×
Ad

ಕೋಟ ಠಾಣೆ ಪಿಎಸ್ಸೈ ಅಮಾನತು, ಐವರು ಪೊಲೀಸರ ವರ್ಗಾವಣೆ

Update: 2021-12-29 10:11 IST
ಕೋಟ ಠಾಣೆ ಪಿಎಸ್ಐ ಸಂತೋಷ್ ಬಿ.ಪಿ‌.

ಉಡುಪಿ, ಡಿ.29: ಸೋಮವಾರ ರಾತ್ರಿ ಕೋಟತಟ್ಟು ಬಾರಿಕೆರೆ ಕೊರಗ ಕಾಲನಿಯಲ್ಲಿ ಸೋಮವಾರ ರಾತ್ರಿ ನಡೆಯುತ್ತಿದ್ದ ಮೆಹೆಂದಿ ಕಾರ್ಯಕ್ರಮಕ್ಕೆ‌ ನುಗ್ಗಿ‌ ಕೊರಗ ಸಮುದಾಯದವರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಕೋಟ ಠಾಣೆ ಪಿಎಸ್ಐ ಸಂತೋಷ್ ಬಿ.ಪಿ‌. ಅವರನ್ನು ಅಮಾನತು ಮಾಡಲಾಗಿದೆ.

ಈ‌ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಮಾಹಿತಿ ನೀಡಿದ್ದು, ಕೋಟದಲ್ಲಿ ನಡೆದ ಕೊರಗ ಸಮುದಾಯದವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯ ಆಧಾರದಲ್ಲಿ ತಾನು ನೀಡಿದ ವರದಿಯನ್ನು ಪರಿಶೀಲಿಸಿದ ಪಶ್ಚಿಮ ವಲಯ ಐಜಿಪಿಯವರು ಕೋಟ ಪಿಎಸ್ಐ ಅವರನ್ನು  ಅಮಾನತು ಮಾಡಿದ್ದಾರೆ ಎಂದರು.

 ಇನ್ನು ಪ್ರಕರಣದಲ್ಲಿ ಭಾಗಿಯಾಗಿದ್ದ ಐದು ಮಂದಿ ಪೊಲೀಸ್ ಸಿಬ್ಬಂದಿಯನ್ನು ಕೋಟ ಪೊಲೀಸ್ ಠಾಣೆಯಿಂದ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬ್ರಹ್ಮಾವರ ತಾಲೂಕಿನ ಕೋಟತಟ್ಟು ಬಾರಿಕೆರೆ ಕೊರಗ ಕಾಲನಿಯಲ್ಲಿ ಸೋಮವಾರ ರಾತ್ರಿ ನಡೆಯುತ್ತಿದ್ದ ರಾಜೇಶ್ ಎನ್ನುವವರ ಮೆಹಂದಿ ಕಾರ್ಯಕ್ರಮದ ವೇಳೆ ಸಾರ್ವಜನಿಕರೊಬ್ಬರು ನೀಡಿದ ದೂರಿನಂತೆ ಆಗಮಿಸಿದ ಕೋಟ ಪೊಲೀಸರು, ಅಲ್ಲಿ ನೆರೆದಿದ್ದವರ ಮೇಲೆ ಲಾಠಿ ಪ್ರಹಾರ ನಡೆಸಿ, ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿತ್ತು.

ಪೊಲೀಸರ ಲಾಠಿ ಏಟಿನಿಂದ ಮೆಹಂದಿ ಕಾರ್ಯಕ್ರಮದ ಮನೆಗೆ ಬಂದಿದ್ದ ಮಕ್ಕಳು, ಹೆಂಗಸರು ಸೇರಿದಂತೆ ಸುಮಾರು ಹತ್ತು ಮಂದಿ ಗಾಯಗೊಂಡಿದ್ದರು.

ಪೊಲೀಸ್ ದೌರ್ಜನ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದರೆ, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News