×
Ad

ಧಾರ್ಮಿಕ ಕೇಂದ್ರಗಳ ಮಲಿನಗೊಳಿಸುವ ಪ್ರಕರಣಗಳ ಪತ್ತೆಯೇ ಸವಾಲಿನದ್ದು : ಕಮಿಷನರ್ ಶಶಿಕುಮಾರ್

Update: 2021-12-30 17:50 IST

ಮಂಗಳೂರು, ಡಿ.30: ಕಳೆದ ಒಂದು ವರ್ಷದಲ್ಲಿ ನಗರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿರುವಂತಹ, ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಲಾದ ಪ್ರಕರಣಗಳನ್ನು ಪತ್ತೆಯೇ ಪ್ರಮುಖ ಸವಾಲಿನ ಕಾರ್ಯವಾಗಿತ್ತು. ಆದರೆ ಅವೆಲ್ಲಾ ಪ್ರಕರಣಗಳ ಜತೆಗೆ ಬಹುತೇಕ ಎಲ್ಲಾ ಪ್ರಕರಣಗಳನ್ನು ಬೇಧಿಸುವಲ್ಲಿ ಮಂಗಳೂರು ಪೊಲೀಸ್ ತಂಡ ಸಫಲವಾಗಿರುವ ಬಗ್ಗೆ ಸಂತೃಪ್ತಿಯಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

2021ರಲ್ಲಿ ನಡೆದ ಅಪರಾಧ, ಕಾನೂನು ಸುವ್ಯವಸ್ಥೆ, ಸಾಮಾಜಿಕ ಕಳಕಳಿ ಸೇರಿದಂತೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೈಗೊಂಡ ವಿವಿಧ ಕಾರ್ಯಾಚರಣೆಗಳ ಕುರಿತಂತೆ ಸುದ್ದಿಗೋಷ್ಠಿಯಲ್ಲಿಂದು ಅವರು ಮಾಹಿತಿ ನೀಡಿದರು.

ಈ ವರ್ಷದ ಜನವರಿ ಆರರಿಂದ ನಗರದ ಹಲವು ಕಡೆಗಳಲ್ಲಿ ದೇವಸ್ಥಾನ, ದೈವಸ್ಥಾನ, ದರ್ಗಾ, ಸಿಖ್ಖರ ಪವಿತ್ರ ಕೇಂದ್ರಗಳ ಕಾಣಿಕೆ ಡಬ್ಬಗಳಲ್ಲಿ ಅವಹೇಳನಕಾರಿ ಬರಹಗಳನ್ನು ಒಳಗೊಂಡ ನಕಲಿ ನೋಟು, ಅನಪೇಕ್ಷಿತ ವಸ್ತುಗಳನ್ನು ಹಾಕಿ ಅಪವಿತ್ರಗೊಳಿಸುವ ಕಾರ್ಯ ನಡೆದಿದೆ. ಇದರ ಜತೆಯಲ್ಲೇ ನಾಗಬನ ಕ್ಷೇತ್ರಗಳನ್ನೂ ಅಪವಿತ್ರಗೊಳಿಸುವ ಕಾರ್ಯ ನಗರದಲ್ಲಿ ನಡೆದಿದ್ದು, ಜನರ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿತ್ತು. ಇದು ಹಲವಾರು ಪ್ರತಿಭಟನೆ, ಜನರ ವಿರೋಧಕ್ಕೂ ಕಾರಣವಾಗಿತ್ತು. ಹಾಗಾಗಿ ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವುದು ನಮ್ಮ ಪಾಲಿಗೆ ಸವಾಲಾಗಿದ್ದು, ಎಲ್ಲಾ ಪ್ರಕರಣಗಳ ಆರೋಪಿಗಳನ್ನು ಈಗಾಗಲೇ ಬಂಧಿಸಿರುವ ಸಮಾಧಾನವಿದೆ ಎಂದು ಅವರು ಹೇಳಿದರು.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಬ್ಜಿ ಆಟಕ್ಕೆ ಸಂಬಂಧಿಸಿ ನಡೆದ ಬಾಲಕನ ಹತ್ಯೆ ಪ್ರಕರಣ, ನಗರದ ಹೊಯ್ಗೆ ಬಜಾರ್‌ನಲ್ಲಿ ಒಂದೂವರೆ ವರ್ಷದ ಪುಟ್ಟ ಮಗುವಿನ ಮೇಲಿನ ಲೈಂಗಿಕ ದೌರ್ಜನ್ಯ, ಪರಾರಿಯಲ್ಲಿ 8ರ ಹರೆಯ ಬಾಲಕಿಯ ಮೇಲಿನ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣ ಅತ್ಯಂತ ಮನಕಲಕುವ ಪ್ರಕರಣಗಳಾಗಿದ್ದವು ಎಂದು ಅವರು ಹೇಳಿದರು.

ಇದಲ್ಲದೆ ಕೇರಳದ ಕುಂಬ್ಳೆಯ ಯುವಕನನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿ ಹನಿಟ್ರಾಪ್‌ಗೊಳಿಸಿದ ಪ್ರಕರಣ, ಮಾಯಾ ಮತ್ತು ಕಾರ್ಖಾನಾ ಗ್ಯಾಂಗ್ ಆರೋಪಿಗಳ ಬಂಧನ, ರವಿ ಪೂಜಾರಿ ಸಹಚರನ ಕೊಲೆ ಸ್ಕೆಚ್ ಪ್ರಕರಣ, ಮೂಡಬಿದ್ರೆ ದರೋಡೆ ಪ್ರಕರಣ, ನಕಲಿ ಆರ್‌ಟಿಪಿಸಿಆರ್ ಪ್ರಮಾಣ ಪತ್ರ ಮಾಡಿಸಿಕೊಂಡ ಪ್ರಕರಣ, ಮಹಿಳಾ ಸಿಬ್ಬಂದಿ ಜತೆ ಆರೋಗ್ಯ ಇಲಾಖೆಯ ವೈದ್ಯನಿಂದ ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಇದಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಉದ್ಯೋಗ ಅರಸಿ ವಿದೇಶಕ್ಕೆ ಹೋಗಲು ತಮಿಳುನಾಡು ಮೂಲಕ ಅಕ್ರಮವಾಗಿ ಮಂಗಳೂರಿಗೆ ಬಂದು ಆಶ್ರಯ ಪಡೆದಿದ್ದ 38 ಮಂದಿ ಶ್ರೀಲಂಕಾ ನಿವಾಸಿಗಳನ್ನು ಸಿಸಿಬಿ ಪೊಲೀಸರು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಡ್ರಗ್ಸ್ ಸೇವನೆ ಯುವ ಪೀಳಿಗೆಗೆ ಅಂಟಿತ ಶಾಪವಾಗಿದ್ದು, ಈ ಮಾದಕ ದ್ರವ್ಯಗಳ ಸಾಗಾಟ, ಮಾರಾಟ ಮತ್ತು ಸೇವನೆಯ ವಿರುದ್ಧ ಪೊಲೀಸ್ ಇಲಾಖೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ. ಈ ಸಾಲಿನಲ್ಲಿ ಮೂರು ಮಂದಿ ನೈಜಿರೀಯಾ ದೇಶದ ಆರೋಪಿಗಳು ಸೇರಿದಂತೆ ಒಟ್ಟು 328 ಪ್ರಕರಣಗಳಲ್ಲಿ 492 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಗಾಂಜಾ, ಎಂಡಿಎಂ ಟಾಬ್ಲೆಟ್, ಕೊಕೇನ್, ಹೆರಾಯಿನ್, ಎಂಡಿಎಎಂ ಪೌಡರ್, ಎಲ್‌ಎಸ್‌ಡಿ ಸ್ಟಾಂಪ್ ಸೇರಿದಂತೆ 85 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಈ ಸಾಲಿನಲ್ಲಿ ಪೊಲೀಸರ ಪಾಲಿಗೆ ಮತ್ತೊಂದು ಸವಾಲಿನ ಕಾರ್ಯವಾಗಿದ್ದ ಸರಗಳ್ಳತನ, ಮನೆಗಳ್ಳತನಕ್ಕೆ ಸಂಬಂಧಿಸಿ 16 ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚಿ 28.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ, ಮನೆ ಕಳವು ಪ್ರಕರಣದ ಅಂತಾರಾಜ್ಯ ಕಳ್ಳನ ಬಂಧಿಸಿ 16.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ. ಪೊಲೀಸರಿಗೆ ಸವಾಲಾಗಿದ್ದ ನಗರದ ವಿವಿಧ ಕಡೆ ನಡೆದ 24 ಸರಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಏಳು ಮಂದಿ ಆರೋಪಿಗಳ ಬಂಧನ ಮಾಡಲಾಗಿದೆ ಎಂದು 2021ರ ಅಪರಾಧ ಪ್ರಕರಣಗಳ ಬಗ್ಗೆ ಕಮಿಷನರ್ ವಿವರ ನೀಡಿದರು.

ನಗರದ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ವೇಳೆ ಅನಗತ್ಯವಾಗಿ ಸಂಚಾರ, ಮದ್ಯಪಾನ, ಗಾಂಜಾ ಸೇವನೆ ತಡೆಗಟ್ಟಲು ಅಪರೇಷನ್ ಸುರಕ್ಷಾ ಕಾರ್ಯಕ್ರಮ ಆರಂಭಿಸಲಾಗಿದೆ. ಮಂಗಳಮುಖಿಯಾರಿಗೆ ಪೊಲೀಸ್ ಕೋವಿಡ್ ಸಮನ್ವಯ ಸಹಾಯವಾಣಿ, ಗೃಹ ರಕ್ಷಕ ದಳದ ಸಿಬ್ಬಂದಿ ರಾಕೇಶ್ ಎಂಬವರು ಕರ್ತವ್ಯದಲ್ಲಿದ್ದಾಗ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಅವರಿಗೆ ಪೊಲೀಸರಿಂದ ಸಂಗ್ರಹಿಸಲಾದ 5.26 ಲಕ್ಷ ರೂ. ಹಸ್ತಾಂತರ, ವಿದೇಶಿಯರಿಗೆ ಸಮನ್ವಯ ಕಾರ್ಯಕ್ರಮ, ಕೋವಿಡ್ ಸಂದರ್ಭ ಪೊಲೀಸ್ ಸಿಬ್ಬಂದಿಗೆ ನಾಲ್ಕು ತಿಂಗಳಲ್ಲಿ (ದಿನವೊಂದಕ್ಕೆ ಸರಾಸರಿ 500ರಿಂದ 700 ಮಂದಿಗೆ ) 84,000 ಭೋಜನ ವ್ಯವಸ್ಥೆ ಮಾಡಲಾಗಿದೆ. ಮಹಿಳಾ ಸುರಕ್ಷತೆಗಾಗಿನ 112 ಸಹಾಯವಾಣಿಯ ಬಗ್ಗೆ ಜಾಗೃತಿ, ಆಸಕ್ತ ಪೊಲೀಸ್ ಆಕಾಂಕ್ಷಿ ಅಭ್ಯರ್ಥಿಗಳಿಗೆ ತರಬೇತಿ, ಪ್ರಾಪರ್ಟಿ ಪೆರೇಡ್, ರೌಡಿ ಶೀಟರ್‌ನಿಂದ ಮುಕ್ತಗೊಂಡವರಿಗೆ ಪರಿವರ್ತನಾ ಸಭೆ, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ದೈಹಿಕ ಸದೃಢತೆ ಕಾರ್ಯಾಗಾರ, ಕೋವಿಡ್ ಸಂದರ್ಭ ಪೊಲೀಸ್ ಇಲಾಖೆಯ ಗರ್ಭಿಣಿ ಮಹಿಳೆಯರಿಗೆ ಹಾಗೂ 55 ವರ್ಷ ಮೇಲ್ಪಟ್ಟ ಎಲ್ಲಾ ಎಎಸ್‌ಐ ಹಾಗೂ ಸಿಬ್ಬಂದಿಗೆ ಮನೆಯಿಂದ ಕಚೇರಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿತ್ತು ಎಂದು ವಿವಿಧ ಕಾರ್ಯಾಚರಣೆಗಳ ಸಮಗ್ರ ವಿವರವನ್ನು ಪೊಲೀಸ್ ಆಯುಕ್ತರು ನೀಡಿದರು.

ಗೋಷ್ಠಿಯಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್, ಚೆನ್ನಬಸಪ್ಪ ಹಡಪದ್, ಎಸಿಪಿಗಳಾದ ರಂಜಿತ್ ಬಂಡಾರು, ಪಿ.ಎ. ಹೆಗಡೆ, ಎಂ.ಎ. ಉಪಾಸೆ, ರವೀಶ್ ನಾಯಕ್, ಮಹೇಶ್ ಕುಮಾರ್, ಎಂ.ಎ. ನಟರಾಜ್ ಮೊದಲಾದವರು ಉಪಸ್ಥಿತರಿದ್ದರು.

ಆರೋಪಿ ವಕೀಲ ರಾಜೇಶ್ ಭಟ್ ಬಂಧಿಸಲಾಗದ ಬಗ್ಗೆ ಬೇಸರವಿದೆ

ಮಂಗಳೂರಿನಲ್ಲಿ ಭಾರೀ ಸುದ್ದಿಯಾಗಿದ್ದ ಕಾನೂನು ವಿದ್ಯಾರ್ಥಿ ಮೇಲೆ ವಕೀಲನಿಂದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಸುಮಾರು ಎರಡು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿ ವಕೀಲ ರಾಜೇಶ್ ಭಟ್ ಎಂಬಾತನನ್ನು ಪೊಲೀಸರಿಂದ ಬಂಧಿಸಲು ಸಾಧ್ಯವಾಗದಿರುವ ಬಗ್ಗೆ ಬೇಸರವಿದೆ. ಆದರೆ ಈ ಪ್ರಕರಣದಲ್ಲಿಯೂ ಡಿಸಿಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಹಾಗೂ ಎಸಿಪಿ ರಂಜಿತ್ ಅವರು ತನಿಖಾಧಿಕಾರಿಯಾಗಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ವಹಿಸಿದ್ದರು. ಅಂತೂ ಆರೋಪಿ ನ್ಯಾಯಾಲಯಕ್ಕೆ ಶರಣಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ. ನಗರದ ವಿವಿಧ ಕಾಲೇಜುಗಳಲ್ಲಿ ಸಂಭವಿಸಿದ ಆರು ರ್‍ಯಾಗಿಂಗ್‌ ಪ್ರಕರಣಗಳಿಗೆ ಸಂಬಂಧಿಸಿ 40ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಲಾಗಿದೆ. ಇದಲ್ಲದೆ ನಗರದಲ್ಲಿ ಭಿನ್ನಮತೀಯ ಯುವಕ, ಯವತಿಯರ ಮೇಲಿನ ಹಲ್ಲೆ, ದೌಜನ್ಯಕ್ಕೆ ಸಂಬಂಧಿಸಿದ 6 ಪ್ರಕರಣಗಳಲ್ಲಿ 24 ಮಂದಿ ಆರೋಪಿಗಳನ್ನು ಬಂಧಿಸಿ ಇಂತಹ ಕೃತ್ಯಗಳನ್ನು ನಡೆಸದಂತೆ ಎಚ್ಚರಿಕೆಯ ಸಂದೇಶ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.

ಪೊಲೀಸ್ ಸಿಬ್ಬಂದಿಗೆ ತುಳು ಮತ್ತು ಬ್ಯಾರಿ ಕಲಿಕೆ ತರಬೇತಿ ಮುಂದುವರಿಕೆ

ಈ ವರ್ಷ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ 50 ಮಂದಿ ತುಳು ಮತ್ತು ಬ್ಯಾರಿ ಭಾಷಾ ಕಲಿಕೆ ತರಬೇತಿಯನ್ನು ಪಡೆದಿದ್ದು, ಮುಂದಿನ ವರ್ಷವನ್ನೂ ಇದನ್ನು ಮುಂದುವರಿಸುವ ಆಲೋಚನೆಯಿದೆ. 2021ನೆ ಸಾಲಿನಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 1,22,293 ಪ್ರಕರಣಗಳನ್ನು ದಾಖಲಿಸಿ 5,86,85,550 ರೂ. ದಂಡ ಸಂಗ್ರಹಿಸಿ ಸರಕಾರಕ್ಕೆ ಜಮಾ ಮಾಡಲಾಗಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News