ಮಂಗಳೂರು: ‘ರಾತ್ರಿ ಕರ್ಫ್ಯೂ’ ವಿರುದ್ಧ ಸಾರ್ವಜನಿಕರ ತೀವ್ರ ಆಕ್ರೋಶ
ಮಂಗಳೂರು, ಡಿ.28: ಕೊರೋನ ರೂಪಾಂತರಿ ಒಮೈಕ್ರಾನ್ ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯಾದ್ಯಂತ ಜಾರಿಗೊಳಿಸಲಾದ ರಾತ್ರಿ ಕರ್ಫ್ಯೂ ಬಗ್ಗೆ ನಗರದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೊರೋನದಿಂದಾಗಿ ಎರಡು ಬಾರಿ ಲಾಕ್‌ಡೌನ್ ಎದುರಿಸಿ ಇನ್ನೇನೋ ವ್ಯಾಪಾರ ವಹಿವಾಟು ಚುರುಕುಗೊಳ್ಳುವ ಹಂತದಲ್ಲಿರುವಾಗಲೇ ರಾಜ್ಯ ಸರಕಾರವು ಡಿ.28ರಿಂದ ಅನ್ವಯಗೊಂಡಂತೆ 2022ರ ಜನವರಿ 7ರವರೆಗೆ ಪ್ರತಿ ದಿನ ರಾತ್ರಿ 10ರಿಂದ 5 ಗಂಟೆ ವರೆಗೆ ರಾತ್ರಿ ಕರ್ಫ್ಯೂ ಹೇರಿರುವುದು ಸಮಂಜಸವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೆ ನಗರದ ಪ್ರಮುಖ ಲಾಡ್ಜ್‌ಗಳಲ್ಲಿನ ರೂಮ್‌ಗಳನ್ನು ಬುಕ್ಕಿಂಗ್ ಮಾಡಿರುವುದನ್ನು ರದ್ದುಪಡಿಸಲಾಗಿದೆ. ಅನೇಕ ಮಂದಿ ಆನ್‌ಲೈನ್, ಫೋನ್, ಮೆಸೇಜ್ ಮೂಲಕ ರೂಮ್‌ಗಳನ್ನು ಈ ಹಿಂದೆ ಬುಕ್ಕಿಂಗ್ ಮಾಡಿದ್ದರು. ಅದರಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ, ಪ್ರವಾಸಿತಾಣಗಳು ಮತ್ತು ಧಾರ್ಮಿಕ ಕೇಂದ್ರಗಳಿಗೆ ಭೇಟಿ ಮಾಡುವವರ ಸಂಖ್ಯೆ ಹೆಚ್ಚಿತ್ತು. ಸರಕಾರ ರಾತ್ರಿ ಕರ್ಫ್ಯೂ ಹೇರಿದೊಡನೆ ಆತಂಕಗೊಂಡ ಹೊರ ರಾಜ್ಯ ಮತ್ತು ಹೊರ ಜಿಲ್ಲೆಯ ಪ್ರವಾಸಿಗರು ಬುಕ್ಕಿಂಗ್ ಮಾಡಲಾದ ರೂಮ್‌ಗಳನ್ನು ರದ್ದುಪಡಿಸಿದ್ದಾರೆ. ಇದರಿಂದ ಹೊಟೇಲ್/ಲಾಡ್ಜ್ ಮಾಲಕರಿಗೆ ಹೊಡೆತ ಬಿದ್ದಿದೆ. ಅದಲ್ಲದೆ ಟ್ಯಾಕ್ಸಿ ಕ್ಯಾಬ್, ಆಟೋ ರಿಕ್ಷಾದ ಚಾಲಕ/ಮಾಲಕರಿಗೂ ಈ ರಾತ್ರಿ ಕರ್ಫ್ಯೂ ಸಮಸ್ಯೆಯಾಗಿ ಪರಿಣಮಿಸಿದೆ.
ದ.ಕ.ಜಿಲ್ಲೆಯ ಅದರಲ್ಲೂ ನಗರದ ವ್ಯಾಪಾರ-ವಹಿವಾಟುಗಳು ಚುರುಕುಗೊಳ್ಳತೊಡಗಿದೆ. ಎರಡು ವರ್ಷದಲ್ಲಾದ ಆರ್ಥಿಕ ನಷ್ಟವನ್ನು ಸರಿದೂಗಿಸಲು ಜನಸಾಮಾನ್ಯರು, ವ್ಯಾಪಾರಿಗಳು, ಉದ್ಯಮಿಗಳು ಹೆಣಗಾಡುತ್ತಿರುವಾಗಲೇ ಸರಕಾರದ ಹೊಸ ಆದೇಶವು ವ್ಯಾಪಕ ಆಕ್ರೋಶ, ಅಸಮಾಧಾನಕ್ಕೆ ಕಾರಣವಾಗಿದೆ.
ವಾರ್ಷಿಕೋತ್ಸವ, ಯಕ್ಷಗಾನಕ್ಕೂ ಆತಂಕ
ತುಳುನಾಡಿನಲ್ಲಿ ಯಕ್ಷಗಾನ, ಕಂಬಳ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಈ ಅವಧಿಯಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಇದೀಗ ರಾತ್ರಿ ಕರ್ಫ್ಯೂನಿಂದ ಮತ್ತೆ ಆತಂಕ ಸೃಷ್ಟಿಯಾಗಿದೆ. ಕಲೆಯನ್ನೇ ನಂಬಿಕೊಂಡಿರುವ ಕಲಾವಿದರು ಕಂಗಾಲಾಗಿದ್ದಾರೆ. ಕೆಲವು ಕಡೆ ರಾತ್ರಿ ನಡೆಯಬೇಕಿದ್ದ ಯಕ್ಷಗಾನವನ್ನು ಅಪರಾಹ್ನ ಆರಂಭಿಸಿ ರಾತ್ರಿ 9ರೊಳಗೆ ಮುಗಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.
''ನಮ್ಮ ಸಮಸ್ಯೆಗೆ ಲಾಕ್‌ಡೌನ್. ಕರ್ಫ್ಯೂ ಪರಿಹಾರವಲ್ಲ. ಮೊದಲೇ ನಾವು ಬಾಡಿಗೆ ಇಲ್ಲದೆ ನೂರಾರು ಸಮಸ್ಯೆ ಎದುರಿಸುತ್ತಿದ್ದೇವೆ. ಒಂದಷ್ಟು ಆರ್ಥಿಕ ಚೇತರಿಕೆಯಾಗುತ್ತಿರುವಾಗಲೇ ಸರಕಾರ ನಮ್ಮ ಹೊಟ್ಟೆಗೆ ಹೊಡೆದಿದೆ. ಅದೂ ಸೀಸನ್ ಅವಧಿಯಲ್ಲಿ. ಚುನಾವಣೆ ಸಂದರ್ಭ ಇಲ್ಲದ ಆತಂಕ ಈಗ ಎದುರಾಗುತ್ತಿರುವುದು ವಿಚಿತ್ರ. ಸರಕಾರ ರಾತ್ರಿ ಕರ್ಫ್ಯೂ ಘೊಷಿಸಿದೊಡನೆ ಪ್ರವಾಸಿಗರು, ಪ್ರಯಾಣಿಕರು ಆತಂಕಿತರಾಗಿದ್ದಾರ. ಆನ್‌ಲೈನ್ ಬುಕ್ಕಿಂಗ್‌ಗಳು ರದ್ದಾಗುತ್ತಿದೆ. ಹೀಗಾದರೆ ನಾವು ಬದುಕುವುದು ಹೇಗೆ?''
- ಅಲ್ತಾಫ್ ಉಳ್ಳಾಲ
ಟ್ಯಾಕ್ಸಿ ಚಾಲಕ-ಮಂಗಳೂರು
''ಎರಡು ವರ್ಷ ನಮ್ಮ ಆದಾಯದ ಮೂಲಕ್ಕೆ ಹೊಡೆತ ಬಿದ್ದಿತ್ತು. ಮೊದಲೇ ನಷ್ಟದಲ್ಲಿದ್ದ ನಾವು ಕಳೆದ ಒಂದು ತಿಂಗಳಿನಿಂದ ಚೇತರಿಸಿಕೊಳ್ಳತೊಡಗಿದ್ದೆವು. ಅಷ್ಟರಲ್ಲೇ ಸರಕಾರ ಮತ್ತೆ ರಾತ್ರಿ ಕರ್ಫ್ಯೂ ಹೇರಿರುವುದು ಸರಿಯಲ್ಲ. ಹೊರ ಜಿಲ್ಲೆ, ಹೊರ ರಾಜ್ಯದಿಂದ ನಮಗೆ ಗ್ರಾಹಕರು ಬರುವುದೇ ರಾತ್ರಿ 10ರಿಂದ 12ರ ವೇಳೆಗೆ. ಸರಕಾರ 10ರಿಂದ ಕರ್ಫ್ಯೂ ಜಾರಿಗೊಳಿಸಿದರೆ ನಮಗೇನು ಮಾಡಲು ಸಾಧ್ಯ? ಈಗಾಗಲೆ ಹಲವರು ರೂಮ್‌ಗಳನ್ನು ಕ್ಯಾನ್ಸಲ್ ಮಾಡಿಸಿದ್ದಾರೆ. ಇದರಿಂದ ನಮ್ಮ ನಷ್ಟ ತುಂಬಿಕೊಡುವವರು ಯಾರು?''
- ಅಮಿತ್,
ಮಂಗಳೂರಿನ ಲಾಡ್ಜೊಂದರ ಮ್ಯಾನೇಜರ್
''ಜನರಿನ್ನೂ ಕೋವಿಡ್ ಸಮಸ್ಯೆಯ ಸುಳಿಯಿಂದ ಹೊರ ಬಂದಿಲ್ಲ. ಸಹಜ ಸ್ಥಿತಿಗೆ ಮರಳುತ್ತಿರುವಾಗಲೇ ಮತ್ತೆ ರಾತ್ರಿ ಕರ್ಫ್ಯೂ ಹೇರಿ ಸರಕಾರವೇ ಸಮಸ್ಯೆ ಹುಟ್ಟು ಹಾಕಿವೆ. ಮೊದಲೇ ಬಾಡಿಗೆ ಸರಿಯಾಗಿ ಆಗುತ್ತಿಲ್ಲ. ಇನ್ನೀಗ ಸಮಸ್ಯೆ, ಸಾಲದ ಸುಳಿ ಹೆಚ್ಚಾಗಲಿದೆ''.
-ಪ್ರಶಾಂತ್,
ರಿಕ್ಷಾ ಚಾಲಕ, ಮಂಗಳೂರು