×
Ad

ಜನರಿಗೆ ಶಾಂತಿ, ಸುವ್ಯವಸ್ಥೆ ಕಲ್ಪಿಸುವುದು ಆದ್ಯ ಕರ್ತವ್ಯ-ನ್ಯಾ. ಅಬ್ದುಲ್ ನಝೀರ್

Update: 2021-12-28 17:24 IST

ಪುತ್ತೂರು: ಶಾಂತಿ ಮತ್ತು ಸುವ್ಯವಸ್ಥೆ ಇಲ್ಲದಿದಲ್ಲಿ ಸಮಾಜ ನೆಮ್ಮದಿ ಕಾಣಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸುವುದು ಆದ್ಯ ಕರ್ತವ್ಯಾಗಿದೆ. ಅದಕ್ಕಾಗಿ ಮೂಲಭೂತ ವ್ಯವಸ್ಥೆಗಳೊಂದಿಗೆ ಹಲವಾರು ಕರ್ತವ್ಯಗಳನ್ನು ಪರಿಪಾಲನೆ ಮಾಡಬೇಕಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಹೇಳಿದರು.

ಅವರು ಮಂಗಳವಾರ ಪುತ್ತೂರು ನಗರದ ಆನೆಮಜಲು ಎಂಬಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ನ್ಯಾಯಾಲಯ ಸಂಕೀರ್ಣದ 2ನೇ ಹಂತದ ಕಟ್ಟಡ ಹಾಗೂ ದರ್ಬೆಯಲ್ಲಿ ನಿರ್ಮಾಣಗೊಳ್ಳಲಿರುವ ನ್ಯಾಯಾಧೀಶರ ವಸತಿ ಗೃಹಕ್ಕೆ ಶಿಲನ್ಯಾಸ ನೆರವೇರಿಸಿ, ಆನೆಮಜಲಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ವಕೀಲರ ಭವನವನ್ನು ಉದ್ಘಾಟಿಸಿ ಮಾತನಾಡಿದರು.

ವ್ಯಾಜ್ಯ ಎಂಬುದು ಕ್ಯಾನ್ಸರ್ ರೋಗದಂತೆ. ವ್ಯಾಜ್ಯವಿರುವಲ್ಲಿ ಶಾಂತಿಯನ್ನು ಕಾಣಲು ಸಾಧ್ಯವಿಲ್ಲ. ಅದನ್ನು ಪರಿಹರಿಸುವ ನಿಟ್ಟಿನಲ್ಲಿ ನ್ಯಾಯಾಲಯದ ವ್ಯವಸ್ಥೆ ಅನಿವಾರ್ಯವಾಗಿದೆ. ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಸಂಬಂಧಿಸಿದ ಎಲ್ಲಾ ಬೇಡಿಕೆಗಳನ್ನು ಸಕಾಲದಲ್ಲಿ ಈಡೇರಿಸುತ್ತಿದೆ. ಹೆಣ್ಣು ಮಕ್ಕಳು ಇದೀಗ ವಕೀಲರಾಗಿ ಹೆಚ್ಚು ಕಂಡು ಬರುತ್ತಿದ್ದು, ಮಹಿಳಾ ವಕೀಲರಿಗಾಗಿ ಪೂರಕ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಕೆ. ಸೋಮಶೇಖರ್ ಮಾತನಾಡಿ ವಕೀಲರು ಬುದ್ದಿವಂತಿಕೆಯ ಜೊತೆಯಲ್ಲಿ ಹೃದಯವಂತಿಕೆ ಬೆಳೆಸಿಕೊಂಡು ಮುಂದುವರಿಯಬೇಕು. ಸತ್ಯದ ಹುಡುಕಾಟ ಮಾಡುವುದರೊಂದಿಗೆ ಸತ್ಯವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಇದಕ್ಕಾಗಿ ಎಲ್ಲಾ ಪೂರಕ ವ್ಯವಸ್ಥೆಗಳನ್ನು ಬಳಸಿಕೊಳ್ಳಬೇಕು ಎಂದರು.

ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ ಭಾರತವು ಜಗತ್ತಿಗೆ ನಾಗರೀಕತೆಯನ್ನು ಪರಿಚಯಿಸಿದ ದೇಶವಾಗಿದೆ. ಈ ಪರಂಪರೆಯನ್ನು ಮುಂದುವರಿಸುವ ಕೆಲಸವಾಗಬೇಕಾಗಿದೆ. ಪುತ್ತೂರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ನ್ಯಾಯಾಲಯ ಸಂಕೀರ್ಣವು ಪುತ್ತೂರಿನ ಹಿರಿಮೆಗೊಂದು ಗರಿಯಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇ ಗೌಡ ಮಾತನಾಡಿ ಸಮಾಜದಲ್ಲಿ ವಕೀಲರ ಪಾತ್ರ ಮಹತ್ತರವಾಗಿದೆ. ಆದರೆ ಕಾರ್ಯಾಂಗಳು ರೂಪಿಸುವ ಕಾಯಿದೆಗಳ ಬಗ್ಗೆ  ವಕೀಲರಿಂದ ಚರ್ಚೆ, ತರ್ಕಗಳು ನಡೆಯದಿರುವುದು ದುರಂತವಾಗಿದೆ ಎಂದರು. 

ಕರ್ನಾಟಕ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ನ್ಯಾಯಮೂರ್ತಿ ಶಿವಶಂಕರೇ ಗೌಡ, ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಝ್, ಎಸ್.ವಿಶ್ವಜಿತ್ ಶೆಟ್ಟಿ, ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನ್‍ರಲ್ ಅರುಣ್ ಶ್ಯಾಮ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷ ಎಲ್.ಶ್ರೀನಿವಾಸ ಬಾಬು, ಮಾಜಿ ಅಧ್ಯಕ್ಷ ಪಿ.ಪಿ. ಹೆಗ್ಡೆ, ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರ ಕಾಂತರಾಜ್ ಬಿ.ಟಿ ಮತ್ತಿತರರು ಮಾತನಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಸ್. ವಿಶ್ವಜಿತ್ ಶೆಟ್ಟಿ ಮತ್ತು ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನ್‍ರಲ್ ಅರುಣ್ ಶ್ಯಾಮ್ ಅವರನ್ನು ಸನ್ಮಾನಿಸಲಾಯಿತು. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಮೋದ್ ಮತ್ತು ಕಂಟ್ರಾಕ್ಟರ್ ಆಸಿಫ್ ಸೀಕೋ ಅವರನ್ನು ಗೌರವಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆ.ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮುರಳೀಧರ ರೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ ಎನ್.ಎಸ್ ವಂದಿಸಿದರು. ನ್ಯಾಯವಾದಿ ಕೆ.ಆರ್. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News