×
Ad

ಮಂಗಳೂರು: ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಸಮಾನ ಮನಸ್ಕ ಸಂಘಟನೆಗಳಿಂದ ಪ್ರತಿಭಟನೆ

Update: 2021-12-29 22:56 IST

ಮಂಗಳೂರು, ಡಿ.29: ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸಿ ಮಂಗಳೂರಿನ ಸಮಾನ ಮನಸ್ಕ ನಾಗರಿಕರು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮಾತನಾಡಿ ವಿಭಜನೆಯ ರಾಜಕೀಯದ ಮೂಲಕ ಚುನಾವಣೆಯಲ್ಲಿ ಮತ ಗಳಿಸುವ ರಾಜಕೀಯ ಉದ್ದೇಶವನ್ನಷ್ಟೇ ಈ ಕಾಯ್ದೆಯು ಹೊಂದಿದೆ. ಮತಾಂತರ ನಿಷೇಧ ಕಾಯ್ದೆಯು ಎಷ್ಟರಮಟ್ಟಿಗೆ ಅಪಾಯಕಾರಿ ಎಂಬುದನ್ನು ಅದರ ಬಗ್ಗೆ ಅಧ್ಯಯನ ನಡೆಸಿದರೆ ಸ್ಪಷ್ಟವಾಗುತ್ತದೆ. ಒಂದು ಧರ್ಮದ ವ್ಯಕ್ತಿ ಇನ್ನೊಂದು ಧರ್ಮೀಯರಿಗೆ ಮಾನವೀಯ ನೆಲೆಯಲ್ಲಿ ಏನಾದರು ಸಹಾಯ ಮಾಡಿದರೆ ಅದು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಲಾಗುತ್ತದೆ. ಈ ದೇಶದ ವಿವಿಧ ಧರ್ಮೀಯರು ಬೆರೆಯುವುದನ್ನೇ ತಡೆ ಹಿಡಿಯುತ್ತದೆ. ಧಾರ್ಮಿಕ ಸ್ವಾತಂತ್ರ್ಯವು ಸಂವಿಧಾನ ಕೊಟ್ಟ ಅಧಿಕಾರವಾಗಿದೆ. ಅದನ್ನು ಕಸಿಯುವ ಪ್ರಯತ್ನ ಮಾರಕವಾಗಿದೆ. ಇದರ ವಿರುದ್ಧ ಹೋರಾಟ ಅನಿವಾರ್ಯ ಎಂದರು.

ದಲಿತ ಸಂಘಟನೆಯ ಮುಖಂಡ ದೇವದಾಸ್ ಮಾತನಾಡಿ ಹಿಂದೂ ಧರ್ಮದಲ್ಲಿ ಜಾತೀಯತೆ, ಅಸ್ಪ್ರಶ್ಯತೆ ಇದೆ. ಇದರಿಂದ ಬೇಸತ್ತು ದೇಶದ ಹಿಂದುಳಿದ ವರ್ಗದ ಜನರು ಬೇರೆ ಧರ್ಮ ಸ್ವೀಕರಿಸಿದ್ದಾರೆ. ದೇಶದಲ್ಲಿ ದಲಿತರು ಅನುಭವಿಸುತ್ತಿರುವ ಅಸ್ಪ್ರಶ್ಯತೆಯ ಬಗ್ಗೆ ಮಾತನಾಡುವ ಧೈರ್ಯ ಸರಕಾರಗಳಿಗಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನ ಇಲ್ಲದೇ ಇರುತ್ತಿದ್ದರೆ ಇಂದು ದೇಶದಲ್ಲಿ ಸಮಾನತೆಯೇ ಇರುತ್ತಿರಲಿಲ್ಲ. ಸಮಾಜದಲ್ಲಿರುವ ಸಮಸ್ಯೆಗಳ ಪರಿಹಾರ ಬಗ್ಗೆ ಸರಕಾರಕ್ಕೆ ಆಸಕ್ತಿ ಇಲ್ಲ. ಮನುಸ್ಮುತಿಯನ್ನು ತಂದು ದೇಶವನ್ನು ಮತ್ತೆ ಕರಾಳ ದಿನಗಳಿಗೆ ದೂಡುವ ಷಡ್ಯಂತ್ರ ಮಾತ್ರ ಸರಕಾರಕ್ಕಿರುವುದು ಎಂದು ಆರೋಪಿಸಿದರು.

ಮಾನವ ಹಕ್ಕುಗಳ ಹೋರಾಟಗಾರ ಫಾ. ಸೆಡ್ರಿಕ್ ಪ್ರಕಾಶ್, ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್, ಸಿಪಿಎಂ ಯಾದವ ಶೆಟ್ಟಿ, ಕಾರ್ಮಿಕ ಮುಖಂಡ ಸುನೀಲ್ ಕುಮಾರ್ ಬಜಾಲ್, ರೊನಾಲ್ಡ್ ಕ್ಯಾಸ್ಟಲಿನೊ, ಪಟ್ಟಾಭಿರಾಮ ಸೋಮಯಾಜಿ, ರೆ.ಹ್ಯೂಬರ್ಟ್ ವಾಟ್ಸನ್, ಸಿಸ್ಟರ್ ದುಲ್ಸಿನ್ ಮತ್ತಿತರರು ಮಾತನಾಡಿದರು.

ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್, ಲೇಖಕಿ ಶಹನಾಝ್ ಎಂ, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜಮಾಅತೆ ಇಸ್ಲಾಮಿ ಹಿಂದ್‌ನ ಮಂಗಳೂರು ಘಟಕದ ಅಧ್ಯಕ್ಷ ಕೆ.ಎಂ.ಅಶ್ರಫ್, ಎಸ್‌ಐಒ ದ.ಕ.ಜಿಲ್ಲಾಧ್ಯಕ್ಷ ನಿಹಾಲ್ ಮುಹಮ್ಮದ್, ಸಮುದಾಯ ಸಂಘಟನೆಯ ಮುಖಂಡ ವಾಸುದೇವ ಉಚ್ಚಿಲ್, ಶಬ್ಬೀರ್ ಅಹ್ಮದ್, ಪರಿಣಿತ ಮತ್ತಿತರರು ಉಪಸ್ಥಿತರಿದ್ದರು. ಫಾ. ವಿನೋದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News