ಗೋಲನ್ ಹೈಟ್ಸ್: ವಸಾಹತು ಪ್ರಮಾಣ ದುಪ್ಪಟ್ಟಿಗೆ ಇಸ್ರೇಲ್ ಚಿಂತನೆ

Update: 2021-12-27 17:45 GMT
ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್(photo:twitter/@naftalibennett)

ಮೆವೊ ಹಮ, ಡಿ.27: ಇಸ್ರೇಲ್ ಆಕ್ರಮಿತ ಗೊಲಾನ್ ಹೈಟ್ಸ್‌ನಲ್ಲಿ ವಸಾಹತುಗಾರರ(ನೆಲೆಸುವವರ) ಪ್ರಮಾಣವನ್ನು ದುಪ್ಪಟ್ಟುಗೊಳಿಸಲು ಬಯಸಿರುವುದಾಗಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್ ರವಿವಾರ ಹೇಳಿದ್ದಾರೆ.

ಈ ವಲಯದಲ್ಲಿ ಹಲವು ಮಿಲಿಯನ್ ಹೂಡಿಕೆ ಮಾಡುವ ಮೂಲಕ 5 ದಶಕಗಳಿಗೂ ಹಿಂದೆ ಸಿರಿಯಾದಿಂದ ವಶಪಡಿಸಿಕೊಂಡಿದ್ದ ಗೊಲನ್ ಹೈಟ್ಸ್‌ನ ಮೇಲಿನ ತನ್ನ ನಿಯಂತ್ರಣ ಮತ್ತಷ್ಟು ಬಲಗೊಳಿಸುವ ಇಸ್ರೇಲ್‌ನ ಉದ್ದೇಶ ಇದಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಆಡಳಿತ ಗೊಲನ್ ಹೈಟ್ಸ್ ಮೇಲಿನ ಇಸ್ರೇಲ್ ಸಾರ್ವಭೌಮತ್ವಕ್ಕೆ ಮಾನ್ಯತೆ ನೀಡಿರುವುದು ಹಾಗೂ ಈ ನಿರ್ಧಾರವನ್ನು ಪ್ರಶ್ನಿಸುವುದಿಲ್ಲ ಎಂದು ಬೈಡನ್ ಆಡಳಿತ ಘೋಷಿಸಿರುವುದು ಈ ವಲಯದಲ್ಲಿ ಹೊಸ ಹೂಡಿಕೆಯ ನಿರ್ಧಾರಕ್ಕೆ ಉತ್ತೇಜನ ನೀಡಿದೆ ಎಂದು ಬೆನೆಟ್ ಹೇಳಿದ್ದಾರೆ.

ವಸಾಹತು ವ್ಯಾಪ್ತಿಗೆ ಸಂಬಂಧಿಸಿದಂರೆ ದೀರ್ಘ ಮತ್ತು ಸ್ಥಿರ ಅವಧಿಯ ಬಳಿಕ ಈಗ ನಮ್ಮ ಗುರಿ ಗೊಲಾನ್ ಹೈಟ್ಸ್‌ನಲ್ಲಿ ವಸಾಹತುಗಾರರ ಪ್ರಮಾಣವನ್ನು ಹೆಚ್ಚಿಸುವುದಾಗಿದೆ . ಸಿರಿಯಾದಲ್ಲಿ ಈಗ ನಡೆಯುತ್ತಿರುವ ಯುದ್ಧವು ಗೊಲಾನ್  ಹೈಟ್ಸ್‌ನ ಮೇಲೆ ಇಸ್ರೇಲ್ ನಿಯಂತ್ರಣದ ಪರಿಕಲ್ಪನೆಯನ್ನು ಇನ್ನಷ್ಟು ಸ್ವೀಕಾರಾರ್ಹಗೊಳಿಸಿದೆ ಎಂದು ರವಿವಾರ ಗೊಲಾನ್ ಹೈಟ್ಸ್‌ನಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಬೆನೆಟ್ ಹೇಳಿದರು.

ಈ ನಿರ್ಧಾರದಿಂದ ಇಸ್ರೇಲ್ ಜತೆಗಿನ ಶಾಂತಿ ಮಾತುಕತೆಗೆ ತೊಡಕಾಗುವ ಸಾಧ್ಯತೆಯಿದೆ. 1967ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಈ ಪ್ರದೇಶವನ್ನು ವಶಪಡಿಸಿಕೊಂಡಿದ್ದ ಇಸ್ರೇಲ್, ಇಲ್ಲಿ ಜನರನ್ನು ನೆಲೆಗೊಳಿಸಿ ಕೃಷಿ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಜತೆಗೆ ಈ ಪ್ರದೇಶವನ್ನು ಆಕರ್ಷಣೀಯ ಪ್ರವಾಸೀ ತಾಣವನ್ನಾಗಿ ಅಭಿವೃದ್ಧಿಪಡಿಸಿದೆ. ಗೊಲಾನ್ ಹೈಟ್ಸ್ ಇಸ್ರೇಲ್‌ಗೆ ಸೇರಿದ್ದು ಎಂದು ಮಾನ್ಯತೆ ನೀಡಿದ ಪ್ರಥಮ ದೇಶ ಅಮೆರಿಕ. ಇತರ ಅಂತರಾಷ್ಟ್ರೀಯ ಸಮುದಾಯ ಈ ಪ್ರದೇಶವನ್ನು ಇಸ್ರೇಲ್ ಆಕ್ರಮಿತ ಪ್ರದೇಶ ಎಂದೇ ಗುರುತಿಸುತ್ತದೆ.

ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ಗೊಲಾನ್ ಹೈಟ್ಸ್‌ನ ಮೇಲಿನ ನಿಯಂತ್ರಣದಿಂದ ಇರಾನ್ ಹಾಗೂ ಸಿರಿಯಾದಲ್ಲಿ ಯುದ್ಧದಲ್ಲಿ ನಿರತರಾಗಿರುವ ಇರಾನ್‌ನ ಮಿತ್ರಪಡೆಗಳಿಂದ ಸ್ವಯಂ ರಕ್ಷಣೆಗೆ ಅನುಕೂಲವಾಗಿದೆ ಎಂದು ಇಸ್ರೇಲ್ ಹೇಳಿದೆ. ಇಸ್ರೇಲ್ ಇಲ್ಲಿ ಸಾವಿರಾರು ನಾಗರಿಕರನ್ನು ನೆಲೆಗೊಳಿಸಿದೆ. ಜತೆಗೆ, ಈ ಹಿಂದೆ ಸಿರಿಯಾದ ನಾಗರಿಕರಾಗಿದ್ದ ಹಲವರೂ ಇಲ್ಲಿದ್ದು ಇಸ್ರೇಲ್‌ನ ನಿಯಂತ್ರಣವನ್ನು ವಿರೋಧಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News