2021-12-26 16:12 GMT

ಕ್ವಗಡೊಗು, ಡಿ.26: ಪಶ್ಚಿಮ ಆಫ್ರಿಕಾದ ಬುರ್ಕಿನಾ ಫೆಸೊ ದೇಶದ ಸಂಘರ್ಷ ಪೀಡಿತ ಉತ್ತರ ಪ್ರಾಂತದಲ್ಲಿ ಸಶಸ್ತ್ರ ಗುಂಪಿನ ದಾಳಿಯಲ್ಲಿ ಕನಿಷ್ಟ 41 ಮಂದಿ ಮೃತಪಟ್ಟಿರುವುದಾಗಿ ಸರಕಾರ ಘೋಷಿಸಿದೆ.

ಮೃತರಲ್ಲಿ ‘ವೊಲಂಟಿಯರ್ಸ್ ಫಾರ್ ದಿ ಡಿಫೆನ್ಸ್ ಆಫ್ ಮದರ್‌ಲ್ಯಾಂಡ್ (ವಿಡಿಪಿ) ಎಂದು ಕರೆಸಿಕೊಳ್ಳುವ, ಸರಕಾರದ ಬೆಂಬಲ ಪಡೆದಿರುವ ನಾಗರಿಕರ ಸ್ವಯಂ ರಕ್ಷಣಾ ಪಡೆಯ ಮುಖಂಡ ಲಾದ್ಜಿ ಯೊರೊ ಹಾಗೂ ಇತರ ಸದಸ್ಯರೂ ಸೇರಿದ್ದಾರೆ . ಮಾಲಿ ದೇಶದ ಗಡಿಯ ಸನಿಹದಲ್ಲಿರುವ ಖ್ವಹಿಗೌಯ ಎಂಬ ನಗರದಲ್ಲಿ ವಿಡಿಪಿ ಬೆಂಗಾವಲಿನಲ್ಲಿ ಸಾಗುತ್ತಿದ್ದ ವ್ಯಾಪಾರಿಗಳ ವಾಹನಗಳ ಸಾಲನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ಸರಕಾರ ಶನಿವಾರ ಘೋಷಿಸಿದೆ.
 
ಪಶ್ಚಿಮ ಆಫ್ರಿಕಾದ ಮಾಲಿ, ಬುರ್ಕಿನಾ ಫೆಸೊ, ನಿಗರ್ ಮುಂತಾದ ದೇಶಗಳಲ್ಲಿ ಸಶಸ್ತ್ರ ಬಂಡುಗೋರ ಪಡೆಯು ರೈತರ ಮತ್ತು ಆದಿವಾಸಿ ಸಮುದಾಯದ ಮಧ್ಯೆ ಉದ್ವಿಗ್ನತೆ ಮೂಡಿಸಿ ಸರಕಾರದ ವಿರುದ್ಧ ಎತ್ತಿಕಟ್ಟುವ ಕಾರ್ಯದಲ್ಲಿ ತೊಡಗಿದ್ದು ಈ ದೇಶಗಳ ಸೇನಾಬಲ ಸೀಮಿತವಾಗಿರುವುದರಿಂದ ಬಂಡುಗೋರರನ್ನು ನಿಯಂತ್ರಿಸುವುದು ಸವಾಲಿನ ಕಾರ್ಯವಾಗಿದೆ. ಈ ಕಾರಣದಿಂದ ಕಳೆದ ವರ್ಷ ಬುರ್ಕಿನಾ ಫೆಸೊ ಸರಕಾರ ವಿಡಿಪಿ ಎಂದು ಹೆಸರಿಸಲಾಗಿರುವ ನಾಗರಿಕ ರಕ್ಷಣಾ ಪಡೆಯ ರಚನೆಗೆ ಬೆಂಬಲ ನೀಡಿತ್ತು. 

ಆದರೆ ಈ ಪಡೆಯನ್ನು ಗುರಿಯಾಗಿಸಿ ಬಂಡುಗೋರರ ದಾಳಿ ಹೆಚ್ಚಿರುವುದು ಮತ್ತೊಂದು ಸಮಸ್ಯೆಗೆ ಕಾರಣವಾಗಿದೆ. ರಾಜಕೀಯ ಅಸ್ಥಿರತೆ ಇರುವ ಬುರ್ಕಿನಾ ಫೆಸೊದಲ್ಲಿ ಇದುವರೆಗೆ ಸಂಘರ್ಷದಲ್ಲಿ ಕನಿಷ್ಟ 2 ಸಾವಿರ ಜನರ ಹತ್ಯೆಯಾಗಿದ್ದು 1.4 ಮಿಲಿಯನ್ ಮಂದಿ ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ. ಸಹೆಲ್ ಪ್ರಾಂತದಲ್ಲಿ ಹಿಂಸಾಚಾರ ಉಲ್ಬಣಿಸಿದ್ದು ಇಲ್ಲಿ ವಿಶ್ವದ ಅತ್ಯಂತ ತೀವ್ರ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿಯಿದೆ ಎಂದು ವಿಶ್ವಸಂಸ್ಥೆಯ ಏಜೆನ್ಸಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News