ಗಂಜಿಮಠ: ಝಾರಾ ಕನ್ವೆನ್ಶನ್ ಸೆಂಟರ್ ಉದ್ಘಾಟನೆ
ಮಂಗಳೂರು, ಡಿ.26: ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಗಂಜಿಮಠದಲ್ಲಿ ನಿರ್ಮಾಣಗೊಂಡ ಝಾರಾ ಕನ್ವೆನ್ಶನ್ ಸೆಂಟರ್ ಸಭಾಂಗಣವು ರವಿವಾರ ಉದ್ಘಾಟನೆಗೊಂಡಿತು.
ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮತ್ತು ದ.ಕ.ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಸಭಾಂಗಣಗಳನ್ನು ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಉದ್ಯಮಿ ಝಕರಿಯಾ ಜೋಕಟ್ಟೆ ಸಾರ್ವಜನಿಕರ ಹಿತದೃಷ್ಟಿಯಿಂದ ಜನನಿಬಿಡ ಪ್ರದೇಶದಲ್ಲಿ ಈ ಸಭಾಂಗಣವನ್ನು ನಿರ್ಮಿಸಿದ್ದಾರೆ. ಇದನ್ನು ಸರ್ವರೂ ಸದುಪಯೋಗಪಡಿಸಿಕೊಳ್ಳಬೇಕು. ಇದರ ಸ್ಥಾಪಕ ಮತ್ತು ಈ ಸಭಾಂಗಣವನ್ನು ಮುನ್ನಡೆಸುವವರಿಗೆ ಅಲ್ಲಾಹನು ಸಮೃದ್ಧಿ ನೀಡಲಿ ಎಂದರು.
ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮಾತನಾಡಿ ಝಕರಿಯಾ ಜೋಕಟ್ಟೆ ದ.ಕ.ಜಿಲ್ಲೆಯಲ್ಲಿ ಇಂದು ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಲಾದ ಈ ಸುಸಜ್ಜಿತ ಸಭಾಂಗಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ನೂತನ ಸದಸ್ಯ ಮಂಜುನಾಥ್ ಭಂಡಾರಿ ಝಾರಾ ಕನ್‌ವೆನ್ಶನ್‌ನ ಲಾಂಛನ ಅನಾವರಣಗೊಳಿಸಿದರು. ಶಾಸಕ ಯು.ಟಿ.ಖಾದರ್ ಹಾಲ್ ಬುಕ್ಕಿಂಗ್ ವ್ಯವಸ್ಥೆಯ ಪ್ರೊಫೈಲ್ ಬಿಡುಗಡೆಗೊಳಿಸಿದರು.
ಅತಿಥಿಗಳಾಗಿ ರಾಜ್ಯ ವಕ್ಫ್ ಬೋರ್ಡ್‌ನ ಅಧ್ಯಕ್ಷ ಮೌಲಾನಾ ಶಾಫಿ ಸಅದಿ, ಡಾ.ಅಬ್ದುಲ್ ಹಕೀಂ ಅಝ್‌ಹರಿ, ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಪೊಂಪೈ ಚರ್ಚ್‌ನ ಧರ್ಮಗುರು ಫಾ. ಆ್ಯಂಟನಿ ಲೋಬೊ, ಮಾಜಿ ಸಚಿವರಾದ ಬಿ.ರಮನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಮೊಯ್ದಿನ್ ಬಾವಾ, ಜೆ.ಆರ್.ಲೋಬೊ, ಎನ್‌ಆರ್‌ಐ ಫೋರಂನ ನಿಕಟಪೂರ್ವ ಅಧ್ಯಕ್ಷೆ ಡಾ. ಆರತಿ ಕೃಷ್ಣ, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ, ಬಿಸಿಸಿಐ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಬಿ.ಎಂ. ಮುಮ್ತಾಝ್ ಅಲಿ, ಅಬ್ದುಲ್ಲಾ ಮೋನು ಕತರ್, ಅಂತಾರಾಷ್ಟ್ರೀಯ ತರಬೇತುದಾರ ಮುನವ್ವರ್ ಝಮಾ, ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ, ವೈಟ್‌ಸ್ಟೋನ್ ಡೆವೆಲಪರ್ಸ್‌ನ ಆಡಳಿತ ನಿರ್ದೇಶಕ ಬಿ.ಎಂ. ಶರೀಫ್, ಸೂರಲ್ಪಾಡಿ ಜುಮಾ ಮಸೀದಿಯ ಖತೀಬ್ ಮೌಲಾನಾ ಉಸ್ಮಾನ್ ದಾರಿಮಿ, ಗಂಜಿಮಠ ಗ್ರಾಪಂ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಸದಸ್ಯೆ ಅನಿತಾ ಡಿಸೋಜ, ಮುಹಮ್ಮದ್ ಫಾರೂಕ್ ಜುಬೈಲ್ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಝಾರಾ ಕನ್ವೆನ್ಶನ್ ಸೆಂಟರ್‌ನ ಅಧ್ಯಕ್ಷ ಬಿ. ಝಕರಿಯಾ ಜೋಕಟ್ಟೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಝಾರಾ ಕನ್ವೆನ್ಶನ್ ಸೆಂಟರ್‌ನ ನಿರ್ದೇಶಕರಾದ ಝಹೀರ್ ಝಕರಿಯಾ, ನಝೀರ್ ಝಕರಿಯಾ, ಝಾಹಿದ್ ಝಕರಿಯಾ, ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ನಝೀಮುದ್ದೀನ್ ಮತ್ತು ರಿಯಾಝ್ ಕಿರಾಅತ್ ಪಠಿಸಿದರು. ಸಾಹಿಲ್ ಝಹೀರ್ ಕಾರ್ಯಕ್ರಮ ನಿರೂಪಿಸಿದರು.
ಸುಮಾರು 3 ಎಕರೆ ವಿಶಾಲವಾದ ಜಮೀನಿನಲ್ಲಿ ನಿರ್ಮಿಸಲಾದ 1 ಲಕ್ಷ ಚ.ಅ. ವಿಸ್ತೀರ್ಣದ ಝಾರಾ ಕನ್ವೆನ್ಶನ್ ಸೆಂಟರ್ ನಲ್ಲಿ ಹಲವು ಸಭಾಂಗಣಗಳಿವೆ. ಈ ಸಂಕೀರ್ಣವು ಸಂಪೂರ್ಣ ಹವಾನಿಯಂತ್ರಿತ ಮತ್ತು ದೀಪಾಲಂಕೃತಗೊಂಡಿದೆ. ವೈಫೈ ಸೌಕರ್ಯ, ಎಲ್‌ಇಡಿ ಸ್ಕ್ರೀನ್‌ಗಳು, ವರ್ಟಿಕಲ್ ಗಾರ್ಡನ್, ಸ್ಟೋನ್ ಫೌಂಟೈನ್ ಮತ್ತು 24 ತಾಸುಗಳ ವಿದ್ಯುತ್ ವ್ಯವಸ್ಥೆ, ವಿಶಾಲವಾದ ಅಡುಗೆ ಕೋಣೆ, ಸಸ್ಯಾಹಾರಿ ಮತ್ತು ಶಾಕಾಹಾರಿ ಊಟೋಪಚಾರಕ್ಕೆ ಪ್ರತ್ಯೇಕ ಊಟದ ಕೋಣೆಗಳಿವೆ.
ಸುಮಾರು 650 ಕಾರುಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಮುಖ್ಯ ಸಭಾಂಗಣ ಆರ್ಚಿಡ್ ನಲ್ಲಿ 700, 1ನೆ ಮಹಡಿಯ ಸಾಫ್ರಾನ್‌ನಲ್ಲಿ 650, ನೆಲ ಅಂತಸ್ತಿನ ಟುಲಿಪ್‌ನಲ್ಲಿ 800, ಪಾರ್ಟಿ ಹಾಲ್ ಐರಿಸ್‌ನಲ್ಲಿ 300, ಬ್ಲೂಬೆಲ್‌ನಲ್ಲಿ 200, ಸ್ನೇಹಕೂಟದ ಪರ್ಪಲ್ ನಲ್ಲಿ 500, ಲ್ಯಾವೆಂಡರ್ ಸೆಮಿನಾರ್ ಹಾಲ್‌ನಲ್ಲಿ 500 ಹಾಗೂ ಝೀಗ್ರೌಂಡ್ ಹೊರಾಂಗಣದಲ್ಲಿ 600 ಆಸನಗಳ ವ್ಯವಸ್ಥೆಯಿರುತ್ತದೆ. ಅತಿಥಿಗಳಿಗೆ ವಾಸ್ತವ್ಯಕ್ಕಾಗಿ ಸಭಾಂಗಣದಲ್ಲಿ ಮೂರು ಎಕ್ಸಿಕ್ಯುಟಿವ್ ಸೂಟ್ ರೂಮ್‌ಗಳಿವೆ.