×
Ad

ಕೋಟ ಪಿಎಸ್ಸೈ, ಐವರು ಪೊಲೀಸ್ ಸಿಬ್ಬಂದಿ ಠಾಣೆಯಿಂದ ಸ್ಥಳಾಂತರ: ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್

Update: 2021-12-28 19:29 IST
ಎಸ್ಪಿ ವಿಷ್ಣುವರ್ಧನ್

ಉಡುಪಿ, ಡಿ.28: ಸೋಮವಾರ ರಾತ್ರಿ ಬ್ರಹ್ಮಾವರ ತಾಲೂಕು ಕೋಟತಟ್ಟು ಬಾರಿಕೆರೆಯ ಕೊರಗ ಕಾಲನಿಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಯುತಿದ್ದ ಮನೆಗೆ ನುಗ್ಗಿ ಅಲ್ಲಿ ಸೇರಿದ್ದ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರ ಮೇಲೆ ಲಾಠಿ ಪ್ರಹಾರ ನಡೆಸಿದ ಕೋಟ ಠಾಣೆಯ ಠಾಣಾಧಿಕಾರಿ ಸಂತೋಷ್ ಬಿ.ಪಿ. ಹಾಗೂ ಐವರು ಸಿಬ್ಬಂದಿಗಳನ್ನು ಮುಂದಿನ ಆದೇಶದವರೆಗೆ ಠಾಣೆಯಿಂದ ಸ್ಥಳಾಂತರಿಸಲಾಗಿದ್ದು, ಇಡೀ ಘಟನೆಯ ಕುರಿತು ಉಡುಪಿ ಡಿವೈಎಸ್ಪಿಯವರಿಂದ ತನಿಖೆಗೆ ಆದೇಶಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ಘಟನೆಯ ಕುರಿತು ವಿವರಿಸಲು ಇಂದು ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯ ಕುರಿತು ಮಾಹಿತಿ ಅರಿತ ತಕ್ಷಣ ಠಾಣಾಧಿಕಾರಿ ಹಾಗೂ ಐವರು ಸಿಬ್ಬಂದಿಯನ್ನು ಅಲ್ಲಿಂದ ಸ್ಥಳಾಂತರಿಸಿದ್ದು, ತನಿಖೆ ಮುಗಿದು, ಮುಂದಿನ ನಿರ್ಧಾರ ಕೈಗೊಳ್ಳುವವರೆಗೆ ಅವರು ಜಿಲ್ಲಾ ಪೊಲೀಸ್ ಕಚೇರಿಯಲ್ಲಿರುವರು ಎಂದರು.

ಉಡುಪಿ ವಿಭಾಗ ಡಿವೈಎಸ್ಪಿ ಸುಧಾಕರ್ ಅವರು ಘಟನೆಯ ಕುರಿತು ಸಮಗ್ರ ತನಿಖೆ ನಡೆಸುತಿದ್ದು, ನಾಳೆ ಸಂಜೆಯೊಳಗೆ ವರದಿ ನೀಡುವಂತೆ ಅವರಿಗೆ ತಿಳಿಸಲಾಗಿದೆ. ಈ ವರದಿಯನ್ನು ತಾನು ಪಶ್ಚಿಮ ವಲಯ ಐಜಿಪಿ ಅವರಿಗೆ ಒಪ್ಪಿಸಲಿದ್ದು, ಅವರು ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದ್ದಾರೆ ಎಂದರು.

ನಿನ್ನೆ ರಾತ್ರಿ ನಡೆದ ಘಟನೆಯ ಬಗ್ಗೆ ವಿವರಿಸಿದ ಎಸ್ಪಿ, ಬಾರಿಕೆರೆಯ ಕೊರಗ ಕಾಲನಿಯ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆದಿದ್ದು, ಅಲ್ಲಿನ ಧ್ವನಿವರ್ಧಕ, ಡಿಜೆ ಬಳಕೆಯ ಕುರಿತು ಸಾರ್ವಜನಿಕರಿಂದ ದೂರು ಬಂದಿತ್ತು. ಅದರಂತೆ ಪೊಲೀಸರು ಸಂಬಂಧಿಸಿದ ಮನೆಗೆ ತೆರಳಿ ಧ್ವನಿ ತಗ್ಗಿಸುವಂತೆ ಸೂಚನೆ ನೀಡಿ ಬಂದಿದ್ದರು. ಸ್ವಲ್ಪ ಹೊತ್ತಿನ ಬಳಿಕ ಮತ್ತೊಮ್ಮೆ ದೂರು ಬಂದ ಕಾರಣ ಪಿಎಸ್‌ಐ ಅವರೇ ಸಿಬ್ಬಂದಿ ಸಮೇತ ಸ್ಥಳಕ್ಕೆ ತೆರಳಿದ್ದು, ಅಲ್ಲಿ ಮನೆಯವರೊಂದಿಗೆ ಮಾತಿನ ಚಕಮಕಿ ನಡೆದಿದೆ ಎಂದು ಮಾಹಿತಿ ಬಂದಿದೆ ಎಂದರು.

ಆದರೆ ಈ ವೇಳೆ ಪೊಲೀಸರು ಯಾವುದೇ ಪ್ರಚೋದನೆ ಇಲ್ಲದೇ ನೆರೆದವರ ಮೇಲೆ ಲಾಠಿ ಪ್ರಹಾರ ನಡೆಸಿದ್ದು, ಹೆಂಗಸರು, ಮಕ್ಕಳೆನ್ನದೇ ಎಲ್ಲರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ದೂರು ಬಂದಿದ್ದು, ತಕ್ಷಣ ಇಡೀ ಘಟನೆಯ ಬಗ್ಗೆ ತನಿಖೆ ನಡೆಸಲು ಡಿವೈಎಸ್ಪಿ ಅವರನ್ನು ಕಳುಹಿಸಿದ್ದಾಗಿ ತಿಳಿಸಿದರು. ಅಲ್ಲದೇ ಪಿಎಸ್‌ಐ ಹಾಗೂ ಐವರು ಸಿಬ್ಬಂದಿಗಳನ್ನು ಠಾಣೆಯಿಂದ ತೆರವುಗೊಳಿಸಲು ಆದೇಶ ನೀಡಿದ್ದಾಗಿ ವಿಷ್ಣುವರ್ಧನ್ ವಿವರಿಸಿದರು. ಮುಂದಿನ ಆದೇಶದವರೆಗೆ ಇವರೆಲ್ಲರೂ ಡಿಪಿಓದಲ್ಲಿರುತ್ತಾರೆ ಎಂದರು.

ಜಿಲ್ಲೆಯ ಮೂಲನಿವಾಸಿಗಳಾಗಿದ್ದು ಬುಡಕಟ್ಟು ಸಮುದಾಯಕ್ಕೆ ಸೇರಿರುವ ಕೊರಗರು ಅತ್ಯಂತ ಮುಗ್ಧರಾಗಿದ್ದು, ಅಂಥವರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯದ ಕುರಿತು, ಕೆಲವರನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿ ಲಾಕ್‌ಅಪ್‌ಗೆ ಹಾಕಿದ ಔಚಿತ್ಯದ ಕುರಿತು ಹಲವು ಪ್ರಶ್ನೆಗಳನ್ನು ಪತ್ರಕರ್ತರು ಕೇಳಿದಾಗ, ಎಲ್ಲಾ ವಿಷಯದ ಕುರಿತು ಡಿವೈಎಸ್ಪಿ ಅವರಿಂದ ತನಿಖೆ ನಡೆಯಲಿದೆ. ವರದಿ ನೋಡಿ ನಿಮಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದರು.

ನಂಬಿಕೆ ಇಡಿ: ಈ ಹಂತದಲ್ಲಿ ಕೊರಗ ಸಮುದಾಯಕ್ಕೆ ನೀವು ಏನು ಹೇಳ ಬಯಸುತ್ತೀರಿ ಎಂದು ಕೇಳಿದಾಗ, ಕೊರಗ ಸಮುದಾಯದ ಬಗ್ಗೆ ತನಗೆ ಗೊತ್ತಿದೆ. ಅವರು ಮುಗ್ಧರು ಹಾಗೂ ಕಾನೂನನ್ನು ಯಾವತ್ತೂ ಮೀರುವವರಲ್ಲ. ಅವರಲ್ಲಿ ನನ್ನ ಮನವಿ ಏನೆಂದರೆ, ಇಲಾಖೆಯ ಮೇಲೆ ನಂಬಿಕೆ ಇಡಿ. ನಿಮಗೆ ಅನ್ಯಾಯ ಆಗಲು ಬಿಡುವುದಿಲ್ಲ. ತನಿಖೆ ನಡೆಸಿ ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುತ್ತೇನೆ ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News