×
Ad

ಮಂಗಳೂರು: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ವತಿಯಿಂದ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ

Update: 2021-12-30 12:00 IST

ಮಂಗಳೂರು: ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ  (ಮೀಫ್) ವತಿಯಿಂದ ಬರಕಾ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಅಡ್ಯಾರ್ ಬರಕಾ ಇಂಟರ್ ನ್ಯಾಶನಲ್ ಸ್ಕೂಲ್ ಆಡಿಟೋರಿಯಂನಲ್ಲಿ ಇಂದು  ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಕೊರೋನ ಸಂದರ್ಭದಲ್ಲಿ ಉಂಟಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಆನ್ಲೈನ್ ಶಿಕ್ಷಣದ ಬಗ್ಗೆ ವಿವರಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಶಿಕ್ಷಕರ ತರಬೇತಿ, ಕಲಿಕಾ ಕೌಶಲ್ಯದ ಬಗ್ಗೆ ಗಮನ ಹರಿಸಬೇಕಾದ ಅಂಶಗಳ ಬಗ್ಗೆ ವಿವರಿಸಿ, ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಮಾತನಾಡುತ್ತಾ, ಕೋರೋನ ನಂತರದ ದಿನಗಳಲ್ಲಿ ಶಿಕ್ಷಕರಿಗೆ ತರಬೇತಿಯ ಅಗತ್ಯ ಮನಗಂಡು ಒಕ್ಕೂಟದ 28 ವಿದ್ಯಾ ಸಂಸ್ಥೆಗಳ 130 ಶಿಕ್ಷಕರಿಗೆ ಈ ದಿನ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ಉತ್ತಮ ಪ್ರತಿಕ್ರಿಯೆ ಮತ್ತು ಸಹಕಾರ ದೊರೆತಿದೆ. ಮುಂದಿನ ಹಂತದಲ್ಲಿ ಯುಪಿಎಸ್ ಸಿ ಪರೀಕ್ಷೆಗೆ ತರಬೇತಿ, ಗಣಿತ ಮತ್ತು ವಿಜ್ಞಾನದ ಬಗ್ಗೆ ಎರಡು ತಿಂಗಳ ಆನ್ಲೈನ್ ತರಬೇತಿ ಯೋಜನೆಯನ್ನು ಒಕ್ಕೂಟದ ವತಿಯಿಂದ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಸಮಾರಂಭದ ಮುಖ್ಯ ಅತಿಥಿ ಬರಕಾ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಕಾಲೇಜಿನ ಚಯರ್ ಮ್ಯಾನ್ ಮೊಹಮ್ಮದ್ ಅಶ್ರಫ್ ಬಜ್ಪೆ ಮುಂದಿನ ಜನಾಂಗವನ್ನು ರೂಪಿಸುವ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆ ಗಳ ಮೇಲೆ ಮಹತ್ವದ ‌ಹೊಣೆಗಾರಿಕೆ ಇದೆ. ಇಂತಹ ಮಹತ್ವದ ಕೆಲಸ ದಲ್ಲಿ ತೊಡಗಿರುವ ಶಿಕ್ಷಕರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಶಿಕ್ಷಕರಿಗೆ ತರಬೇತಿ ನೀಡಲು ಆಗಮಿಸಿದ ಸಂಪನ್ಮೂಲ ವ್ಯಕ್ತಿ ಪ್ರೊ.ರಾಜೇಂದ್ರ ಭಟ್ ಮಾತನಾಡುತ್ತಾ, ಕರಾವಳಿಯ 130ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳನ್ನು ‌ಹೊಂದಿರುವ ಮುಸ್ಲಿಂ ಶಿಕ್ಷಣ ಸಂಸ್ಥೆ ಗಳ ಒಕ್ಕೂಟ ಎಲ್ಲಾ ಜಾತಿ, ಧರ್ಮದ ಜನರ ಮಕ್ಕಳಿಗೂ ಕನಿಷ್ಟ ಶುಲ್ಕ, ಸಾಕಷ್ಟು ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಶಿಕ್ಷಣ ನೀಡುತ್ತಿರುವುದರ ಜೊತೆ ತರಬೇತಿ ಮೂಲಕ ಮಹತ್ವದ ಕಾರ್ಯ ಮಾಡುತ್ತಿದ್ದಾರೆ ಎಂದರು.

ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಅಬ್ದುಲ್ ರಹ್ಮಾನ್, ಬಿ.ಎ.ನಝೀರ್, ಬಿ.ಮುಹಿಯದ್ದಿ ಮೊದಲಾದವರು ಉಪಸ್ಥಿತರಿದ್ದರು. ಒಕ್ಕೂಟದ ಜಂಟಿ ಕಾರ್ಯದರ್ಶಿ ರಿಯಾಝ್ ಅಹ್ಮದ್ ಸ್ವಾಗತಿಸಿದರು. ಉಪನ್ಯಾಸಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News