ನಂದಿಗುಡ್ಡೆ ಕೊರಗಜ್ಜ ದೈವಸ್ಥಾನ ಕಟ್ಟೆಯಲ್ಲಿ ಕಾಂಡೋಮ್ ಪತ್ತೆ ಪ್ರಕರಣ: ಆರೋಪಿ ದೇವದಾಸ್ ದೇಸಾಯಿ ಬಂಧನ
ಮಂಗಳೂರು, ಡಿ.29: ನಂದಿಗುಡ್ಡೆಯ ಕೊರಗಜ್ಜ ಕಟ್ಟೆಯ ಕಾಣಿಕೆ ಡಬ್ಬಿಗೆ ಬಳಕೆ ಮಾಡಿದ ಕಾಂಡೋಮ್ ಹಾಕಿ ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ದೇವದಾಸ್ ದೇಸಾಯಿ (62) ಎಂಬ ಆರೋಪಿಯನ್ನು ಬಂಧಿಸಲಾಗಿದೆ.
ಕೊರಗಜ್ಜ ಕಟ್ಟೆ, ಬಬ್ಬು ಸ್ವಾಮಿ ಕ್ಷೇತ್ರ ಸೇರಿದಂತೆ ನಗರದ ಸುತ್ತಮುತ್ತ ಕ್ಷೇತ್ರಗಳನ್ನು ಅಪವಿತ್ರಗೊಳಿಸರುವ ಬಗ್ಗೆ ದೂರು ದಾಖಲಾಗಿರುವ ಐದು ಪ್ರತ್ಯೇಕ ಪ್ರಕರಣಗಳ ಆರೋಪಿಯೂ ಈತನಾಗಿದ್ದಾನೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ದರ್ಗಾ, ಸಿಕ್ಖರ ಪವಿತ್ರ ಕ್ಷೇತ್ರ ಗುರುದ್ವಾರ ಸೇರಿ ಒಟ್ಟು 18 ಪವಿತ್ರ ಕ್ಷೇತ್ರಗಳಲ್ಲಿ ಇಂತಹ ದುಷ್ಕೃತ್ಯ ಎಸಗಿರುವುದನ್ನು ವಿಚಾರಣೆಯ ವೇಳೆ ಆರೋಪಿ ಒಪ್ಪಿಕೊಂಡಿರುವುದಾಗಿ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ದೈವಸ್ಥಾನದ ಸಿಸಿಟಿವಿ ಫೂಟೇಜ್ ಆಧಾರದಲ್ಲಿ ಪಾಂಡೇಶ್ವರ ಠಾಣೆ ಹಾಗೂ ಸಿಸಿಬಿ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಎದುರು ಹಾಜರುಪಡಿಸಿ ಬಳಿಕ ಪೊಲೀಸ್ ಕಸ್ಟಡಿಗೆ ಪಡೆದು ಸ್ಥಳ ಮಹಜರು ನಡೆಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
ಮೂಲತ: ಹುಬ್ಬಳ್ಳಿಯ ಉಣ್ಕಲ್ ನಿವಾಸಿಯಾಗಿರುವ ಈತ ತನ್ನ ಪತ್ನಿ ಮಕ್ಕಳಿಂದ ರ್ಪೇಟ್ಟು ಕಳೆದ ಸುಮಾರು 20 ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದು, ಆರಂಭದಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ ಈತ ಬಳಿಕ ಗುಜುರಿ ಮಾರಾಟ ಕಾರ್ಯ ಮಾಡಿ ಜೀವನ ಸಾಗಿಸುತ್ತಿದ್ದಾನೆ. ಸ್ಟೇಟ್‌ಬ್ಯಾಂಕ್ ಹಾಗೂ ಇತರ ಕಡೆಗಳಲ್ಲಿ ಬಳಸಿ ಬಿಸಾಕಿದ ಕಾಂಡೋಮ್‌ಗಳನ್ನು ಹೆಕ್ಕಿಕೊಂಡು, ತಾನು ಹುಬ್ಬಳ್ಳಿಗೆ ಹೋಗಿ ಬರುವ ಸಂದರ್ಭ ಅಲ್ಲಿಂದ ತರುವ ಕೆಲವೊಂದು ಪತ್ರಿಕೆಗಳ ತುಣುಕುಗಳಲ್ಲಿ ಪ್ರಚೋದನಾಕಾರಿ ಬರಹಗಳನ್ನು ಬರೆದು ಕಾಣಿಕೆ ಡಬ್ಬಿಗಳಲ್ಲಿ ಹಾಕುತ್ತಿದ್ದ. ತಾನು ನಂಬಿರುವ ಧರ್ಮದ ದೇವರು ಮಾತ್ರ ಈ ಭೂಲೋಕವನ್ನು ಕಾಪಾಡಲು ಶಕ್ತ ಎಂದು ಹೇಳುವ ಮನೋಸ್ಥಿತಿಯನ್ನು ಈತ ಹೊಂದಿರುವುದು ವಿಚಾರಣೆಯ ವೇಳೆ ತಿಳಿದು ಬಂದಿದೆ. ಆರೋಪಿ 18 ಕಡೆಗಳಲ್ಲಿ ಆತ ದುಷ್ಕೃತ್ಯ ಎಸಗಿರುವ ಬಗ್ಗೆ ತಿಳಿಸಿದ್ದು, ಐದು ಕ್ಷೇತ್ರಗಳಿಂದ ಮಾತ್ರವೇ ದೂರು ದಾಖಲಾಗಿದೆ. ಉಳಿದ ಕೆಲ ಕ್ಷೇತ್ರಗಳಲ್ಲಿ ಭಕ್ತರ ಧಾರ್ಮಿಕ ಭಾವನೆಗಳಿಗೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಇಂತಹ ಪ್ರಕರಣ ನಡೆದ ಕ್ಷೇತ್ರವನ್ನು ಪವಿತ್ರಗೊಳಿಸಿ ದೂರು ನೀಡದೆ ಸುಮ್ಮನೆ ಬಿಟ್ಟಿರುವುದು ತಿಳಿದು ಬಂದಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
‘‘ನಾನು ನಂಬುವ ಧರ್ಮವನ್ನು ಹೊರತುಪಡಿಸಿ ಇತರ ಧರ್ಮದ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಿದರೂ ಅದನ್ನು ತಡೆಯುವಲ್ಲಿ ಆ ಧರ್ಮದ ದೇವರು ಶಕ್ತರಾಗಿಲ್ಲ ಎಂಬುದನ್ನು ಸಾಬೀತುಪಡಿಸಲು ತಾನು ಈ ಕಾರ್ಯವನ್ನು ಮಾಡುತ್ತಿದ್ದೆ. ನನ್ನ ಕೃತ್ಯದ ಬಗ್ಗೆ ಯಾವುದೇ ಪಶ್ಚಾ ಇಲ್ಲ ’’ ಎಂದು ಆರೋಪಿ ಹೇಳಿಕೊಂಡಿದ್ದಾನೆ.
ಮಾನಸಿಕ ಅಸ್ವಸ್ಥತೆ ಕಂಡು ಬಂದಿಲ್ಲ
ಈತ ಕೋಟೆಕಾರಿನ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ತಂದೆಯ ಕಾಲದಿಂದಲೂ ಈತ ಕ್ರೈಸ್ತ ಧರ್ಮವನ್ನು ಪಾಲಿಸಿಕೊಂಡು ಬಂದಿರುವುದಾಗಿ ಹೇಳುತ್ತಾನೆ. ಸುಮಾರು 15 ವರ್ಷಗಳಿಗಳೂ ಅಧಿಕ ಕಾಲ ನಗರದಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿದ್ದ ಕಾರಣ ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ.
ಪ್ರಚೋದನಾಕಾರಿ ಬರಹಗಳನ್ನು ಕೂಡಾ ಖುದ್ದು ಬರೆಯುತ್ತಿದ್ದುದಾಗಿ ಹೇಳಿಕೊಂಡಿದ್ದಾನೆ. ಈ ದುಷ್ಕೃತ್ಯಗಳಿಗೆ ಈತ ಬೇರೆ ಯಾರ ಸಂಪರ್ಕ ಹೊಂದಿದ್ದಾನೆಯೇ ಅಥವಾ ಯಾರಾದರೂ ಈತನಿಗೆ ಯಾವುದಾದರೂ ಗಂಪು ಸಹಕಾರ ನೀಡುತ್ತಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ಮಾಡಲಾಗಿದ್ದು, ಅಂತಹ ಯಾವುದೇ ವಿಚಾರ ಕಂಡು ಬಂದಿಲ್ಲ. ಇವೆಲ್ಲವನ್ನೂ ತಾನೇ ವೈಯಕ್ತಿಕವಾಗಿ ಮಾಡಿರುವುದಾಗಿ ತಿಳಿಸಿದ್ದಾನೆ. ಈತ ಬೈಬಲನ್ನು ತಾನು ಓದಿರುವುದಾಗಿ ಹೇಳುತ್ತಿದ್ದು, ಬೇರೆಲ್ಲಾ ಧರ್ಮಗಳು ಭೂಮಿಯನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿಕೊಳ್ಳುತ್ತಾನೆ. ಈತ ಯಾವುದೇ ಚರ್ಚ್, ಧಾರ್ಮಿಕ ಕ್ಷೇತ್ರದ ಜತೆ ಸಂಪರ್ಕ ಹೊಂದಿರುವುದು ಹಾಗೂ ಈತ ಮಾನಸಿಕ ಅಸ್ವಸ್ಥನಾಗಿರುವ ಬಗ್ಗೆ ನಮ್ಮ ವಿಚಾರಣೆ ವೇಳೆ ಕಂಡು ಬಂದಿಲ್ಲ.
*ಎನ್. ಶಶಿಕುಮಾರ್, ಪೊಲೀಸ್ ಕಮಿಷನರ್, ಮಂಗಳೂರು.
ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿರುವಂತೆ ಈ ದೈವಸ್ಥಾನ, ಕೊರಗಜ್ಜ ಕಟ್ಟೆ, ಮಸೀದಿ, ಸಿಖ್ ಗುರುದ್ವಾರ( ಕೂಳೂರು) ಮುಂತಾದ ಕಡೆಗಳಲ್ಲಿನ ಕಾಣಿಕೆ ಡಬ್ಬಿಗಳಲ್ಲಿ ಕಾಂಡೋಮ್, ಭಿತ್ತಿಪತ್ರ, ಏಸುವಿನ ಕುರಿತ ಲೇಖನ ಹಾಕಿರುತ್ತಾನೆ.
* ಮಾರ್ನಮಿಕಟ್ಟೆ ಕೊರಗಜ್ಜ ಕಟ್ಟೆ
*ಬಾಬುಗುಡ್ಡೆ ಕೊರಗಜ್ಜನ ಕಾಣಿಕೆ ಡಬ್ಬಿ
*ಕೊಂಡಾಣ ದೈವಸ್ಥಾನ
*ಮಂಗಳಾದೇವಿ ದೇವಸ್ಥಾನ
*ಕದ್ರಿ ದೇವಸ್ಥಾನದ ಬಳಿಯಲ್ಲಿರುವ ರಿಕ್ಷಾ ಪಾರ್ಕ್ ನ ಬಳಿ ಕಾಣಿಕೆ ಡಬ್ಬಿ
*ಕಲ್ಲುರ್ಟಿ ದೈವಸ್ಥಾನ, ಒಮೆಗಾ ಆಸ್ಪತ್ರೆ ಬಳಿ, ಪಂಪ್ ವೆಲ್
*ಉಳ್ಳಾಲದ ದರ್ಗಾ ಬಳಿಯ ಮಸೀದಿಯ ಕಾಣಿಕೆ ಡಬ್ಬಿ
*ಕಲ್ಲಾಫು ನಾಗನ ಕಟ್ಟೆ
*ಕೊಟ್ಟಾರ ಚೌಕಿಯ ಕಲ್ಲುರ್ಟಿ ದೈವಸ್ಥಾನ
*ಉರ್ವಾ ಮಾರಿಗುಡಿ ದೇವಸ್ಥಾನದ ಕಾಣಿಕೆ ಡಬ್ಬಿ
*ಕುತ್ತಾರು ಕೊರಗಜ್ಜನ ಕಟ್ಟೆ
*ಕುಡುಪು ದೈವಸ್ಥಾನ*ಉಳ್ಳಾಲದ ಕೊರಗಜ್ಜನ ಕಾಣಿಕೆ ಡಬ್ಬಿ
*ನಂದಿಗುಡ್ಡೆಯ ಕೊರಗಜ್ಜನ ಗುಡಿ
*ಎ ಬಿ ಶೆಟ್ಟಿ ವೃತತಿದ ಬಳಿಯ ದರ್ಗಾ
*ಸಿಖ್ ಗುರುದ್ವಾರ ಗುಡಿ- ಬಂಗ್ರ ಕೂಳೂರು
*ಕೋಟ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ- ಮಂಕಿಸ್ವಾಂಡ್
*ಆದಿ ಮಾಹೇಶ್ವರಿ ದೈವಸ್ಥಾನ ಭಜನಾ ಮಂಡಳಿ ಕಾಣಿಕೆ ಡಬ್ಬಿ
*ಜೆಪ್ಪು ಮಹಾಕಾಳಿ ಪಡ್ಪು