×
Ad

ಮಂಗಳೂರು: ಬೀದಿ ಬದಿ ವ್ಯಾಪಾರಸ್ಥರಿಂದ ಪಾಲಿಕೆ ಕಚೇರಿಗೆ ಮುತ್ತಿಗೆ

Update: 2021-12-29 20:00 IST

ಮಂಗಳೂರು, ಡಿ.29: ನಗರದ ಬೀದಿ ಬದಿ ವ್ಯಾಪಾರಸ್ಥರ ಮೇಲೆ ಅಕ್ರಮ ದಾಳಿ ನಡೆಸಿ ಸೊತ್ತುಗಳನ್ನು ನಾಶಪಡಿಸಿರುವುದನ್ನು ಖಂಡಿಸಿ ಬುಧವಾರ ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ದಿ ಸಂಘದ ನೇತೃತ್ವದಲ್ಲಿ ನಗರಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲಾಯಿತು.

ಈ ಸಂದರ್ಭ ಮಾತನಾಡಿದ ಸಿಐಟಿಯು ದ,ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಕೋವಿಡ್ ಸಂಕಷ್ಟದ ಕಾಲದಲ್ಲಿ ತತ್ತರಿಸಿ ಹೋಗಿರುವ ಬಡ ಬೀದಿಬದಿ ವ್ಯಾಪಾರಿಗಳ ಮೇಲೆ ದಾಳಿ ಮಾಡಿರುವುದು ಅಮಾನುಷ ಕೃತ್ಯ ವಾಗಿದೆ. ಹೃದಯ ಹೀನ ಅಧಿಕಾರಿಗಳು ಬಡಪಾಯಿಗಳ ಸೊತ್ತುಗಳನ್ನು ನಾಶ ಮಾಡಿದ್ದಾರೆ. ಈ ರೀತಿಯ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದರು.

ಸಂಘದ ಗೌರವಧ್ಯಕ್ಷ ಬಿ.ಕೆ.ಇಮ್ತಿಯಾಝ್ ಮಾತನಾಡಿ ಬೀದಿಬದಿ ವ್ಯಾಪಾರಕ್ಕೆ ಪೂರಕವಾಗಿ 2014ರಲ್ಲಿ ಕೇಂದ್ರ ಸರಕಾರ ಬೀದಿಬದಿ ವ್ಯಾಪಾರಿಗಳ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ ಮತ್ತು 2019ರಲ್ಲಿ ಕರ್ನಾಟಕ ಸರಕಾರ ಅಧಿನಿಯಮಗಳನ್ನು ಜಾರಿಗೆ ತಂದಿದೆ. ಅದರಂತೆ ಮಂಗಳೂರಿನಲ್ಲಿ ಪೂರ್ಣ ಪ್ರಮಾಣದ ಪಟ್ಟಣ ವ್ಯಾಪಾರ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಕಾಯ್ದೆಯ ಪ್ರಕಾರ ಕಾರ್ಯಾಚರಣೆ ನಡೆಸಬೇಕಿದ್ದರೆ ಪಟ್ಟಣ ವ್ಯಾಪಾರ ಸಮಿತಿಯಲ್ಲಿ ಚರ್ಚಿಸಿ ನಿರ್ಣಯ ಮಾಡಬೇಕಾಗುತ್ತದೆ. ಆದರೆ ಇಲ್ಲಿ ನಿಯಮಗಳನ್ನು ಗಾಳಿಗೆ ತೂರಿ ದಾಳಿ ನಡೆದಿದೆ. ಸರಕಾರದ ಗುರುತಿನ ಹೊಂದಿರುವವರ ಸೊತ್ತುಗಳನ್ನು ನಾಶ ಮಾಡಿ ದರ್ಪ ತೋರಿದ್ದಾರೆ. ಕಾನೂನು ಮೀರಿ ದಾಳಿ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸುಗಳನ್ನು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಕೋಶಾಧಿಕಾರಿ ಆಸೀಫ್ ಮಂಜನಾಡಿ, ಮಾಜಿ ಕಾರ್ಯದರ್ಶಿ ಸಂತೋಷ್, ಆರ್.ಎಸ್. ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ ಮಾತನಾಡಿದರು.

ಸಂಘದ ಮುಖಂಡರಾದ ಚೆರಿಯೋನು ಸುರತ್ಕಲ್, ಖಾಜಾ ಮೊಯಿನುದ್ದಿನ್, ಶ್ರೀಧರ, ಆನಂದ, ಬೇಬಿ, ನಝೀರ್, ನೌಶಾದ್, ನಿತಿನ್ ಬಂಗೇರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರತಿಭಟನೆಗೆ ಮಣಿದ ನಗರ ಪಾಲಿಕೆ ಅಧಿಕಾರಿಗಳು

ಅನಿರ್ಧಿಷ್ಟಾವಧಿ ಹೋರಾಟಕ್ಕೆ ಮುಂದಾಗಿದ್ದ ಬೀದಿಬದಿ ವ್ಯಾಪಾರಿಗಳ ಒತ್ತಾಯಕ್ಕೆ ಮಣಿದ ಮಂಗಳೂರು ನಗರಪಾಲಿಕೆ ಪಾಲಿಕೆಯ ಪ್ರಭಾರ ಆಯುಕ್ತರೂ ಆಗಿರುವ ಮುಡಾ ಆಯುಕ್ತರು ಕಾರ್ಯಾಚರಣೆಯನ್ನು ಹಿಂಪಡೆಯುವುದಾಗಿ ತಿಳಿಸಿದರು. ಅಲ್ಲದೆ ವಶಪಡಿಸಲಾದ ಸರಕುಗಳನ್ನು ವಾಪಸ್ ನೀಡುವುದು ಮತ್ತು ಹಾನಿ ಮಾಡಲಾದ ವಸ್ತುಗಳಿಗೆ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News