×
Ad

ಕಿಷ್ಕಿಂಧಾ ಸಂಪುಟಂ: ನಾನಕ್ಕನೆನ್ ನಿನಗೆ, ತಂಗೆ!

Update: 2021-12-29 11:19 IST

ಡಾ. ಜಿ. ಕೃಷ್ಣಪ್ಪ ಸರಳವಾಗಿ ಕನ್ನಡಕ್ಕೆ ರೂಪಾಂತರಿಸಿದ ರಾಷ್ಟ್ರಕವಿ ಕುವೆಂಪು ಶ್ರೀ ರಾಮಾಯಣದರ್ಶನಂ ಕುವೆಂಪು ಜನ್ಮದಿನವಾದ ಇಂದು ಲೋಕಾರ್ಪಣೆಯಾಗುತ್ತಿದೆ. ಈ ಪುಸ್ತಕದ ಆಯ್ದ ಭಾಗ ಇಲ್ಲಿದೆ.

ಸಮುದ್ರದ ತರಂಗಗಳ ಪರಂಪರೆ, ಮೊರೆತದ ಪರಂಪರೆ, ಬೆಳ್ನೊರೆ ನೊರೆಯ ಪರಂಪರೆ ಅಲ್ಲಿ ಅರಳಿ ಉಲ್ಲಾಸಗೊಳ್ಳುತ್ತಿದ್ದವು. ಆ ಸಾಗರದ ನಾಗರನ ಭೋರ್ಗರೆಯುವ ಭೋಗ ಕುಲವು ದಡದ ಅಶೋಕವನದ ಬಾಗಿದ ಶಿಲೆಗಳನ್ನು ನಿರಂತರವಾಗಿ ಅಪ್ಪಳಿಸುತ್ತಿದ್ದವು. ಕಾಡಿನ ಕೋಡಿನ ಎತ್ತರದಲ್ಲಿದ್ದ ಹುಲ್ಲುಮನೆಯಲ್ಲಿ ದುಃಖಿತಳಾದ ಸೀತಾದೇವಿಯು ತರಂಗೋಲ್ಲಾಸವನ್ನು ನೋಡುತ್ತಿದ್ದಳು ಮತ್ತು ಆ ಅಲೆಗಳ ಉಚ್ಛ್ವಾಸ ಘೋಷವನ್ನು ಕೇಳುತ್ತಿದ್ದಳು. ನೋಡುತ್ತಿರಲು ಕೇಳುತ್ತಿರಲು ಕಣ್ಣಿಗೆ ಮತ್ತು ಕಿವಿಗೆ ಭೇದವಿಲ್ಲವಾಗಿತ್ತು.

ಆ ದೇವಿಯ ಆತ್ಮವು ಮೆಲ್ಲನೆಯೆ ತೆರೆಯಾಯಿತು; ಮೊರೆಯಾಯಿತು. ತಿರೆಯೆಲ್ಲ ತಾನಾಗಿ ತನ್ನತನವನ್ನೇ ಮೀರಿ ಅತೀಂದ್ರಿಯಕ್ಕೆ ನೆಗೆಯಿತು. ಎಚ್ಚರದ ಚಿಂತೆ ಕನಸಿನಲ್ಲಿ ಕಾಣುವಂತಾಯಿತು. ಅವಳಿಗೆ ಅತಿಶೋಕಮಯ ಗೇಯದ ಇಂಚರ ಕೇಳಿಸಿತು. ಆ ಪದಗಳನ್ನು ಕೇಳಿದಳು ಎಂದರೆ ಅದು ಇಂದ್ರಿಯಜ್ಞಾನಕ್ಕೆ ಔಪಚಾರಿಕವಾಗಿತ್ತು. ಅವಳು ಕಾಲ ದೇಶಗಳನ್ನು ಮೀರಿದ ಅನುಭವವನ್ನು, ವರ್ಣಿಸಲಾಗದ್ದನ್ನು ಕೇಳಿದಳೋ? ಕಂಡಳೋ? ಏನಾದರೇನು ರಾಮ ದುಃಖವನ್ನೆಲ್ಲವನ್ನು ತಾನು ಉಂಡಳು!

ಸೀತೆಯನ್ನು ಸುತ್ತುಗಟ್ಟಿ ಕಾಯುತ್ತಿದ್ದ ಲಂಕಾ ಲತಾಂಗಿಯರು ಅವಳು ಪ್ರಜ್ಞಾಶೂನ್ಯಳಂತಾದುದನ್ನು ಕಂಡು ಬೆಚ್ಚಿದರು. ದಿಕ್ಕು ತೋಚದಂತಾದರು. ಗಾಳಿಯನ್ನು ಬೀಸಿದರು. ನೀರೆರಚಿದರು. ಅಲುಗಾಡಿಸಿ ಕರೆದರು. ಕೊನೆಗೆ ಆ ಸಮಾಚಾರವನ್ನು ದೊರೆಗೆ ಮುಟ್ಟಿಸಿದರು.

ಬೆಳದಿಂಗಳ ರಾತ್ರಿ ಕಳೆದು ಪೂರ್ವದಿಕ್ಕೆಂಬ ಸ್ತ್ರೀಯ ಮುಖಕ್ಕೆ ನಸುಗೆಂಪು ಅರಳುವಂತೆ, ಸೀತೆಯ ಮುಖದಲ್ಲಿ ಬಿಳುಪು ಅಳಿಯಿತು. ನಳನಳಿಸುವ ಚೆಂದಳಿರ ಸೊಂಪು ಉದಯಿಸಿತು. ಆ ಶೋಕಗೇಯವು ನಿಧಾನವಾಗಿ ಧೀರಗಾನವಾಗಿ ತಿರುಗಿತು. ರಾಗಗಳನ್ನು ವಿಸ್ತಾರಗೊಳಿಸುವ ಕ್ರಮತಾನ. ತಾನದ ಮೇಲೆ ತಾನ ಗರಿಗೆದರಿ ತಾನವು ಏರಿದಂತೆ, ಹರ್ಷಗಾನದ ಪಕ್ಷಿ ಬಾನೆತ್ತರಕ್ಕೆ ಹಾರಿತು. ಅರವಿಂದ ನೇತ್ರೆಯು ಕಣ್ಣು ತೆರೆದಳು. ಮುಂದೆ ಧಾನ್ಯಮಾಲಿನಿಯೊಡನೆ ನಿಂತಿದ್ದ ದಶಕಂಠನನ್ನು ಕಂಡಳು. ಬುದ್ಧಿ ಪೂರ್ವಕವಾಗಿಲ್ಲದೆ. ಅಭ್ಯಾಸಬಲವೆಂಬಂತೆ ಮುಖವನ್ನು ಕೆಳಗೆ ಮಾಡಿದಳು. ತನ್ನ ಅಡಿದಾವರೆಯವರೆಗೆ ಮುಡಿಚಾಚಿ ನೆಲದ ಮೇಲೆ ಒರಗಿದ್ದ ದಶಶಿರನ ನೆರಳನ್ನು ಕಂಡಳು!

ಮೈಥಿಲಿ, ಮುಹುರ್ಮುಹುರೆನ್ನ ದೈನ್ಯಮಂ ನಿನಗಾಂ ನಿವೇದಿಸುತ್ತಿಹೆನೆಂತೊ ಲೆಕ್ಕಿಸದೆ ನನ್ನ ಪೆಂಪಂ.

ದೊರೆಯ ಕಣ್ಣ ಸೂಚನೆಯನ್ನು ತಿಳಿದು ಸೀತೆಯ ಬಳಿಯಿದ್ದ ಹೆಂಗಸರ ಕಾವಲು ಪಡೆಯವರು ಅಲ್ಲಿಂದ ಮರಳಿದರು. ಧಾನ್ಯಮಾಲಿನಿಯು ಅಲ್ಲಿಂದ ತೆರಳಲು ತೊಡಗಿದಾಗ ರಾವಣನು ಅವಳನ್ನು ಇರಲು ಹೇಳಿದನು. ಜಾನಕಿಯ ಕಡೆ ತಿರುಗಿ ಹೀಗೆ ಹೇಳಿದನು:

‘‘ದೇವಿ, ನಿನ್ನ ಇಚ್ಛೆಗೆ ಏನೂ ಕೊರತೆಯಿಲ್ಲದಂತೆ ನಿನ್ನ ದಾಸಿಯರು ನೀನು ಹೇಳಿದುದನ್ನು ಮಾಡುತ್ತಿರುವರಲ್ಲವೆ? ಈ ಹೊಸ ಜಾಗವು ನಿನಗೆ ಉತ್ತಮವಾಗಿದೆಯೇ? ವಾಯುವು ಬೀಸಣಿಗೆ ಬೀಸಿ ಸೇವಿಸುತ್ತಿರುವನೇ? ಸೂರ್ಯನು ನಿನ್ನ ಸಿರಿಮೈಗೆ ಎಳೆಬಿಸಿಲ ಕಾವು ನೀಡಿದನೆ? ವನದಾಸಿಯು ತರುಪತ್ರಗಳ ಛತ್ರಛಾಯೆಯನ್ನು ಕೊಡೆಯ ನೆರಳಾಗಿಸಿ ಕರ್ತವ್ಯವನ್ನು ಪಾಲಿಸುತ್ತಿರುವಳೇ? ಈ ಸಾಮಂತ ನೃಪಸಾಗರನು ರಾಜಸೇವಾಸಕ್ತ ಮತ್ತು ನನ್ನ ಕೃಪೆಯ ಆಕಾಂಕ್ಷಿಯಾದ ಕಿಂಕರ. ಅವನು ನಿನಗೆ ತೆರೆಚವರಿಯನ್ನು ಬೀಸಿ ಗೌರವದ ಕಾಣ್ಕೆಯನ್ನು ಸಲ್ಲಿಸಿರುವನಲ್ಲವೇ?’’

ಸೀತೆ, ಉತ್ತರಕ್ಕೆ ಮುಖಮಾಡಿ ‘‘ಬಡವನನ್ನು ಬೇಡಿ ಏನನ್ನು ಪಡೆಯುವೆ? ಆ ಕುಬೇರನು ತನ್ನ ಸಂಪತ್ತನ್ನೆಲ್ಲ ಲಂಕೆಗೆ ಸೋತು ಅವನಿಗೆ ಬಡತನ ಉಂಟಾಗಿದೆ. ದಕ್ಷಿಣಕ್ಕೆ ಕಣ್ಣು ತಿರುಗಿಸುವುದೂ ಬೇಡವಾಗಿದೆ. ಲಂಕೆಯ ಅರಮನೆಯ ಶಿರದ ಗೋಪುರದ ಬಂಗಾರ ದೀಪ್ತಿಯು ತಾನು ಯಾವಾಗಲೂ ಯಮನಿಗೆ ಎಚ್ಚರಿಕೆಯ ಬೆರಳ ಭೀತಿಯಂತಾಗಿದೆ.’’

‘‘ಮೈಥಿಲಿಯೆ, ನನ್ನ ಹಿರಿಮೆಯನ್ನು ಹೇಗೂ ಲೆಕ್ಕಿಸದೆ ಪುನಃ ಪುನಃ ನನ್ನ ದೈನ್ಯವನ್ನು ನಿನಗೆ ನಿವೇದಿಸುತ್ತಿರುವೆನು. ರಾಜನ ತಾಳ್ಮೆ ಮಿತವಾದುದಾದರೂ, ನಿನ್ನೊಲ್ಮೆಯ ಬೆಲೆಯನ್ನು ತಿಳಿದೆನು. ನಾನು ಹೃದಯದ ಕಾತರತೆಗೆ ತಾಳ್ಮೆಯನ್ನು ಕಡಿವಾಣವಾಗಿಸಿಕೊಂಡಿರುವೆನು. ನಿನ್ನ ಪ್ರೀತಿಯ ವರವನ್ನು ಪಡೆಯುವುದಕ್ಕಾಗಿ ನಾನು ತಪಸ್ವಿಯಾಗಿರುವೆನು.’’

‘‘ಪಂಕಜೆಯೇ, ಒಪ್ಪಿಬರಲು ಪ್ರೀತಿಯು ಜೇನು; ಒಲ್ಲದಿದ್ದರೂ ಬಲಾತ್ಕಾರದಿಂದ ಎಳೆದುಕೊಂಡರೆ ಅದು ಕೆಸರು. ಸಾಧನೆಗೆ ಅಸಾಧ್ಯವಾದುದು ಇಲ್ಲ ಎಂದು ಹೇಳುವರು. ಉಪಾಸನೆ ಮಾಡಿದರೆ ಕಾಲಾಂತರದಲ್ಲಿ ಕಲ್ಲು ಸಹ ಈಶ್ವರನ ಕೃಪೆಯಾಗಿ ಪರಿಣಮಿಸುತ್ತದೆ ಎಂದು ಹೇಳುವರು. ಹಾಗಿರುವಾಗ ನಿನ್ನ ಕಲ್ಲೆದೆ ಕರಗಿ ಮೃದುವಾಗುವುದು ದಿಟ! ನೋಡು, ನನಗೆ ಈಕೆಯೇ ಸಾಕ್ಷಿಯಾಗಿದ್ದಾಳೆ! ಧಾನ್ಯಮಾಲಿನಿಯು ವ್ರತ ನಿರತನಾದ ನನಗೆ ಕಾಲಾಂತರದಲ್ಲಿ ಒಲಿದು, ನನ್ನಮೇಲೆ ಕೃಪೆ ತೋರಿದಳು. ಇದನ್ನು ನಿನಗೆ ಈಗಾಗಲೆ ತಂಗಿ ಚಂದ್ರಮುಖಿಯು ಹೇಳಿರುವಳಲ್ಲವೇ?’’

ಅವನಿಜಾತೆಯು ಕೈಯಲ್ಲಿ ಹಿಡಿದ ಹುಲ್ಲು ಕಡ್ಡಿಯನ್ನು ರಾವಣನೆಂದು ತಿಳಿದಳು. ಮುಖ ಎತ್ತದೆಯೇ ಅವನನ್ನು ಸಂಬೋಧಿಸಿದಳು:

‘‘ದಶಗ್ರೀವನೆ, ವಿಧಿಯ ಹೋಮದಲ್ಲಿ ಬಲಿಯಾಗಲು ಬಂದ ಪಶು ನೀನು. ತಾಯಿಯು ಕೆಡುಕ ಕಂದನಿಗೆ ಮರುಗುವಂತೆ ನಾನು ನಿನಗೆ ಮರುಗುತ್ತೇನೆ. ನನ್ನ ಕಲ್ಲೆದೆ ಕರಗುತ್ತ ಇದೊ ನಿನಗೆ ಮೃದುವಾಗುವುದು ನಿಜ! ನೀನು ಹೇಳಿದ ರೀತಿ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಹೇಳುವರು. ಉಪಾಸಿಸಿದರೆ ಕಾಲಾಂತರದಲ್ಲಿ ಕಲ್ಲು ಸಹ ಈಶ್ವರನ ಕೃಪೆಯಾಗಿ ಪರಿಣಮಿಸುತ್ತದೆ. ಅದೇ ರೀತಿ ಕಬ್ಬಿಣಕ್ಕೆ ಸಮನಾದ ನಿನ್ನ ಕಲ್ಲೆದೆ ಕರಗಿ ಮೃದುವಾಗುವುದು ದಿಟ! ನಿನ್ನ ಆತ್ಮದ ಉದ್ಧಾರಕ್ಕೆ ನಾನು ಸದಾ ವ್ರತಧಾರಿಯಾಗಿದ್ದೇನೆ.’’

ಸೀತೆಯು ಹಾಗೆ ಆವೇಶವು ಏರಿದಂತೆ ನುಡಿ ನುಡಿಯುವುದನ್ನು ಕೇಳಿ, ಧಾನ್ಯಮಾಲಿನಿಯಂತೆ ದಶಶಿರನು ಆಶ್ಚರ್ಯಪಟ್ಟನು. ಆನಂತರ ಗಂಭೀರ ವೈಖರಿಯಿಂದ ನಿಧಾನ ನಿಧಾನವಾಗಿ ದೇವಿಯು ಮುಖವನ್ನು ಎತ್ತಿದಳು! ಅಸುರನನ್ನು ನೇರವಾಗಿ ನೋಡಿದಳು. ಆ ನಿಂದಾ ದೃಷ್ಟಿಗೆ ಹೆದರಿದ ರಕ್ಕಸನಲ್ಲಿ ವ್ಯರ್ಥ ಆಸೆ ಕುಗ್ಗಿತು. ಆ ದಿಟ್ಟ ದೃಷ್ಟಿಯನ್ನು ಮೊತ್ತ ಮೊದಲಾಗಿ ಸಂಧಿಸಿದ ದೈತ್ಯೇಂದ್ರನು ಅವಳನ್ನು ಮೂಕ ವಿಸ್ಮಯನಾಗಿ ಈಕ್ಷಿಸುತ್ತಿದ್ದನು. ಆಗ ಮತ್ತೆ ವಸುಂಧರಾತ್ಮಜೆಯು ತನ್ನ ಮಾತನ್ನು ಮುಂದುವರಿಸುತ್ತ,

‘‘ದಶಗ್ರೀವನೆ ನೀನು ಹಿರಿಯನಾಗಿರುವೆ. ಆ ಹಿರಿತನ ಕೆಡದ ಹಾಗೆ ಬಾಳು. ಧರ್ಮದಂಡವನ್ನು ಕೆಣಕಿ ಲಂಕೆಯನ್ನು ಹಾಳುಮಾಡಬೇಡ. ನಿನ್ನನ್ನು ಒಲಿದವರಿಗೆ ವ್ಯರ್ಥವಾಗಿ, ಅನ್ಯಾಯವಾಗಿ ವೈಧವ್ಯವನ್ನು ಉಂಟುಮಾಡಬೇಡ! ಅಯ್ಯೋ ಮರುಳೆ ಧರ್ಮರೋಷವನ್ನು ಸಾಗರವು ತಡೆಯುತ್ತದೆಯೇ? ಸಾಗರವೆ ಸೇತುವೆಯಾಗಿ ಮೃತ್ಯುರೂಪದ ಕೃಪಾಕೇತು ವಿಷದಂತೆ ನಿನ್ನನ್ನು ಅಟ್ಟಿಸಿಕೊಂಡು ಬರುವುದಿಲ್ಲವೇ?’’

ಎಂದು ಹೇಳಿ ಮುಖವನ್ನು ಬಾಗಿಸಿದಳು. ಕಡಲ ಮೊರೆ, ಹಕ್ಕಿಗಳ ಇಂಚರ, ತರುಗಳ ಮರ್ಮರ ಕೇಳಿಸಿತು. ರಾವಣನು ಮೌನವಾಗಿ ಮುಖ ಹಿಂದಿರುಗಿಸಿಕೊಂಡು ಧಾನ್ಯಮಾಲಿನಿಯೊಡನೆ ತೆರಳಿದನು. ಚಿಂತೆಯಲ್ಲಿ ಮುಳುಗಿದವನ ಜೀವನದ ಕಡಲು ಅಂತರ್ ಮಥಿತವಾಯಿತು.

ನಾನಕ್ಕನೆನ್ ನಿನಗೆ, ತಂಗೆ, ವಯಸ್ಸಿನಿಂದಂತೆ ದುಕ್ಕದಿಂ!

ಆ ರಾತ್ರಿಯ ಬೆಳ್ದಿಂಗಳಿನಲ್ಲಿ ವಿಶ್ವನಿದ್ರೆಯಲ್ಲಿ ಒಂದು ಕನಸಿನಂತೆ ಪೃಥ್ವಿಯಿತ್ತು. ನಿಶ್ಯಬ್ದತೆಯ ರೆಕ್ಕೆ ಬಡಿತವೆಂಬಂತೆ ಕಡಲ ತೀರದ ತೆಂಗಿನ ಮರಗಳಲ್ಲಿ ಗರಿಗಳು ಮರ್ಮರನೆ ನರ್ತಿಸುತ್ತಿದ್ದವು. ಚಂದ್ರಸುಂದರ ವಿಶಾಲವಾದ ನೀಲಾಬ್ಧಿಯು ತಾನು ಆ ಸತಿಯ ಸಂಕಟಕ್ಕೆ ಅನುಕಂಪಿಸುವ ರೀತಿಯಲ್ಲಿ ನರಳಿ ಹೊರಳಿ ನಿಟ್ಟುಸಿರು ಬಿಡುತ್ತಿತ್ತು. ಆಗ ಸೀತೆಯ ಕಿವಿಗೆ ಒಂದು ಕನಕ ನೂಪುರದ ಕಿಂಕಿಣಿ ಕೇಳಿಸಿತು!

ಚಕಿತ ನೇತ್ರೆಯಾಗಿ ನೋಡುತ್ತಿರಲು ಆ ಅಮೃತ ರಾತ್ರಿಯೆ ಲಲನೆಯ ಆಕೃತಿ ಪಡೆದು ಬಂದಂತಿತ್ತು. ಹಾಲು ಬೆಳ್ಳನೆ ಸೀರೆ ಶೃಂಗರಿಸಿದ ಒಂದು ಮನುಷ್ಯರೂಪವು ನಡೆಯುವ ರೀತಿಯಿಂದಲೆ ಮನಸ್ಸಿಗೆ ಭಯ ಭಕ್ತಿಯನ್ನುಂಟು ಮಾಡುತ್ತಿತ್ತು. ಭೂಮಿದೇವಿಯೆ ತನ್ನ ಕುಮಾರಿಯನ್ನು ಸಂತೈಸಲು ಬರುತ್ತಿದ್ದಾಳೆ ಎಂಬಂತೆ ಓರ್ವಳು ಬಂದಳು!

 ಹತ್ತಿರಕ್ಕೆ ಬಾರದೆಯೆ ದೂರದಲ್ಲಿಯೆ ನಿಂತಳು ಎಂಬಂತಿದ್ದು, ಕೈಗಳನ್ನು ಎತ್ತಿದಳೆ? ಇದೇನು ಸೋಜಿಗ? ತನಗೆ ಕೈ ಮುಗಿದಳು ಎಂಬಂತೆ ತೋರುತ್ತಿದೆ! ಸೀತೆಯು ಆಶ್ಚರ್ಯದಿಂದ ಕಣ್ಣಿಟ್ಟು ನೋಡುತ್ತ ನಿಟ್ಟುಸಿರು ಬಿಟ್ಟಳು. ಆ ಗಂಭೀರೆ, ಧೀರೆ, ಧವಳಾಂಬರದ ಮಹಿಳೆಯು ವೀಣೆ ಮಿಡಿದಂತೆ ನಿಧಾನ ನಿಧಾನವಾಗಿ, ಅಸ್ಪಷ್ಟವಾಗಿ ಏನನ್ನೊ ಹೇಳುತ್ತ ರೋದಿಸಿದಳು!

ಹೀಗೆ ಏಳು ರಾತ್ರಿಗಳು ಆ ರೂಪು ಬಂದು ದೂರದಲ್ಲಿ ನಿಂತು ಅತ್ತಿತು. ನಮಸ್ಕರಿಸಿ ಅಸ್ಪಷ್ಟವಾದುದನ್ನು ಕಿರುಗುಟ್ಟುತ್ತ ಹಿಂದಿರುಗುತ್ತಿತ್ತು. ಹೀಗಿರಲು ಎಂಟನೆಯ ರಾತ್ರಿ ಇಳೆಗುವರಿ ಸೀತೆಯು ಕನಿಕರದಿಂದ ಕರಗಿದಳು. ಮೇಲೆದ್ದಳು. ಅವಳು ಇದ್ದ ಕಡೆಗೆ ನಡೆದಳು. ಮನಸ್ಸು ಬಿಚ್ಚಿ ಹೀಗೆ ನುಡಿದಳು: ‘‘ತಂಗಿ, ನೀನು ಯಾರಮ್ಮ? ಏಳು ರಾತ್ರಿಗಳಿಂದ ನೋಡುತ್ತಿದ್ದೇನೆ. ಬಂದು ಗೋಳಾಡುತ್ತ ಯಾವುದೊ ಸಂಕಟವನ್ನು ಹೇಳುತ್ತಿರುವೆ. ಯಾರನ್ನೋ ಕರೆಯುತ್ತಿರುವೆ. ಯಾರನ್ನೋ ಬೇಡುತ್ತಿರುವೆ. ಯಾರಿಗೋ ಕೈ ಮುಗಿದು ರಕ್ಷಣೆಯನ್ನು ಪಡೆಯುವುದಕ್ಕಾಗಿ ವ್ರತ ಬದ್ಧಳಾದಂತೆ ಕಾಣುತ್ತಿರುವೆ.’’

‘‘ನಾನು ಮೊದಲಿಗೆ ಇದು ರಾಕ್ಷಸನ ಮಾಯೆಯೆಂದು ಬೆದರಿದನು. ಕಡೆಗೆ ನಿನ್ನ ಕೊರಳ ದುಃಖದ ನೈಜತೆಯು ನನ್ನಲ್ಲಿ ಕರುಣೆಯನ್ನು ಕೆಣಕಿತು. ನನ್ನಂತೆ ನೀನೂ ಸಹ ರಾಕ್ಷಸನ ದುಷ್ಟತನ ಎಳೆದು ತಂದ ಹೆಣ್ಣೇಯಿರಬೇಕು! ಈ ಲಂಕೆಯೊಳಗೆ ನಮ್ಮಂತಹವರು ಇನ್ನೆಷ್ಟು ದುಃಖಿಗಳು ಇರುವರೋ?’’

‘‘ನಾನು ನಿನಗೆ ಅಕ್ಕ. ತಂಗಿಯೇ, ವಯಸ್ಸಿನಿಂದಷ್ಟೆ ಅಲ್ಲ, ದುಃಖದಿಂದಲೂ! ನನ್ನ ರೀತಿಯ ಅತಿ ದುಃಖಿಯು ಲಂಕೆಯೊಳಗೆ ಮಾತ್ರವಲ್ಲ, ಸೃಷ್ಟಿಯಲ್ಲಿಯೇ ಇಲ್ಲ ಎಂದು ತಿಳಿ...’’

‘‘ದೇಶವನ್ನು ತ್ಯಜಿಸಿ, ವನವಾಸವನ್ನು ಆಯ್ಕೆಮಾಡಿಕೊಂಡು, ರಾಕ್ಷಸನ ಪಾಪಕ್ಕೆ ಬಲಿಯಾದ ದಶರಥನ ಸುತನ ಪತ್ನಿಗಿಂತ ಹೆಚ್ಚಿನ ದುಃಖಿ ನೀನು ಎಂದು ಹೇಳುವೆಯ?’’

‘‘ಹೌದು, ಸೀತೆಗಿಂತ ಅತಿದುಃಖಿ ನಾನು. ಎಷ್ಟೊ ಸೀತೆಯರ ದುಃಖವನ್ನು ಹೊತ್ತಿಸಿರುವವನಿಗೆ ನಾನು ಮಡದಿಯಾಗಿರುವೆನು.’’

‘‘ಮಂಡೋದರಿಯೆ ನೀನು?’’

ಎಂದು ಹರ್ಷ ವಿಸ್ಮಯದಿಂದ ಪ್ರಶ್ನಿಸಿದ ಅವನಿಜಾತೆಗೆ ಆ ಮಹಿಳೆ ಉತ್ತರಿಸಿದಳು:

‘‘ಆ ಹೆಸರಿನ ನಿರ್ಭಾಗ್ಯ ಹೆಣ್ಣು ನಾನಾಗಿರುವೆನು...’’

‘‘ಹೆಸರಿನ ಹೆಣ್ಣು ನಿಜ! ಪೂಜ್ಯೆಯೆ, ಈ ಮೊದಲು ನಿನ್ನ ನಿರ್ಮಲವಾದ ಯಶಸ್ಸನ್ನು ಕೇಳಿದ್ದೆನು. ಇಂದು ನೋಡಿ ಧನ್ಯಳಾದೆನು. ಹಿರಿಯಳಾದವಳಿಗೆ ನಮಸ್ಕರಿಸುತ್ತೇನೆ.’’

‘‘ಆರ್ಯೆ, ನಾನು ಅಸುರಿ. ನನಗೆ ನಮಸ್ಕರಿಸಬೇಡ.’’

‘‘ನೀನು ಅಸುರಿಯೆ? ನೀನು ಅಸುರಿ ಅಲ್ಲ; ದೇವತೆ. ಪತಿವ್ರತೆಯಾಗಿ ನಮಗೆಲ್ಲ ಆದರ್ಶಮಾತೆ. ನಾನು ನಿನಗೆ ನಮಸ್ಕರಿಸಲು ಶೀಘ್ರವಾಗಿ ನನಗೆ ಮಂಗಳ ಉಂಟಾಗುವುದೆಂದು ನಾನು ಬಲ್ಲೆನು..’’.

‘‘ನಿನಗೆ ಆ ಮಂಗಳವು ಶೀಘ್ರವಾಗಿ ಒದಗಿ ಬರಲಿ! ನಿನ್ನ ಮಂಗಳವೇ ನನ್ನ ಮಂಗಳವು. ದೇವಿಯೆ, ನನ್ನಂತೆ ನೀನು ಆ ನನ್ನಪತಿಯ ಹೃದಯಕ್ಕೆ ಶುದ್ಧಿ ದೊರೆಯುವಂತೆ ಪ್ರಾರ್ಥಿಸು. ನಾನು ಅದನ್ನು ಬೇಡುವುದಕ್ಕಾಗಿ ಈ ಸ್ಥಳಕ್ಕೆ, ನಿನ್ನ ಸಾನ್ನಿಧ್ಯಕ್ಕೆ ಬರುತ್ತಿದ್ದೆನು...’’

ಆ ನುಡಿ ಕೇಳಿ ಸೀತೆಯು ಮೌನಿಯಾದಳು. ತುಸು ಹೊತ್ತಿನ ಆನಂತರ ಮಾಯಾನಂದನೆ ಮತ್ತೆ ಹೀಗೆ ಮಾತು ಮುಂದುವರಿಸಿದಳು,

‘‘ಹದಿಬದೆತನಕೆ ಮೀರ್ವ ಸಾಧನೆಯಿಲ್ಲ’’

‘‘ನಿನ್ನನ್ನು ಸಂಧಿಸಲು ನನಗೆ ಲಂಕೇಶನು ಅನುಮತಿಯನ್ನು ನೀಡಲಿಲ್ಲ. ಎಲೆ ಪುಣ್ಯಚರಿತಳೆ, ಅದರಿಂದಾಗಿ ನಾನು ಈ ಮೊದಲೇ ಬಂದು ನಿನ್ನ ದರ್ಶನದಿಂದ ಧನ್ಯೆಯಾಗದೆ ಹೋದೆನು. ಪ್ರಾರ್ಥನೆ ಸಫಲವಾಯಿತು. ನೀನೆ ದರ್ಶನವನ್ನು ನೀಡಿದೆ. ಮಾತನಾಡಿಸಿದೆ. ನಾನು ಕೃತಾರ್ಥಳಾದೆ....’’

‘‘ತಂಗಿಯೇ, ಹದಿಬದೆತನಕ್ಕೆ ಮೀರಿದ ಸಾಧನೆಯಿಲ್ಲ. ಅಗ್ನಿಯು ಕೊಳೆಗೆ ತಗಲಲು ಕೊಳೆಯು ಉರಿದು ಹೋಗುವುದು. ಅದೇ ರೀತಿ ನಿನ್ನ ವ್ರತದಿಂದ ನನ್ನ ಪತಿಯ ಹೃದಯದ ಪಾಪದ ಕೊಳೆ ನಾಶವಾಗುತ್ತದೆ. ಸನ್ಮತಿ ಉದಿಸಿ ಸರ್ವರಿಗೆ ಶಾಂತಿ ಸುಖ ಉಂಟಾಗಲಿ!...’’

ಸೀತೆಗೆ ಸ್ವಪ್ನಾವಸ್ಥೆಯಿಂದ ಎಚ್ಚರವಾಗುವ ಮೊದಲೇ ಆ ಸ್ತ್ರೀ ಮೂರ್ತಿ ಮುಡಿಚಾಚಿ ಅವಳ ಪಾದವನ್ನು ಮುಟ್ಟಿದಳು. ಪಾದ ಧೂಳಿಯನ್ನು ಧರಿಸಿದಳು. ಬೆಳದಿಂಗಳಿಂದ ದೇಹಪಡೆದ ಹೆಣ್ಣು ಮತ್ತೆ ಬೆಳದಿಂಗಳಾಗುವಂತೆ ಅವಳು ಅಲ್ಲಿಂದ ತಕ್ಷಣವೇ ಸೀತೆಯ ಕಣ್ಣಳತೆಯನ್ನು ಮೀರಿ ನಡೆದಳು!

ಸೀತೆಯು ಅದು ನನಸಾಗಿದ್ದರೂ ಕನಸಿನಿಂದ ಎಚ್ಚೆತ್ತವಳಂತೆ ಬೆರಗಾಗಿ ಹಿಂದಕ್ಕೆ ಮರಳಿದಳು. ಗುರಿಯಲ್ಲಿ ಅಂತರವಿಲ್ಲದಿರಲು ತನ್ನ ವ್ರತಕ್ಕೆ ಬೇರೆಯವರ ವ್ರತವು ನೆರವಾಗುವುದೆಂದು ಅವಳು ಮೇರೆ ಮೀರಿದ ಆನಂದಕ್ಕೆ ಒಳಗಾದಳು. ತನ್ನ ದೇವತೆಗೆ ಪೂಜೆ ಸಲ್ಲಿಸಿ ನಮಸ್ಕರಿಸುವ ಅನ್ಯರನ್ನು ಕಂಡಾಗ ಭಕ್ತನಿಗೆ ಭಕ್ತಿ ಹುರಿಗೊಂಡು ಹೆಚ್ಚುವುದು. ಅದರಂತೆ ಮಂಡೋದರಿಯ ದೃಢತೆಯು ಮೈಥಿಲಿಯ ಚಿತ್ತಕ್ಕೆ ಉಕ್ಕಿನ ಸಾಣೆಯಾಯಿತು.

ಸೆರೆಮನೆಯೇ ಆತ್ಮಸಾಧನೆಗೊಂದು ಎಲೆಯ ಮನೆಯಾಯಿತು. ಪೌಲಸ್ತ್ಯಜನ ಲಂಕೆಯು ಮಂಡೋದರಿಯ ಲಂಕೆಯಾಯಿತು. ರಾವಣನ ಮೇಲಿದ್ದ ವೈರಭಾವವು ಸುಲಭವಾಗಿ ಕರಗಿ ಹೋಯಿತು. ಅದು ಮಂಡೋದರಿಯ ಪತಿಯ ಮೇಲಿನ ಕರುಣೆಯಾಯಿತು. ಸೂರ್ಯನ ಬಿಸಿಲಿನ ಜೊತೆಗೆ ಕಾಲದ ಕಾವು ನೆರವಾಗಲು ಇದ್ದಿಲಿಗೆ ವಜ್ರತನ ಬರುತ್ತದೆ. ಹಾಗೆ ಸೀತೆ ಮಂಡೋದರಿಯರಿಬ್ಬರೂ ತಪಸ್ಸು ಮಾಡಲು ರಾವಣನ ಮನದ ಹೊನ್ನು ಕರಕರಗಿ ದೋಷವನ್ನು ಕಳೆದುಕೊಳ್ಳದೆ? ಪರಿಶುದ್ಧವಾಗದೆ? ಹೊಳೆಯದೆ? ಹೊಚ್ಚ ಹೊಸ ಹೊನ್ನಾಗಿ ತಳತಳಿಸದೆ?

ಪುಣ್ಯ ಪ್ರಸಾದಮಂ ಶಿರದೊಳಾಂತಳ್ ಮತ್ತೆ ವೈದೇಹಿ.

ಸೀತೆಯು ಅತ್ರಿಮುನಿಗಳ ಪತ್ನಿ ಅನಸೂಯೆಯನ್ನು ನೆನೆದಳು. ಹದಿಬದೆಯರ ಅಧಿದೇವಿಯಾದ ಆ ಪೂಜ್ಯಳು ತನಗೆ ರಕ್ಷೆ ಮತ್ತು ಆಶೀರ್ವಾದವಾಗಿ ನೀಡಿದ್ದ ದಿವ್ಯಸುಮವನ್ನು ಮುಡಿಯಿಂದ ತೆಗೆದು ನೋಡಿದಳು. ಅದನ್ನು ಹಿಗ್ಗಿನಿಂದ ಮತ್ತೆ ಮತ್ತೆ ನೋಡಿದಳು. ಸ್ನಾನ ಮಾಡದೆ, ಉಡದೆ, ಕೊಳೆಯ ಮೆದೆಯಾಗಿದ್ದ ತನ್ನ ಮೈಯಲ್ಲಿ ಅದೊಂದೇ ಹೂ ಹೊಚ್ಚ ಹೊಸತಾಗಿರುವುದನ್ನು ಕಂಡಳು. ಆಗ ರಾಮನಿಗೆ ತನಗೆ ಸತ್ಯಕ್ಕೆ ಶುಚಿಗೆ ಧರ್ಮಕ್ಕೆ ಸರ್ವರಿಗೆ ಮಂಗಳವು ದಿಟವೆಂದು ನಂಬಿದಳು. ಧೈರ್ಯಗೊಂಡಳು. ಸುಮರೂಪದ ಅನಸೂಯೆಯನ್ನು ಹಣೆಗೆ ಮುಟ್ಟಿಸಿಕೊಂಡು ನಮಿಸಿದಳು. ಪುಣ್ಯ ಪ್ರಸಾದವೆಂದು ಅದನ್ನು ಮತ್ತೆ ವೈದೇಹಿಯು ಶಿರದಲ್ಲಿ ಧರಿಸಿಕೊಂಡಳು.

ಸುಮರಕ್ಷೆಯು ವಜ್ರರಕ್ಷಣೆಯೆಂದು ತಿಳಿದಳು. ಧರಣೀದೇವಿಯ ಕನ್ಯೆಯು ಪ್ರತಿದಿನ ಪ್ರಾರ್ಥನಾ ತಪದಿಂದ ವಿಶ್ವಶಕ್ತಿಯ ಕೃಪೆಗೆ ಸೆರಗೊಡ್ಡಿ ಬೇಡುತ್ತಿದ್ದಳು. ಧರ್ಮವು ಅಟ್ಟಿದ ಬೇಹುಗಾರರೆಂಬಂತೆ ಮಳೆಯದಂಡು, ಮೋಡಗಳ ಗುಂಪು ಲಂಕಾ ಕನಕ ಕೋಟೆಯನ್ನು ಮುತ್ತಿತು. ಅದು ಮಳೆ ಸಿಡಿಲು ಮಿಂಚುಗಳ ಗಾಳಿ ಗುಡುಗಿನ ಘೋರ ಮುಂಗಾರ ಭೈರವನಾಗಿತ್ತು. ಅದು ಆಕಾಶದಲ್ಲಿ ಭೂಮಿಯಲ್ಲಿ ಕಾಡಿನಲ್ಲಿ ನಾಡಿನಲ್ಲಿ, ನೋಡುವವರ ಎದೆಯ ಒಡಲಿನಲ್ಲಿ, ಮೇರೆ ಮೀರಿದ ಕಡಲಿನಲ್ಲಿ ಧಿಮ್ಮೆಂದು ಧೀಂಕಿಟ್ಟು ಪಾದವನ್ನು ಎತ್ತಿ ಪಾದವನ್ನು ಇಟ್ಟು-ಲಂಕೆ ತಲ್ಲಣಿಸುವಂತೆ ಹುಚ್ಚು ಕುಣಿತ ಕುಣಿಯಿತು!

(ಕುವೆಂಪು ಶ್ರೀ ರಾಮಾಯಣದರ್ಶನಂ ಪುಸ್ತಕದಿಂದ ಆಯ್ದ ಭಾಗ)

Writer - ಡಾ.ಜಿ.ಕೃಷ್ಣಪ್ಪ

contributor

Editor - ಡಾ.ಜಿ.ಕೃಷ್ಣಪ್ಪ

contributor

Similar News