ಅಮೆರಿಕದಲ್ಲಿ ಒಮೈಕ್ರಾನ್ : ಆಸ್ಪತ್ರೆಗೆ ದಾಖಲಾಗುವ ಮಕ್ಕಳ ಸಂಖ್ಯೆ 4 ಪಟ್ಟು ಹೆಚ್ಚಳ

Update: 2021-12-27 01:42 GMT
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಅಮೆರಿಕದಲ್ಲಿ ಒಮೈಕ್ರಾನ್ ಪ್ರಕರಣಗಳ ಸಂಖ್ಯೆ ಕ್ಷಿಪ್ರವಾಗಿ ಹೆಚ್ಚುತ್ತಿರುವ ನಡುವೆಯೇ ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ನ್ಯೂಯಾರ್ಕ್ ಆರೋಗ್ಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಏತನ್ಮಧ್ಯೆ ದೇಶದಲ್ಲಿ ಕೋವಿಡ್-19 ಪರೀಕ್ಷಾ ಕೊರತೆಯನ್ನು ಕ್ಷಿಪ್ರವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶ್ವೇತಭವನ ಭರವಸೆ ನೀಡಿದೆ.

ಆಸ್ಪತ್ರೆಗೆ ಮಕ್ಕಳು ಅಧಿಕವಾಗಿ ದಾಖಲಾಗುತ್ತಿರುವುದಕ್ಕೆ ಕೋವಿಡ್-19 ಜತೆ ಸಂಬಂಧ ಇದೆ ಎಂದು ನ್ಯೂಯಾರ್ಕ್ ಸರ್ಕಾರಿ ಆರೋಗ್ಯ ಇಲಾಖೆ ಹೇಳಿಕೆ ನಿಡಿದೆ. "ನ್ಯೂಯಾರ್ಕ್ ನಗರದಲ್ಲಿ ಡಿಸೆಂಬರ್ 5ಕ್ಕೆ ಹೋಲಿಸಿದರೆ ಪ್ರಸಕ್ತ ವಾರದಲ್ಲಿ ಕೋವಿಡ್-19 ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ 18 ವರ್ಷಕ್ಕಿಂತ ಕೆಳವಯಸ್ಸಿನವರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳವಾಗಿದೆ" ಎಂದು ಹೇಳಿದ್ದಾರೆ.

ಈ ಪೈಕಿ ಅರ್ಧದಷ್ಟು ಮಂದಿ ಐದು ವರ್ಷಕ್ಕಿಂತ ಕೆಳಗಿನವರು. ಈ ವರ್ಗದ ಮಕ್ಕಳು ಲಸಿಕೆ ಪಡೆಯಲು ಇನ್ನೂ ಅರ್ಹರಾಗಿಲ್ಲ. ಅಮೆರಿಕದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದ್ದು, ಕಳೆದ ಏಳು ದಿನಗಳಿಂದ ಸರಾಸರಿ ದೈನಿಕ ಹೊಸ ಸೋಂಕು ಪ್ರಕರಣಗಳ ಸಂಖ್ಯೆ 1,90,000 ಇದೆ ಎಂದು ಜಾನ್ ಹಾಕಿನ್ಸ್ ವಿವಿಯ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಹೊಸದಾಗಿ ಒಮೈಕ್ರಾನ್ ಪ್ರಬೇಧದ ಸೋಂಕು ಕಾಣಿಸಿಕೊಂಡಿರುವುದು ಮತ್ತು ಹಬ್ಬದ ಸಂಭ್ರಮದಲ್ಲಿ ಕುಟುಂಬಗಳ ಮಿಲನ, ಪ್ರವಾಸದ ಕಾರಣದಿಂದ ಕೋವಿಡ್ ಪತ್ತೆ ಪರೀಕ್ಷೆಗೆ ಜನ ಮುಗಿ ಬಿದ್ದಿದ್ದಾರೆ. ಪರೀಕ್ಷಾ ಸಮಸ್ಯೆ ಇದೆ ಎಂದು ಅಮೆರಿಕದ ಸಾಂಕ್ರಾಮಿಕಗಳ ಸಲಹೆಗಾರ ಆಂಟೋನಿ ಫೌಸಿ ಒಪ್ಪಿಕೊಂಡಿದ್ದಾರೆ. ಮುಂದಿನ ತಿಂಗಳ ವೇಳೆಗೆ ಪರೀಕ್ಷೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News