×
Ad

ಮುಳ್ಳಿಕಟ್ಟೆಯಲ್ಲಿ ಹಾರ್ಡ್‌ವೇರ್ ಅಂಗಡಿಗೆ ಬೆಂಕಿ

Update: 2021-12-26 22:35 IST

ಕುಂದಾಪುರ, ಡಿ.26: ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ಸಮೀಪದ ಬೆನಕ ಹಾರ್ಡ್‌ವೇರ್ ಅಂಗಡಿಯಲ್ಲಿ ಡಿ.25ರಂದು ಸಂಜೆ ಸಂಭವಿಸಿದ ಬೆಂಕಿ ಅಕಸ್ಮಿಕದಿಂದ ಇಡೀ ಅಂಗಡಿ ಸುಟ್ಟು, ಕೊಟ್ಯಾಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.

ಮುಳ್ಳಿಕಟ್ಟೆಯ ವಾಣಿಜ್ಯ ಸಂಕೀರ್ಣದಲ್ಲಿರುವ ಹರೀಶ್ ಜೋಗಿ ಎಂಬವರು ತನ್ನ ಹಾರ್ಡ್‌ವೇರ್‌ನ ನಾಲ್ಕು ಅಂಗಡಿಗಳಿಗೆ ಸಂಜೆ ಏಳು ಗಂಟೆಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಕೆಲ ಹೊತ್ತಿನ ಬಳಿಕ ಅಂಗಡಿಯ ಶಟರ್ ಮೂಲಕ ಹೊಗೆ ಹೊರ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಮಾಹಿತಿ ನೀಡಿದರು. ಆಗಲೇ ಬೆಂಕಿಯ ಕೆನ್ನಾಲಿಗೆ ಇಡೀ ಅಂಗಡಿಗೆ ವ್ಯಾಪಿಸಿತು.
ಇದರಿಂದ ಅಂಗಡಿಯ ಒಳಗಿದ್ದ ಪೈಂಟ್, ಟರ್ಪಂಟೈಲ್, ನೀರಿನ ಟ್ಯಾಂಕ್, ಆಯಿಲ್ ಬೇಸ್ಡ್ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಯಿತು. ಅಲ್ಲದೆ ಅಂಗಡಿಯ ಫರ್ನಿಚರ್, ವಿದ್ಯುತ್ ಸಲಕರೆಗಳು ಕೂಡ ಸುಟ್ಟು ಕರಕಲಾಗಿ ಹೋಯಿತು. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ರಾತ್ರಿ 12ಗಂಟೆಗೆ ಸಂಪೂರ್ಣ ಬೆಂಕಿಯನ್ನು ನಂದಿಸಿದರು.

ಇದರಿಂದ ಸುಮಾರು ಒಂದು ಕೋಟಿಗೂ ಅಧಿಕ ಹಣ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ನಂಜಾ ನಾಯ್ಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News