"ನೀವು ಸಾವರ್ಕರ್‌ ತಂಡದವರೆಂದು ಗೊತ್ತು": ವಿವಾದಾತ್ಮಕ ಮಾತನ್ನು ಹಿಂಪಡೆದ ತೇಜಸ್ವಿ ಸೂರ್ಯಗೆ ನೆಟ್ಟಿಗರಿಂದ ಬುದ್ಧಿವಾದ

Update: 2021-12-27 13:26 GMT

ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ʼಭಾರತದಲ್ಲಿ ಹಿಂದೂ ಧರ್ಮದ ಪುನರುಜ್ಜೀವನʼ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿವಾದಾತ್ಮಕ ಮಾತುಗಳನ್ನಾಡಿದ್ದರು. ಈ ದೇಶದಲ್ಲಿ ಟಿಪ್ಪುವಿನ ಖಡ್ಗದಿಂದ ಮತಾಂತರವಾದ ಅನ್ಯಧರ್ಮೀಯರೆಲ್ಲರನ್ನೂ ಟಿಪ್ಪು ಜಯಂತಿಯ ದಿನದಂದೇ ಹಿಂದೂ ಧರ್ಮಕ್ಕೆ ಮತಾಂತರ ಮಾಡಬೇಕು. ಈ ಪ್ರಕ್ರಿಯೆಗೆ ಹಿಂದೂ ಧಾರ್ಮಿಕ ಮುಖಂಡರು ನೇತೃತ್ವ ವಹಿಸಬೇಕು" ಸೇರಿದಂತೆ ಹಲವು ವಿವಾದಾತ್ಮಕ ಮಾತಗಳನ್ನಾಡಿದ್ದರು. ಬಳಿಕ ಟ್ವಿಟರ್‌ ನಲ್ಲಿ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾಗಿ ಟ್ವೀಟ್‌ ಮಾಡಿದ್ದರು.

"ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ʼಭಾರತದಲ್ಲಿ ಹಿಂದೂ ಧರ್ಮದ ಪುನರುಜ್ಜೀವನʼ ಎಂಬ ವಿಷಯದ ಕುರಿತು ಮಾತನಾಡಿದ್ದೆ. ಆದರೆ ನಾನಾಡಿದ ಕೆಲ ಮಾತುಗಳು ವಿವಾದಕ್ಕೀಡಾಗಿದ್ದು, ಆದ್ದರಿಂದ ನಾನು ಬೇಷರತ್‌ ಆಗಿ ನನ್ನ ಹೇಳಿಕೆಗಳನ್ನು ಹಿಂಪಡೆಯುತ್ತಿದ್ದೇನೆ" ಎಂದು ಟ್ವೀಟ್‌ ಮಾಡಿದ್ದರು.

ಸದ್ಯ ಈ ಟ್ವೀಟ್‌ ಹಲವು ವ್ಯಂಗ್ಯ ಪ್ರತಿಕ್ರಿಯೆಗಳಿಗೆ ಸಾಕ್ಷಿಯಾಗಿದೆ. "ನೀವು ಸಾವರ್ಕರ್‌ ರ ತಂಡದವರು ಎನ್ನುವುದು ನಮಗೆ ತಿಳಿದಿದೆ ಎಂದು ಬಳೆದಾರರೊಬ್ಬರು ಕಿಚಾಯಿಸಿದರೆ, "ವಿವಾದಕ್ಕೀಡಾಗುತ್ತದೆ ಎಂದು ತಿಳಿದಿದ್ದರೂ ಇಂತಹಾ ಮಾತುಗಳನ್ನಾಡುವುದೇಕೆ? ಬಳಿಕ ಬಂದು ಕ್ಷಮೆಯಾಚಿಸುವುದೇಕೆ? ಇದು ಕಳಪೆ ಮಟ್ಟದ ವರ್ತನೆ" ಎಂದು ಇನ್ನೋರ್ವ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

"ನೀವು ನಿಮ್ಮ ಹೇಳಿಕೆಗಳನ್ನು ಹಿಂಪಡೆಯುವ ಬದಲು ಸಂಸದ ಸ್ಥಾನವನ್ನೇ ಹಿಂಪಡೆದುಬಿಡಿ. ಗಾಂಧೀಜಿಯ ಶಾಂತಿಯನ್ನು ನಂಬುವ ಈ ಭಾರತದ ಮಣ್ಣಿನಲ್ಲಿ ದ್ವೇಷಕ್ಕೆ ಯಾವುದೇ ಸ್ಥಾನವಿಲ್ಲ" ಎಂದು ವ್ಯಕ್ತಿಯೋರ್ವರು ಪ್ರತಿಕ್ರಿಯಿಸಿದ್ದಾರೆ. ಇನ್ನಿತರ ಪ್ರತಿಕ್ರಿಯೆಗಳು ಈ ಕೆಳಗಿನಂತಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News