×
Ad

ಕಾಪು ಪುರಸಭಾ ಚುನಾವಣೆ: ಶೇ. 73.95 ಮತದಾನ

Update: 2021-12-27 22:11 IST

ಕಾಪು : ಕಾಪು ಪುರಸಭಾ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ನಡೆದಿದ್ದು, 23 ವಾರ್ಡ್‍ಗಳಲ್ಲಿ ಒಟ್ಟು ಶೇ. 73.95 ರಷ್ಟು ಮತದಾನ ನಡೆದಿದೆ.

ಕೈಪುಂಜಾಲು ವಾರ್ಡಿನಲ್ಲಿ ಅತಿ ಹೆಚ್ಚುಶೇ. 80.12 ಮತದಾನವಾಗಿದ್ದು,  ಕೊಪ್ಪಲಂಗಡಿ ವಾರ್ಡಿನಲ್ಲಿ ಅತೀ ಕಡಿಮೆ ಶೇ. 65.87 ಮತದಾನವಾಗಿದೆ. ಬೆಳಗ್ಗೆ 9ರವರೆಗೆ ಶೇ. 16ರಷ್ಟು ಮತದಾನವಾಗಿದ್ದು, ಬಳಿಕ ಮಂದಗತಿಯಲ್ಲಿ ಮತದಾನ ನಡೆದಿದ್ದು, ಸಂಜೆಯ ವೇಳೆಗೆ ಮತದಾನ ಬಿರುಸಿನಿಂದ ಕೂಡಿತು. ಸಂಜೆಯವರೆಗೂ ಮತದಾನ ಶಾಂತಿಯುತವಾಗಿ ನಡೆಯಿತು. 

ಪುರಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 23 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಜೆಡಿಎಸ್ 7, ಎಸ್‍ಡಿಪಿಐ 9, ವೆಲ್ಪೇರ್ ಪಾರ್ಟಿ ಇಂಡಿಯಾ 2 ಮತ್ತು ಪಕ್ಷೇತರ 3 ಮಂದಿಯೂ ಸೇರಿದಂತೆ 67 ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. 

ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಹಾಗೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಮತ್ತು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ, ಎಸ್‍ಡಿಪಿಐನ ಪ್ರಮುಖರು ವಿವಿಧ ಮತಗಟ್ಟೆಗಳಿಗೆ ತೆರಳಿ ಕೊನೆಯ ಕ್ಷಣದವರೆಗೂ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದರು. ಮೂಳೂರಿನ ದುಗ್ಗನ್ ತೋಟ ಮತ ಕೇಂದ್ರದಲ್ಲಿ 95 ವರ್ಷದ ಸೀತಾ ಪಿ ಬಂಗೇರಾರವರು ಗಾಲಿಕುರ್ಚಿಯಲ್ಲಿ ಬಂದು ಮತದಾನ ಮಾಡಿದರು. 

ಭಾರತ್ ನಗರ ವಾರ್ಡ್ ಹಿರಿಯ ಮಹಿಳಾ ಮತದಾರರಾದ 82 ವರ್ಷ ಪ್ರಾಯದ ಗಿರಿಜಾ ದೇವಾಡಿಗ ಅವರನ್ನು ಮತಗಟ್ಟೆ ಕೇಂದ್ರದಿಂದ ರಿಕ್ಷಾದವರೆಗೆ ಎತ್ತಿಕೊಂಡು ಹೋಗುವ ಮೂಲಕ ಪೊಲೀಸ್ ಸಿಬ್ಬಂದಿ ಅಶ್ವಿನಿ ಬೀಳಗಿ ಅವರು ಮತಗಟ್ಟೆ ಅಧಿಕಾರಿಗಳ ಮತ್ತು ಸ್ಥಳೀಯರ ಮೆಚ್ಚುಗೆಗೆ ಪಾತ್ರರಾದರು.

ಕಾಪು ಪುರಸಭೆ ವ್ಯಾಪ್ತಿಯ ಕೈಪುಂಜಾಲು ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಕೈಪುಂಜಾಲು ಮತ್ತು ಕರಾವಳಿ ವಾರ್ಡ್, ದಂಡತೀರ್ಥ ವಿದ್ಯಾಸಂಸ್ಥೆಯ ಮತಗಟ್ಟೆಯಲ್ಲಿ ಕೋತಲಕಟ್ಟೆ, ಕಲ್ಯಾ, ಭಾರತ ನಗರ, ದಂಡತೀರ್ಥ, ಪೊಲಿಪುಗುಡ್ಡೆ ವಾರ್ಡ್, ಪೊಲಿಪು ಶಾಲೆ ಮತಗಟ್ಟೆಯಲ್ಲಿ ಪೊಲಿಪು ವಾರ್ಡ್, ಕಾಪು ಪಡು ಶಾಲೆ ಮತಗಟ್ಟೆಯಲ್ಲಿ ಲೈಟ್ ಹೌಸ್, ಕಾಪು ಮಾದರಿ ಶಾಲೆ ವಠಾರದ ಮತಗಟ್ಟೆಯಲ್ಲಿ ಬೀಡು ಬದಿ, ಕಾಪು ಪೇಟೆ, ಕೊಪ್ಪಲಂಗಡಿ ವಾರ್ಡ್, ವಿದ್ಯಾನಿಕೇತನ ಶಾಲೆ ಮತಗಟ್ಟೆಯಲ್ಲಿ ಜನಾರ್ದನ ದೇವಸ್ಥಾನ ವಾರ್ಡ್, ಮೂಳೂರು ಸಿಎಸ್‍ಐ ಶಾಲೆಯ ಮತಗಟ್ಟೆಯಲ್ಲಿ ಮಂಗಳಪೇಟೆ ಮತ್ತು ದುಗ್ಗನ್ ತೋಟ ವಾರ್ಡ್, ಮೂಳೂರು ಸರಕಾರಿ ಶಾಲೆಯಲ್ಲಿ ತೊಟ್ಟಂ ವಾರ್ಡ್, ಮಲ್ಲಾರು ಗ್ರಾಮ ಪಂಚಾಯತ್ ಮತಗಟ್ಟೆಯಲ್ಲಿ ಕೊಂಬಗುಡ್ಡೆ, ಬಡಕರಗುತ್ತು ವಾರ್ಡ್, ಮಲ್ಲಾರು ಜನರಲ್ ಶಾಲೆ ಮತಗಟ್ಟೆಯಲ್ಲಿ ಜನರಲ್, ಗುಜ್ಜಿ ವಾರ್ಡ್, ಉರ್ದು ಶಾಲೆ ಮತಗಟ್ಟೆಯಲ್ಲಿ ಅಹಮದಿ ಮೊಹಲ್ಲಾ ಮತ್ತು ಕುಡ್ತಿಮಾರು ವಾರ್ಡ್ ಹಾಗೂ ಗರಡಿ ಬಳಿಯ ಅಂಗನವಾಡಿ ಮತಗಟ್ಟೆಯಲ್ಲಿ ಗರಡಿ ವಾರ್ಡ್‍ನ ಮತದಾನ ನಡೆಯಿತು.

ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ. ಅವರು ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆಗಳನ್ನು ವೀಕ್ಷಿಸಿದರು. ಚುನಾವಣಾ ವೀಕ್ಷಕ ಮಹಮ್ಮದ್ ಇಸಾಕ್ ಮತ್ತು ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಹಾಗೂ ವಿವಿಧ ಅಧಿಕಾರಿಗಳು ಪ್ರತೀ ಮತಗಟ್ಟೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಹಾಗೂ ಕಾಪು ವೃತ್ತ ನಿರೀಕ್ಷಕ ಪ್ರಕಾಶ್, ಕಾರ್ಕಳ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ನೇತೃತ್ವದಲ್ಲಿ ಕಾಪು, ಪಡುಬಿದ್ರಿ, ಶಿರ್ವ ಪಿಎಸ್‍ಐ, ಕ್ರೈಂ ಎಸ್‍ಐಗಳ ಸಹಿತವಾಗಿ ಪೊಲೀಸ್ ಸಿಬ್ಬಂದಿ ಚುನಾವಣಾ ಕರ್ತವ್ಯದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News