×
Ad

​ಅಸಂವಿಧಾನಿಕ ಮಸೂದೆಯ ವಿರುದ್ಧ ಧ್ವನಿ ಎತ್ತುವುದು ಅಗತ್ಯ: ರಾಯ್ ಕ್ಯಾಸ್ತಲಿನೊ

Update: 2021-12-27 20:10 IST

ಮಂಗಳೂರು, ಡಿ.27: ರಾಜ್ಯ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಮತಾಂತರ ನಿಷೇಧ ಮಸೂದೆ ಅಸಂವಿಧಾನಿಕ ವಾಗಿದ್ದು, ಇದರ ವಿರುದ್ಧ ಕ್ರೈಸ್ತ ಸಮುದಾಯ ಧ್ವನಿ ಎತ್ತುವುದು ಅತೀ ಅಗತ್ಯ ಹಾಗೂ ಅನಿವಾರ್ಯ ಎಂದು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ, ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ಅಭಿಪ್ರಾಯಿಸಿದರು.

ಎಸ್‌ಡಿಪಿಐ ದ.ಕ. ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮತಾಂತರ ನಿಷೇದ ಮಸೂದೆ ಹಿಂಪಡೆಯಲು ಆಗ್ರಹಿಸಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಕ್ರೈಸ್ತ ಸಮುದಾಯ ಶಾಂತಿ, ಸಹನೆ, ಸಹಬಾಳ್ವೆಗೆ ಒತ್ತು ನೀಡುತ್ತದೆ. ಕ್ರೈಸ್ತ ಮಿಶನರಿಗಳಿಂದ ಮತಾಂತರ ನಡೆಸಲಾಗುತ್ತಿದೆ ಎಂಬ ಆರೋಪ ನಿಜವಾಗಿದ್ದಲ್ಲಿ, 1947ರಲ್ಲಿದ್ದ ಕ್ರೈಸ್ತರ ಜನಸಂಖ್ಯೆ ಸುಮಾರು ಶೇ. 2ಕ್ಕಿಂತ ಶೇ. 40ಕ್ಕೆ ಏರಿಕೆಯಾಗಬೇಕಿತ್ತು. ಆದರೆ ಇಂದಿಗೂ ಕ್ರೈಸ್ತರ ಜನಸಂಖ್ಯೆ ಶೇ. 2ರಷ್ಟು ಮಾತ್ರ ಇರುವುದು ಹೇಗೆ? ಈ ಬಗ್ಗೆ ಆರೋಪಿಸುವವರು ಉತ್ತರಿಸಬೇಕು ಎಂದವರು ಹೇಳಿದರು.

ಪ್ರತಿಭಟನಾ ಸಭೆಯನ್ನು ಮಾತಾಡಿದ ಎಸ್‌ಡಿಪಿಐನ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ ಕ್ರೈಸ್ತ ಧರ್ಮ ಶಿಸ್ತು, ಸಂಸ್ಕಾರವನ್ನು ಕಲಿಸುತ್ತದೆಯೇ ಹೊರತು ಮತಾಂತರ ಮಾಡಲು ಕಲಿಸಲ್ಲ. ಹಾಗಾಗಿಯೇ ಕ್ರೈಸ್ತರಿಂದ ಸ್ಥಾಪಿತವಾದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ಅದೆಷ್ಟೋ ಮಂದಿ ಇಂದು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದರು.

ಪ್ರಧಾನಿ ಮೋದಿಯವರು ಗೋವಾದಲ್ಲಿ ಹೋಗಿ ಡ್ರಾಮ ಮಾಡುತ್ತಾರೆ, ಇಲ್ಲಿನ ಸಂಸದರಿಗೆ ಲೋಕಸಭೆಯಲ್ಲಿ ಮಾತನಾಡಲು ಭಾಷೆಯೇ ಬರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕ್ರೈಸ್ತರು ನೋವು ಅನುಭವಿಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ಕ್ರೈಸ್ತ ಧರ್ಮದವರು ಒಗ್ಗೂಡಿ ಧರ್ಮ ಧ್ವೇಷಿಗಳನ್ನು ಬಗ್ಗು ಬಡಿಯಬೇಕಾಗಿದೆ ಎಂದು ಅವರು ಹೇಳಿದರು.

ಅಖಿಲ ಭಾರತ ಇಮಾಮ್ ಕೌನ್ಸಿಲ್‌ನ ರಾಷ್ಟ್ರೀಯ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ ಮಾತನಾಡಿ, ಎಲ್ಲಾ ಧರ್ಮಗಳು ಕೂಡಿ ಬಾಳುವ ವ್ಯವಸ್ಥೆಯನ್ನು ನಾಶ ಮಾಡುವ ಉದ್ದೇಶದಿಂದ ತನ್ನ ಹಿಡೆನ್ ಅಜೆಂಡವಾದ ಮನುಶಾಸ್ತ್ರವನ್ನು ಜಾರಿಗೊಳಿಸಲು ಇಂತಹ ತಂತ್ರಗಳನ್ನು ಆರ್‌ಎಸ್‌ಎಸ್ ಪ್ರಯೋಗಿಸುತ್ತಿದೆ ಎಂದು ಆರೋಪಿಸಿದರು.

ಸಂವಿಧಾನದಲ್ಲಿ ಮತಾಂತರ ನಿಷೇಧ ಎಂಬ ಪದಕ್ಕೆ ಅವಕಾಶವೇ ಇಲ್ಲ. ಆದರೆ ಜನರಲ್ಲಿ ದ್ವೇಷ, ಶತ್ರುತ್ವ ಭಾವನೆಯನ್ನು ಮೂಡಿಸುತ್ತಿರುವ ಗೂಂಡಾಗಳಿಗೆ ಮತಾಂತರ ಹೆಸರಿನಲ್ಲಿ ಮತ್ತೊಂದು ಕೆಲಸವನ್ನು ನೀಡಲಾಗಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಅವರು ಹೇಳಿದರು.

ರೊಝಾರಿಯೊ ಚರ್ಚ್‌ನ ಉಪಾಧ್ಯಕ್ಷೆ ಎಲಿಝಬೆತ್ ಮಾತನಾಡಿ, 40 ವರ್ಷಗಳಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿರುವ ತಾನು ಅದೆಷ್ಟೋ ಮಕ್ಕಳಿಗೆ, ಅವರ ಮನೆಯವರಿಗೆ ಸಹಾಯ ಮಾಡಿದ್ದೇನೆ. ಆದರೆ ಅಂಹ ಯಾವುದೇ ವಿಚಾರದ ಬಗ್ಗೆ ತಲೆಕೆಡಿಸಿ ಕೊಂಡಿರಲಿಲ್ಲ. ಬದಲಾಗಿ ದುರ್ಬಲರಿಗೆ ನೆರವಾದರೆ ದೇವರು ಮೆಚ್ಚುತ್ತಾರೆ ಎಂಬುದನ್ನು ಧರ್ಮ ಕಲಿಸಿದೆ. ಇದೀಗ ಈ ಮತಾಂತರ ಎಂಬ ಮಸೂದೆ ಜಾರಿಗೆ ತಂದು ಅಂತಹ ಸೇವೆಯಿಂದ ಸಮುದಾಯವನ್ನು ವಂಚಿತರನ್ನಾಗಿಸುವುದು ಬೇಡ ಎಂದರು.

ಎಸ್‌ಡಿಪಿಐನ ವಿಕ್ಟರ್ ಮಾರ್ಟಿಸ್ ಮಾತನಾಡಿ, ಕ್ರೈಸ್ತ ಸಮುದಾಯದಿಂದ ಮಾಡಲಾದ ಅಭಿವೃದ್ಧಿಯನ್ನು ಸಹಿಸದ ಬಿಜೆಪಿ ದ್ವೇಷ ರಾಜಕೀಯ ಮೂಲಕ ಹಣಿಯುವ ಯತ್ನ ನಡೆಸುತ್ತಿದೆ. ಈವರೆಗೂ ಎಲ್ಲವನ್ನೂ ಶಾಂತಿಯಿಂದ ಸಹಿಸಲಾಗಿದೆ. ಆದರೆ ಮುಂದೆ ವಿರೋಧಕ್ಕೆ ಪ್ರತಿಕ್ರೆಯೆ ನೀಡಲೂ ನಾವು ಸಿದ್ಧ ಎಂದರು.

ಪ್ರತಿಭಟನೆಯಲ್ಲಿ ಕೆಥೊಲಿಕ್ ಸಭಾದ ಇನಾಸ್, ಎಸ್‌ಡಿಪಿಐನ ಜಿಲ್ಲಾಧ್ಯಕ್ಷ ಜಲೀಲ್ ಕೃಷ್ಣಾಪುರ ಮೊದಲಾದವರು ಮಾತನಾಡಿದರು. ಪ್ರತಿಭಟನೆಯಲ್ಲಿ ಸಮಾಜ ಸೇವಕಿ ಫಾತಿಮಾ ನಝರೆತ್, ಭಗಿನಿ ಜೆಸಿಂತಾ ಡಿಸೋಜಾ, ಸೆಲೆಸ್ಟಿನ್, ಮನಪಾ ಸದಸ್ಯರಾದ ಮುನೀಬ್ ಬೆಂಗ್ರೆ, ನಸ್ರಿಯಾ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News