×
Ad

ಹಾಲಿನ ತಾಜಾತನಕ್ಕಾಗಿ 136 ಕಡೆ ಶಿಥೀಲಿಕರಣ ಘಟಕ ಸ್ಥಾಪನೆ: ರವಿರಾಜ್ ಹೆಗ್ಡೆ

Update: 2021-12-26 22:06 IST

ಉಡುಪಿ, ಡಿ.26: ಹಾಲಿನ ತಾಜಾತನ, ಪೋಷಕಾಂಶವನ್ನು ಕಾಪಾಡುವ ನಿಟ್ಟಿನಲ್ಲಿ ಹಳ್ಳಿಹಳ್ಳಿ ಸೇರಿದಂತೆ 136 ಕಡೆಯಲ್ಲಿ ಹಾಲಿನ ಸಾಂದ್ರ ಶಿಥೀಲಿಕರಣ ಘಟಕವನ್ನು ತೆರೆಯಲಾಗಿದೆ. ಈ ಮೂಲಕ ದಕ್ಷಿಣ ಕನ್ನಡ ಒಕ್ಕೂಟವು ಗುಣಮಟ್ಟ ಹಾಲು, ಹಾಲಿನ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿದೆ ಎಂದು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಉಡುಪಿ ರೋಟರಿ ಹಾಗೂ ಇನ್ನರ್ ವ್ಹೀಲ್ ಕ್ಲಬ್‌ನ ಸಹಯೋಗದೊಂದಿಗೆ ಕಡಿಯಾಳಿ ಯು. ಕಮಲಾ ಬಾಯಿ ಹೈಸ್ಕೂಲ್ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ನಂದಿನಿ ಪನೀರ್ ವೆಸ್ಟ್ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ರಾಜ್ಯದ 14 ಹಾಲಿನ ಒಕ್ಕೂಟಗಳ ಪೈಕಿ ದಕ್ಷಿಣ ಕನ್ನಡ ಒಕ್ಕೂಟವು ಒಂದನೇ ಸ್ಥಾನದಲ್ಲಿದೆ. ಜಾನುವಾರುಗಳಿಂದ ಹಾಲು ತೆಗೆದು 6-7 ಗಂಟೆಯ ಬಳಿಕ ಹಾಗೆಯೇ ತೆಗೆದಿಟ್ಟರೆ ಹಾಲು ಕೆಡುತ್ತದೆ. ಹಾಗಾಗಿ ಸಂಗ್ರಹಣ ಮಾಡಿರುವ ಹಾಲು ಹಾಳಾಗದಂತೆ ತಡೆಯುವ ನಿಟ್ಟಿನಲ್ಲಿ ಹಳ್ಳಿ-ಹಳ್ಳಿಗಳಲ್ಲಿ ಶಿಥೀಲಿಕರಣ ಘಟಕ ತೆರೆಯಲಾಗಿದೆ ಎಂದರು.

ಸಂಘದ ಮಾರ್ಕೆಟಿಂಗ್ ಮ್ಯಾನೇಜರ್ ಡಾ.ರವಿರಾಜ ಉಡುಪ ಮಾತನಾಡಿ, ದ.ಕ. ಒಕ್ಕೂಟದಿಂದ ಪ್ರಸ್ತುತ 2000 ದಿಂದ 3000 ಕೆ.ಜಿ.ಯಷ್ಟು ಗುಣಮಟ್ಟದ ಪನೀರ್ ಪೂರೈಕೆ ಮಾಡುತ್ತಿದ್ದೇವೆ. ಪನೀರ್ ಆಹಾರವಾಗಿದ್ದು, ಬಹಳ ಬೇಡಿಕೆಯೂ ಇದೆ. ನಮ್ಮಲ್ಲಿ 730 ಹಾಲು ಸಂಗ್ರಹ ಸಂಘಗಳಿದ್ದು, 1 ಲಕ್ಷಕ್ಕೂ ಅಧಿಕ ರೈತರಿಂದ ಹಾಲು ಸಂಗ್ರಹ ಮಾಡುತ್ತಿದ್ದೇವೆ ಎಂದು ಹೇಳಿದರು.

ಉಡುಪಿ ಇನ್ನರ್ ವ್ಹೀಲ್ ಕ್ಲಬ್‌ನ ಉಪಾಧ್ಯಕ್ಷೆ ಸುರೇಖಾ, ದ.ಕ. ಒಕ್ಕೂಟದ ಡೆಪ್ಯುಟಿ ಮ್ಯಾನೇಜರ್ ಚಿದಾನಂದ, ಉಡುಪಿ ರೋಟರಿ ಅಧ್ಯಕ್ಷ ಹೇಮಂತ್ ಕಾಂತ್ ಉಪಸ್ಥಿತರಿದ್ದರು. ಒಕ್ಕೂಟದ ಮಾರ್ಕೆಟಿಂಗ್ ಆಸಿಸ್ಟೆಂಟ್ ಮ್ಯಾನೇಜರ್ ಸುಧಾಕರ ಸ್ವಾಗತಿಸಿದರು. ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಶುಭಾ ಎಸ್.ಬಾಸ್ರಿ ವಂದಿಸಿದರು. ಭಾಗ್ಯರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News