×
Ad

ಭ್ರಷ್ಟಾಚಾರದ ತನಿಖೆಯ ನಡುವೆ ಪ್ರಧಾನಿಯನ್ನೇ ಉಚ್ಛಾಟಿಸಿದ ದೇಶದ ಅಧ್ಯಕ್ಷ !

Update: 2021-12-27 17:50 IST
Photo: DW.com

ಮೊಗಾದಿಶು: ಸೊಮಾಲಿಯಾದ ಪ್ರಧಾನಿ ಮುಹಮ್ಮದ್ ಹುಸೇನಿ ರೊಬೆಲ್ ಅವರ ಅಧಿಕಾರಗಳನ್ನು ತಾವು ವಜಾಗೊಳಿಸಿರುವುದಾಗಿ ದೇಶದ ಅಧ್ಯಕ್ಷ ಮುಹಮ್ಮದ್ ಅಬ್ದುಲ್ಲಾಹಿ  ಇಂದು ಹೇಳಿದ್ದಾರೆ. ʼಪರೋಕ್ಷ ಕ್ಷಿಪ್ರ ಕ್ರಾಂತಿಗೆ ಸಮ' ಎಂದು ದೇಶದ ಸಹಾಯಕ ಮಾಹಿತಿ ಸಚಿವ  ಬಣ್ಣಿಸಿದ ಭ್ರಷ್ಟಾಚಾರ ತನಿಖೆಯ ನಡುವೆ ಈ ಬೆಳವಣಿಗೆ ನಡೆದಿದೆ.

ಸೊಮಾಲಿ ನ್ಯಾಷನಲ್ ಆರ್ಮಿ ಒಡೆತನದ ಸರಕಾರಿ ಜಮೀನನ್ನು ರೋಬೆಲ್ ಲೂಟಿಗೈದಿದ್ದಾರೆ ಹಾಗೂ ರಕ್ಷಣಾ ಸಚಿವಾಲಯದ ತನಿಖೆಯಲ್ಲಿ ಹಸ್ತಕ್ಷೇಪ ನಡೆಸಿದ್ದಾರೆ ಎಂದು ಅಧ್ಯಕ್ಷರು ಆರೋಪಿಸಿದ್ದಾರೆ. ಪ್ರಧಾನಿಯ ಅಧಿಕಾರವನ್ನು ಸೆಳೆಯಲಾಗಿದ್ದರೂ ಇತರ ಎಲ್ಲಾ ಸಚಿವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಧಾನಿ ರೋಬೆಲ್ ಪ್ರತಿಕ್ರಿಯಿಸದೇ ಇದ್ದರೂ ಅಧ್ಯಕ್ಷರ ಕ್ರಮ ಅಸಂವಿಧಾನಿಕ ಎಂದು  ಸರಕಾರಿ ವಕ್ತಾರರು ಹೇಳಿದ್ದಾರಲ್ಲದೆ ಪ್ರಧಾನಿ ತಮ್ಮ ಕರ್ತವ್ಯಗಳನ್ನು ನಿಭಾಯಿಸುವುದನ್ನು ಮುಂದುವರಿಸಲಿದ್ದಾರೆ ಎಂದಿದ್ದಾರೆ.

ರವಿವಾರ ದೇಶದ ಪ್ರಧಾನಿ ಹಾಗೂ ಅಧ್ಯಕ್ಷರು ಪರಸ್ಪರ ದೂಷಿಸಿ  ಸಂಸದೀಯ ಚುನಾವಣೆಗಳನ್ನು ತಡೆಹಿಡಿದಿರುವ ಕುರಿತು ಆರೋಪಿಸಿದ್ದರು. ದೇಶದಲ್ಲಿ ಅಲ್ ಕೈದಾ ನಂಟು ಹೊಂದಿರುವ ಅಲ್ ಶಬಾಬ್ ಕಾರ್ಯಾಚರಣೆಯಿಂದ ಗಮನ ಬೇರೆಡೆ ಸೆಳೆಯುವ ತಂತ್ರ ಇದೆಂದು  ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ನೌಕಾ ಪಡೆಯ ಕಮಾಂಡರ್ ಜನರ್ ಅಬ್ದಿಹಮೀದ್ ಮೊಹಮ್ಮದ್ ದಿರಿರ್  ಅವರನ್ನೂ ಹುದ್ದೆಯಿಂದ ಕೆಳಗಿಳಿಸಲಾಗಿದೆ ಎಂದು ಅಧ್ಯಕ್ಷರು ಹೇಳಿದ್ದಾರೆ.

ಈ ವರ್ಷದ ಸೆಪ್ಟೆಂಬರಿನಲ್ಲಿ ಮೊಹಮ್ಮದ್ ಅವರು ಅಧಿಕಾರಿಗಳನ್ನು ನೇಮಿಸುವ ಹಾಗೂ ಕಿತ್ತೊಗೆಯುವ ಅಧಿಕಾರವನ್ನು ಪ್ರಧಾನಿಯಿಂದ ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News