×
Ad

ಸಜಿಪಮುನ್ನೂರು ಗ್ರಾಮಕ್ಕೆ ನೀರು ಪೂರೈಕೆ ಮಾಡದೆ ಯಾವುದೇ ಕಾಮಗಾರಿಗೆ ಅವಕಾಶ ನೀಡುವುದಿಲ್ಲ: ಹಂಝಾ ನಂದಾವರ

Update: 2021-12-27 19:29 IST

ಬಂಟ್ವಾಳ, ಡಿ.27: ನೇತ್ರಾವತಿ ನದಿಯಿಂದ ಉಳ್ಳಾಲ ಮತ್ತು ಕೋಟೆಕಾರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಪೈಪ್ ಅಳವಡಿಕೆ ಕಾಮಗಾರಿ ಸಜಿಪಮುನ್ನೂರು ಗ್ರಾಮದಲ್ಲಿ ಆರಂಭಿಸಬೇಕಾದರೆ, ಮೊದಲು ಗ್ರಾಮಸ್ಥರ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ, ಕಾನೂನು ಹೋರಾಟದ ಮೂಲಕ ಕಾಮಗಾರಿ ಆರಂಭಿಸಲು ಅವಕಾಶ ನೀಡುವುದಿಲ್ಲ‌ ಎಂದು ಸಜಿಪಮುನ್ನೂರು ಎಸ್.ಡಿ.ಪಿ.ಐ. ಗ್ರಾಮ ಸಮಿತಿ ಅಧ್ಯಕ್ಷ ಹಂಝಾ ನಂದಾವರ ಎಚ್ಚರಿಕೆ ನೀಡಿದರು. 

ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಗೆ 198 ಕೋಟಿ ರೂ. ವೆಚ್ಚದಲ್ಲಿ ನೀರು ಪೂರೈಕೆಯ ಜಾಕ್ ವೆಲ್ ಸಜೀಪಮುನ್ನೂರು ಗ್ರಾಮದ ಆಲಾಡಿಯ ನೇತ್ರಾವತಿ ತಟದಲ್ಲಿ ಇದೆ. ಯೋಜನೆಯ ಪೈಪ್ ಲೈನ್ ಗಳು ಸಜಿಪಮುನ್ನೂರು ಗ್ರಾಮದಲ್ಲಿ ಹಾದು ಹೋಗುತ್ತಿದ್ದರೂ ನಮ್ಮ ಗ್ರಾಮಕ್ಕೆ ನೀರು ಕೊಡಲು ಅಧಿಕಾರಿಗಳು ಹಿಂದೇಟು ಹಾಕಿದ್ದರು. ಹಾಗಾಗಿ ಈ ಯೋಜನೆಯ ಕಾಮಗಾರಿ ಆರಂಭದ ಸಮಯದಲ್ಲಿ ಈ ಯೋಜನೆಯಲ್ಲಿ ಸಜಿಪಮುನ್ನೂರು ಗ್ರಾಮಕ್ಕೂ ನೀರು ಕೊಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿತ್ತು. ಗ್ರಾಮಸ್ಥರ ಬೇಡಿಕೆ ಈಡೇರಿಸುವ ತನಕ ಗ್ರಾಮದಲ್ಲಿ ಪೈಪ್ ಲೈನ್ ಕಾಮಗಾರಿ ನಡೆಸಲು ಅವಕಾಶ ನೀಡಿರಲಿಲ್ಲ ಎಂದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಾಗೂ ಜಿಪಂ, ತಾಪಂನ ಜನಪ್ರತಿನಿಧಿಗಳು ಇದೇ ಯೋಜನೆಯಲ್ಲಿ ಗ್ರಾಮಕ್ಕೆ ನೀರು ಕೊಡುವುದಾಗಿ ಭರವಸೆ ನೀಡಿದ್ದರು. ಅಲ್ಲದೆ ಯೋಜನೆಯಲ್ಲಿ ನೀರು ಪಡೆಯುವ ಗ್ರಾಮಗಳ ಪಟ್ಟಿಯಲ್ಲಿ ಸಜಿಪಮುನ್ನೂರು ಗ್ರಾಮದ ಹೆಸರನ್ನೂ ಸೇರಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.

ಇದೀಗ ಈ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಕೆಯುಡಬ್ಲ್ಯುಎಸ್‌ಡಿಬಿ ಸಹಾಯಕ ಇಂಜಿನಿಯರ್ ಶೋಭಾಲಕ್ಷ್ಮೀ ಅವರು, ಜಾಕ್‌ವೆಲ್‌ ಕಾಮಗಾರಿ ಪೂರ್ಣಗೊಂಡಿದೆ. ಸಜಿಪಮುನ್ನೂರು ಗ್ರಾಮಕ್ಕೆ ನೀರು ಕೊಡಬೇಕೆಂಬ ಗ್ರಾಮಸ್ಥರ ಆಗ್ರಹದಿಂದ ಪೈಪ್‌ಲೈನ್‌ ಕಾಮಗಾರಿ ಅರ್ಧಕ್ಕೆ ನಿಂತಿದೆ. ಆದರೆ ಗ್ರಾಮಕ್ಕೆ ನೀರು ಕೊಡಲು ಈ ಯೋಜನೆಯಲ್ಲಿ ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ನಾವು ಖಂಡಿಸುತ್ತಿದ್ದು ಗ್ರಾಮಸ್ಥರನ್ನು ಕತ್ತಲಲ್ಲಿ ಇಟ್ಟು ತಮ್ಮ ಕಾಮಗಾರಿ ಮುಂದುವರಿಸುವ ಕುತಂತ್ರ ನಡೆಸುತ್ತಿದ್ದಾರೆ. ಈ ಬಗ್ಗೆ ಸರ್ವ ಗ್ರಾಮಸ್ಥರು ಒಳಗೊಂಡ ಹೋರಾಟ ಸಮಿತಿಯ ತುರ್ತು ಸಭೆ ಕರೆದಿದ್ದು ತೀವ್ರ ಪ್ರತಿಭಟನೆ ಹಾಗೂ ಕಾನೂನು ಹೋರಾಟವನ್ನು ಮುಂದುವರಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು. 

ಈ ಯೋಜನೆಯ ನೀರು ಶುದ್ದೀಕರಣ ಘಟಕ ಮುಡಿಪುವಿನಲ್ಲಿ ಇದೆ. ಸಜೀಪಮೂಡ ಗ್ರಾಮದ ಸುಭಾಷ್‌ ನಗರ (ಬೇಂಕ್ಯ)ದಿಂದ ಮುಡಿಪು ವರೆಗೆ ಈ ಯೋಜನೆಯ ಪೈಪ್‌ ಲೈನ್‌ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಆಲಾಡಿ ಜಾಕ್‌ವೆಲ್‌ನಿಂದ ಸುಭಾಷ್‌ ನಗರದವರೆಗಿನ ಪೈಪ್‌ ಲೈನ್‌ ಕಾಮಗಾರಿ ಬಾಕಿ ಇದೆ. ಈ ಕಾಮಗಾರಿ ಆರಂಭಿಸಬೇಕಾದರೆ ಮುಡಿಪುವಿನಿಂದ ಸಜಿಪಮುನ್ನೂರು ಗ್ರಾಮದವರೆಗೆ ಗ್ರಾಮಕ್ಕೆ ನೀರು ಕೊಡುವ ರಿಟರ್ನ್ ಪೈಪ್ ಮೊದಲು ಅಳವಡಿಸಬೇಕು. ಅಥವಾ ಸಜಿಪಮುನ್ನೂರು ಗ್ರಾಮದಲ್ಲೇ ನೀರು ಶುದ್ದೀಕರಣ ಘಟಕ ನಿರ್ಮಿಸಿ ಗ್ರಾಮಕ್ಕೆ ಕುಡಿಯುವ ನೀರು ಕೊಡಬೇಕು. ಇಲ್ಲದಿದ್ದರೆ ಗ್ರಾಮದಲ್ಲಿರುವ ಜಾಕ್ ವೆಲ್ ನಿಂದ ಬಾಕಿ ಇರುವ ಪೈಪ್ ಅಳವಡಿಕೆ ಕಾಮಗಾರಿ ನಡೆಸಲು ಸಹಕಾರ ನೀಡುವುದಿಲ್ಲ. ಇಡೀ ಗ್ರಾಮಸ್ಥರು ಸೇರಿ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. 

ಯಾವ ಯೋಜನೆಯಿಂದ ಆದರೂ ಸರಿ ಮೊದಲು ಸಜಿಪಮುನ್ನೂರು ಗ್ರಾಮಕ್ಕೆ ನೀರು ಕೊಡಬೇಕು. ಅದಾದ ಬಳಿಕವೇ ಉಳ್ಳಾಲ, ಕೋಟೆಕಾರು ಭಾಗಕ್ಕೆ ಇಲ್ಲಿಂದ ನೀರು ಪುರೈಸುವ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೆ ನಾವು ಗ್ರಾಮದಲ್ಲಿ ಯಾವುದೇ ಕಾಮಗಾರಿಗೂ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು. 

ಈ ಹಿಂದೆ ಮಂಗಳೂರು ಯೂನಿವರ್ಸಿಟಿ, ಇನ್ಫೋಸಿಸ್, ಉಳ್ಳಾಲ ನಗರಸಭೆ, ಕರೋಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಕೂಡಾ ನಮ್ಮ ಗ್ರಾಮದಿಂದಲೇ ಮಾಡಲಾಗಿದೆ. ಆ ವೇಳೆಯೂ ಈ ಯೋಜನೆಯಲ್ಲಿ ಗ್ರಾಮಕ್ಕೆ ನೀರು ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಯೋಜನೆ ಮುಗಿದ ಬಳಿಕ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಯೋಜನೆಯಲ್ಲಿ ಗ್ರಾಮಕ್ಕೆ ನೀರು ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ. ಇದರಿಂದ ನಾವು ಪಾಠ ಕಲಿತಿದ್ದೇವೆ. ಇನ್ನು ಮುಂದೆ ನಾವು ಯಾರ ಮೇಲೂ ಭರವಸೆ ಇಡುವುದಿಲ್ಲ. ನಮಗೆ ನೀರು ಕೊಟ್ಟ ಬಳಿಕ ಯಾವ ಯೋಜನೆಯ ಕಾಮಗಾರಿಯನ್ನು ಬೇಕಾದರೂ ಗ್ರಾಮದಲ್ಲಿ ಆರಂಭ ಮಾಡಿ. ಇಲ್ಲದಿದ್ದರೆ ಯಾವ ಕಾಮಗಾರಿಗೂ ನಮ್ಮ ಗ್ರಾಮಕ್ಕೆ ಬರಬೇಡಿ ಎಂದು ಹಂಝಾ ನಂದಾವರ ತಿಳಿಸಿದರು.  

ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಕ್ಷೇತ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಮಜೀದ್ ಆಲಡ್ಕ, ಸದಸ್ಯ ಮಲಿಕ್ ಕೊಳಕೆ, ಸಜಿಪಮುನ್ನೂರು ಗ್ರಾಪಂ ಸದಸ್ಯ ಸಿದ್ದೀಕ್ ನಂದಾವರ, ಎಸ್.ಡಿ.ಪಿ.ಐ. ಕಲ್ಲಡ್ಕ ಬ್ಲಾಕ್ ಕಾರ್ಯದರ್ಶಿ ಫಾರೂಕ್ ಆಲಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News