ಶಾಲೆಯ ಸಮಸ್ಯೆ ಪರಿಹರಿಸಿ

Update: 2021-12-28 18:39 GMT

ಮಾನ್ಯರೇ,
ಮಂಗಳೂರಿನ ನಾಗೋರಿಯ ಸೂರ್ಯನಾರಾಯಣ ದೇವಸ್ಥಾನ ರಸ್ತೆಯಲ್ಲಿ ಈ ಹಿಂದೆ ಎರಡು ಕನ್ನಡ ಮಾಧ್ಯಮ ಹೈಯರ್ ಪ್ರೈಮರಿ ಶಾಲೆಗಳಿದ್ದವು. ಇದೀಗ ಅದರಲ್ಲಿ ಸುಬ್ರಾಯ ಶಾಲೆ ಮುಚ್ಚಲಾಗಿದೆ. ಅದರ ಪಕ್ಕದ ಗಾರ್ಡಿಯನ್ ಏಂಜಲ್ಸ್ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಕೇವಲ 86ವಿದ್ಯಾರ್ಥಿಗಳಿದ್ದಾರೆ. ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯ ನಿಯಮದಂತೆ 40 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಂತೆ ಇಬ್ಬರು ಶಿಕ್ಷಕರಿಗೆ ಮಾತ್ರ ಸರಕಾರ ವೇತನ ಪಾವತಿಸುತ್ತಿದೆ.

ಒಂದನೇ ತರಗತಿಯಿಂದ ಏಳನೇ ತರಗತಿಯವರೆಗೆ ಕಲಿಯುತ್ತಿರುವ ಈ 86ವಿದ್ಯಾರ್ಥಿಗಳಿಗೆ ಕೇವಲ ಇಬ್ಬರು ಶಿಕ್ಷಕಿಯರು ತರಗತಿಗಳನ್ನು ನಡೆಸಲು ಸಾಧ್ಯವಿಲ್ಲ. ಅವರು ಯಾವ ತರಗತಿಗೆ ಹೋಗಿ ಎಷ್ಟು ಸಮಯ ಮಕ್ಕಳಿಗೆ ಪಾಠ ಮಾಡಬಹುದು?

ಇತ್ತೀಚೆಗೆ ಆಂಗ್ಲ ಮಾಧ್ಯಮದ ಗೀಳು ಇರುವುದರಿಂದ ಕನ್ನಡ ಮಾಧ್ಯಮಕ್ಕೆ ವಿದ್ಯಾರ್ಥಿಗಳು ಸಿಗುತ್ತಿಲ್ಲ. ಕಳೆದ ಸುಮಾರು ದಶಕದಿಂದ ಗಾರ್ಡಿಯನ್ ಏಂಜೆಲ್ಸ್ ಶಾಲೆಯನ್ನು ಮುಚ್ಚಿ ಇಲ್ಲಿನ ವಿದ್ಯಾರ್ಥಿಗಳನ್ನು ಅದೇ ಸಂಸ್ಥೆ ನಡೆಸುತ್ತಿರುವ ಹತ್ತಿರದ ಕಪಿತಾನಿಯೋ ಕನ್ನಡ ಮಾಧ್ಯಮ ಶಾಲೆಗೆ ಕಳಿಸಲು ಪ್ರತಿವರ್ಷ ವಿನಂತಿ ಪತ್ರ ನೀಡಲಾಗುತ್ತಿದೆ ಆದರೆ ಬ್ಲಾಕ್ ಎಜುಕೇಶನ್ ಆಫೀಸರ್ ಮುಚ್ಚುಗಡೆಗೆ ಅನುಮತಿ ನೀಡುತ್ತಿಲ್ಲ. ಸುಬ್ರಾಯ ಶಾಲೆ ಮುಚ್ಚುಗಡೆಗೆ ದೊರೆತ ಅನುಮತಿ ಗಾರ್ಡಿಯನ್ ಏಂಜಲ್ಸ್ ಶಾಲೆಗೆ ಏಕಿಲ್ಲ? ಶಿಕ್ಷಣ ಇಲಾಖೆಯಲ್ಲಿ ಕಾರ್ಯವೆಸಗುವ ಎಲ್ಲರಿಗೂ ಈ ಇಬ್ಬರು ಶಿಕ್ಷಕರು 86 ವಿದ್ಯಾರ್ಥಿಗಳಿಗೆ ಕಲಿಸಲು ಸಾಧ್ಯವಿಲ್ಲ ಎಂದು ತಿಳಿದಿದೆ.

ಅಲ್ಲದೆ ಗಾರ್ಡಿಯನ್ ಏಂಜಲ್ಸ್ ಶಾಲೆಗೆ ಅಗ್ನಿಶಮನ ಉಪಕರಣಗಳನ್ನು ಅಳವಡಿಸಿದರೆ ಮಾತ್ರ ಶಾಲೆ ನಡೆಸಲು ಅನುಮತಿ ಸಿಗಲಿದೆ ಎಂದು ನೋಟಿಸ್ ಜಾರಿ ಮಾಡಿದ್ದಾರೆ. ಈ ಅಗ್ನಿಶಮನ ಉಪಕರಣಗಳನ್ನು ಅಳವಡಿಸಲು ರೂ. ಎರಡೂವರೆಯಿಂದ ಮೂರು ಲಕ್ಷದಷ್ಟು ವೆಚ್ಚವಾಗಲಿದೆ. ಮುಂದಿನ ಹತ್ತು ವರ್ಷಗಳ ಎಲ್ಲಾ ವಿದ್ಯಾರ್ಥಿಗಳ ಶಾಲಾ ಶುಲ್ಕವೇ ಇದರ ಕಾಲು ಭಾಗವೂ ಆಗುವುದಿಲ್ಲ. ಹೀಗಿರುವಾಗ ಶಾಲೆ ಹಣವನ್ನು ಎಲ್ಲಿಂದ ತರುವುದು? ಈ ಮೇಲಿನ ಎರಡೂ ಕಷ್ಟಕರ ವಿಷಯಗಳಿಂದ ಸಂಬಂಧಪಟ್ಟ ಶಾಸಕ, ಸಂಸದರು ಶಿಕ್ಷಣ ಇಲಾಖೆಗೆ ಮನವರಿಕೆ ಮಾಡಿಕೊಟ್ಟು; ಗಾರ್ಡಿಯನ್ ಏಂಜೆಲ್ ಶಾಲೆಯನ್ನು ಶಾಶ್ವತವಾಗಿ ಮುಚ್ಚಿ ಅಲ್ಲಿನ ವಿದ್ಯಾರ್ಥಿಗಳನ್ನು ತೀರಾ ಸನಿಹದಲ್ಲಿ ಇರುವ ಕಪಿತಾನಿಯೋ ಕನ್ನಡ ಮಾಧ್ಯಮ ಶಾಲೆಗೆ ಸೇರಿಸುವಂತೆ ಸುಗ್ರೀವಾಜ್ಞೆ ತರಲಿ.
 

Writer - -ಒಲಿವರ್ ಡಿ'ಸೋಜಾ, ಮುಂಬೈ

contributor

Editor - -ಒಲಿವರ್ ಡಿ'ಸೋಜಾ, ಮುಂಬೈ

contributor

Similar News