ಉಡುಪಿ: ಜ.2ಕ್ಕೆ ಪ್ರಥಮ ಜಿಲ್ಲಾ ಕ್ರೀಡಾ ಸಮ್ಮೇಳನ
ಉಡುಪಿ, ಡಿ.27: ಜಿಲ್ಲೆಯ ಜನರಲ್ಲಿ ದೈಹಿಕ ಕ್ಷಮತೆಯನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡಲು ಸ್ಥಾಪನೆಗೊಂಡಿರುವ ಉಡುಪಿ ಜಿಲ್ಲಾ ಕ್ರೀಡಾ ಭಾರತಿ ವತಿಯಿಂದ ಪ್ರಥಮ ಜಿಲ್ಲಾ ಕ್ರೀಡಾ ಸಮ್ಮೇಳನ ಜ. 2ರಂದು ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕ್ರೀಡಾ ಸಮ್ಮೇಳನ ಸಮಿತಿಯ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜಿಲ್ಲಾ ಮಟ್ಟದ ಸಮ್ಮೇಳನದಲ್ಲಿ ಉಡುಪಿ ಜಿಲ್ಲೆಯ 21 ಕ್ರೀಡಾ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದರು. ಇದರಲ್ಲಿ ಯಾವುದೇ ಸ್ಪರ್ಧೆಗಳಿರುವುದಿಲ್ಲ. ಬದಲು ಕ್ರೀಡಾ ಪ್ರದರ್ಶನ ಹಾಗೂ ಕ್ರೀಡಾ ಗೋಷ್ಠಿಗಳಿರುತ್ತವೆ ಎಂದರು.
ಈ ಕ್ರೀಡಾ ಸಮ್ಮೇಳನದಲ್ಲಿ ಸಮಾಜದ ಎಲ್ಲಾ ವರ್ಗದವರೂ- ಕೃಷಿಕರು, ಕಾರ್ಮಿಕರು, ಶಿಕ್ಷಕರು, ವೈದ್ಯರು, ವಕೀಲರು, ಯುವಕರು, ಯುವತಿಯರು, ಗೃಹಿಣಿಯರು ಭಾಗವಹಿಸಬಹುದಾಗಿದೆ ಎಂದವರು ವಿವರಿಸಿದರು.
ಜ.2ರ ರವಿವಾರ ಬೆಳಗ್ಗೆ 9:30ಕ್ಕೆ ಉಡುಪಿ ಬೋರ್ಡ್ ಹೈಸ್ಕೂಲ್ ಬಳಿಯಿಂದ ಅಜ್ಜರಕಾಡು ಮೈದಾನದವರೆಗೆ ಶೋಭಾಯಾತ್ರೆ ನಡೆಯಲಿದೆ. 10:30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, 11:30ರಿಂದ ಅಪರಾಹ್ನ 2 ರವರೆಗೆ ಕ್ರೀಡಾ ಪ್ರದರ್ಶನ ಹಾಗೂ 3 ರಿಂದ 5 ರವರೆಗೆ ಕ್ರೀಡಾ ಗೋಷ್ಠಿ ನಡೆಯಲಿದೆ. ಬಳಿಕ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಠಾಕೂರ್, ಮಂಗಳೂರು ವಿಭಾಗ ಸಂಯೋಜಕ ಪ್ರಸನ್ನ, ಮಹಿಳಾ ಪ್ರಮುಖ್ ವಿದ್ಯಾ ಸನಿಲ್, ಜಿಲ್ಲಾ ಕಾರ್ಯದರ್ಶಿ ಲಿಂಗಯ್ಯ ಬೈಂದೂರು ಉಪಸ್ಥಿತರಿದ್ದರು.