×
Ad

ಬಾಹ್ಯಾಕಾಶದಲ್ಲಿ ಉಪಗ್ರಹಗಳ ನಿಕಟ ಮುಖಾಮುಖಿ: ಅಮೆರಿಕವನ್ನು ತರಾಟೆಗೆತ್ತಿಕೊಂಡ ಚೀನಾ

Update: 2021-12-28 20:49 IST
ಸಾಂದರ್ಭಿಕ ಚಿತ್ರ:PTI

ಬೀಜಿಂಗ್, ಡಿ.28: ಬಾಹ್ಯಾಕಾಶದಲ್ಲಿ ಚೀನಾದ ಅಂತರಿಕ್ಷ ನಿಲ್ದಾಣ ಹಾಗೂ ಉಪಗ್ರಹಗಳು ಮತ್ತು ಅಮೆರಿಕದ ಎಲಾನ್ ಮಸ್ಕ್ ನಿರ್ವಹಿಸುವ ಸ್ಪೇಸ್ಎಕ್ಸ್ ಉಪಗ್ರಹ ಸಮೂಹಗಳು ಅಂತರಿಕ್ಷದಲ್ಲಿ 2 ಬಾರಿ ನಿಕಟ ಮುಖಾಮುಖಿಯಾಗಿದ್ದು ಈ ಬಗ್ಗೆ ಅಮೆರಿಕವನ್ನು ತರಾಟೆಗೆತ್ತಿಕೊಂಡಿರುವ ಚೀನಾ, ಅಮೆರಿಕ ಬಾಹ್ಯಾಕಾಶದಲ್ಲಿ ಅಸುರಕ್ಷಿತ ಮತ್ತು ಬೇಜವಾಬ್ದಾರಿಯ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಟೀಕಿಸಿದೆ.

ಜುಲೈಯಲ್ಲಿ ಸ್ಟಾರ್‌ಲಿಂಕ್ ಉಪಗ್ರಹ ಮತ್ತು ಅಕ್ಟೋಬರ್‌ನಲ್ಲಿ ಮತ್ತೊಂದು ಉಪಹ್ರಹಕ್ಕೆ ಡಿಕ್ಕಿಯಾಗವುದನ್ನು ತಪ್ಪಿಸಲು ಚೀನಾದ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದ ಪಥವನ್ನು ಬದಲಾಯಿಸಬೇಕಾಯಿತು. ಈ ಪ್ರಕರಣಗಳು ಚೀನಾದ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳ ಜೀವನ ಮತ್ತು ಆರೋಗ್ಯಕ್ಕೆ ಅಪಾಯದ ಸೂಚನೆ ನೀಡಿದೆ ಎಂದು ಚೀನಾ ಕಳೆದ ತಿಂಗಳು ವಿಶ್ವಸಂಸ್ಥೆಗೆ ಸಲ್ಲಿಸಿದ ಮಾಹಿತಿಯಲ್ಲಿ ಉಲ್ಲೇಖಿಸಿದೆ. ಅಮೆರಿಕವು ಅಂತರಾಷ್ಟ್ರೀಯ ಒಪ್ಪಂದದಡಿಯ ತನ್ನ ಬದ್ಧತೆಯನ್ನು ಕಡೆಗಣಿಸಿ ಗಗನಯಾತ್ರಿಗಳ ಬದುಕು ಮತ್ತು ಆರೋಗ್ಯಕ್ಕೆ ಅಪಾಯ ತಂದಿದೆ ಎಂದು ಚೀನಾದ ವಿದೇಶ ಇಲಾಖೆಯ ವಕ್ತಾರ ಝಾವೊ ಲಿಜಿಯನ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಸ್ಪೇಸ್ಎಕ್ಸ್ ಎಂಬುದು ಅಮೆರಿಕದ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾಗಿದೆ. ಸುಮಾರು 2000 ಉಪಗ್ರಹಗಳ ಸಮೂಹವನ್ನು ಅಂತರಿಕ್ಷಕ್ಕೆ ಉಡಾಯಿಸಿರುವ ಸ್ಪೇಸ್ಎಕ್ಸ್ ಈ ಮೂಲಕ ಭೂಮಿಯ ಬಹುತೇಕ ಸ್ಥಳಗಳಿಗೆ ಸುಲಭವಾಗಿ ಇಂಟರ್ನೆಟ್ ಒದಗಿಸುವ ಉದ್ದೇಶ ಹೊಂದಿದೆ. ಸ್ಟಾರ್‌ಲಿಂಕ್ ಎಂಬುದು ಸ್ಪೇಸ್ಎಕ್ಸ್ ನ ಒಂದು ವಿಭಾಗವಾಗಿದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ಒಪ್ಪಂದದ ಸದಸ್ಯರು ತಮ್ಮ ದೇಶದ ಖಾಸಗಿ ಸಂಸ್ಥೆಗಳು ಬಾಹ್ಯಾಕಾಶದಲ್ಲಿ ನಡೆಸುವ ಪ್ರಕ್ರಿಯೆಗಳಿಗೆ ಜವಾಬ್ದಾರರು ಎಂದು ಚೀನಾ ಪ್ರತಿಪಾದಿಸಿದೆ.

ಬಾಹ್ಯಾಕಾಶದಲ್ಲಿ ಉಪಗ್ರಹಗಳು ಡಿಕ್ಕಿಯಾಗುವುದನ್ನು ತಪ್ಪಿಸುವ ಕುಶಲತೆ ಇತ್ತೀಚಿನ ದಿನಗಳಲ್ಲಿ ಮಾಮೂಲಿಯಾಗಿದೆ ಎಂದು ಹಾರ್ವರ್ಡ್-ಸ್ಮಿತ್‌ಸೊನಿಯನ್ ಖಗೋಳ ಭೌತಶಾಸ್ತ್ರ ಕೇಂದ್ರದ ಜೊನಾಥನ್ ಮೆಕ್‌ಡೊವೆಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News