×
Ad

ಲಿಬಿಯಾ: ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ 28 ವಲಸಿಗರ ಮೃತದೇಹ ಪತ್ತೆ

Update: 2021-12-27 00:30 IST

ಟ್ರಿಪೋಲಿ, ಡಿ.26: ದೋಣಿ ಮುಳುಗಿದ ದುರಂತದಲ್ಲಿ ನಾಪತ್ತೆಯಾಗಿದ್ದ 28 ವಲಸಿಗರ ಮೃತದೇಹ ಲಿಬಿಯಾದ ಪಶ್ಚಿಮ ಕರಾವಳಿ ತೀರಕ್ಕೆ ತೇಲಿ ಬಂದಿದೆ ಎಂದು ರವಿವಾರ ಲಿಬಿಯಾದ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ. ‌

ಟ್ರಿಪೋಲಿಯಿಂದ ಸುಮಾರು 90 ಕಿ.ಮೀ ದೂರದ ಅಲ್ ಅಲೌಸ್ ತೀರದ ವಿವಿಧೆಡೆ ಲಿಬಿಯಾದ ರೆಡ್ಕ್ರೆಸೆಂಟ್ ತಂಡ 28 ಮೃತದೇಹಗಳನ್ನು ಹಾಗೂ ಬದುಕುಳಿದ 3 ಮಂದಿಯನ್ನು ಪತ್ತೆಹಚ್ಚಿದೆ. ಇಲ್ಲೇ ಸಮೀಪದ ಸಮುದ್ರದಲ್ಲಿ ಅಪಘಾತಕ್ಕೆ ಈಡಾದ ದೋಣಿಯೂ ಕಂಡುಬಂದಿದ್ದು ಅದನ್ನು ಗಮನಿಸಿದರೆ ಹಲವು ದಿನಗಳ ಹಿಂದೆ ಅಪಘಾತ ಸಂಭವಿಸಿರಬೇಕು ಎಂದು ರೆಡ್ಕ್ರೆಸೆಂಟ್ ಹೇಳಿದೆ.
 
ದಶಕಗಳ ಕಾಲದಿಂದ ಮುಂದುವರಿದಿರುವ ತೀವ್ರ ಅಂತರ್ಯುದ್ಧ ಹಾಗೂ ಅರಾಜಕತೆಯ ಪರಿಸ್ಥಿತಿಯಿಂದಾಗಿ ಲಿಬಿಯಾದಿಂದ ಆಫ್ರಿಕಾ ಮತ್ತು ಏಶ್ಯಾದ ವಲಸಿಗರು ಯುರೋಪ್ನತ್ತ ತೆರಳಲು ಹತಾಶ ಪ್ರಯತ್ನ ನಡೆಸುತ್ತಿದ್ದಾರೆ. ಸಮುದ್ರ ಪ್ರಯಾಣಕ್ಕೆ ಯೋಗ್ಯವಲ್ಲದ ದೋಣಿಗಳಲ್ಲಿ ಕಿಕ್ಕಿರಿದು ತುಂಬುವ ವಲಸಿಗರು ಅಪಾಯಕಾರಿ ಸಾಹಸಕ್ಕೆ ಮುಂದಾಗುತ್ತಿದ್ದು ತಮ್ಮ ಪ್ರಾಣಕ್ಕೇ ಸಂಚಕಾರ ತಂದುಕೊಳ್ಳುತ್ತಿದ್ದಾರೆ. 

ಕಳೆದ ವಾರ ನಡೆದ ದೋಣಿ ದುರಂತದಲ್ಲಿ 160 ವಲಸಿಗರು ಮೃತರಾಗಿದ್ದು ಇದರೊಂದಿಗೆ ಈ ವರ್ಷ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರುವ ವಲಸಿಗರ ಸಂಖ್ಯೆ 1,500ರ ಗಡಿ ದಾಟಿದೆ. ಇದೇ ಅವಧಿಯಲ್ಲಿ 30000ಕ್ಕೂ ಅಧಿಕ ವಲಸಿಗರನ್ನು ಸಮುದ್ರಮಧ್ಯದಲ್ಲೇ ತಡೆದು ಲಿಬಿಯಾಕ್ಕೆ ವಾಪಸು ಕಳುಹಿಸಲಾಗಿದೆ ಎಂದು ವಲಸೆಗೆ ಸಂಬಂಧಿಸಿದ ಅಂತರಾಷ್ಟ್ರೀಯ ಸಂಘಟನೆ ಮಾಹಿತಿ ನೀಡಿದೆ. ಹೀಗೆ ವಾಪಾಸು ಕಳಿಸಲ್ಪಟ್ಟವರು ಬಂಧನ ಕೇಂದ್ರದಲ್ಲಿ ಮತ್ತಷ್ಟು ಭಯಾನಕ ಪರಿಸ್ಥಿತಿಯಲ್ಲಿರಬೇಕಾಗುತ್ತದೆ ಎಂದು ಸಂಘಟನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News