×
Ad

ನಮ್ಮೂರು ಸ್ವಚ್ಛವಾಗಿರಲಿ: ಹರೇಕಳ ಹಾಜಬ್ಬ

Update: 2021-12-30 20:10 IST

ಮಂಗಳೂರು, ಡಿ.30: ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರತಿಯೊಂದು ಊರು ಸ್ವಚ್ಛವಾಗಿದ್ದರೆ ಇಡೀ ದೇಶವೇ ಸ್ವಚ್ಛವಾಗಿರುತ್ತದೆ ಎಂದು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅಭಿಪ್ರಾಯಪಟ್ಟಿದ್ದಾರೆ.

ನೆಹರೂ ಯುವ ಕೇಂದ್ರ, ಎನ್‌ಸಿಸಿ ತಂಡ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ‘ಸ್ವಚ್ಛತಾ ಇವಿಎಂ ಶ್ರಮದಾನ ಹಾಗೂ ಪುನೀತ್ ಸಾಗರ ಅಭಿಯಾನದ ಭಾಗವಾಗಿ ನಗರದ ತೋಟಬೆಂಗ್ರೆಯಲ್ಲಿ ಗುರುವಾರ ನಡೆದ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರನ್ನು ಸ್ವಚ್ಚವಾಗಿಡುವಲ್ಲಿ ನಾವೆಲ್ಲರೂ ಕೈಜೋಡಿಸಬೇಕಿದೆ. ಅದು ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ ಎಂದು ಹರೇಕಳ ಹಾಜಬ್ಬ ಹೇಳಿದರು. ಬಳಿಕ ಮಾತನಾಡಿದ 18 ಕೆಎಆರ್ ಬೆಟಾಲಿಯನ್ ಎನ್‌ಸಿಸಿ ಕಮಾಂಡಿಂಗ್ ಆಫೀಸರ್ ಕರ್ನಲ್ ನಿತಿನ್ ಬಿಢೆ, ಸ್ವಚ್ಛತಾ ಅಭಿಯಾನವು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ನಮ್ಮ ಪ್ರವಾಸಿ ತಾಣ, ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಪ್ರತೀ ದಿನವೂ ಸ್ಚಚ್ಛವಾಗಿಡಬೇಕಿದೆ ಎಂದರು.

ನೆಹರೂ ಯುವ ಕೇಂದ್ರ ಜಿಲ್ಲಾ ಸಮನ್ವಯಾಧಿಕಾರಿ ರಘುವೀರ್ ಸೂಟರ್‌ ಪೇಟೆ ಮಾತನಾಡಿದರು. ಈ ಸ್ವಚ್ಛತಾ ಅಭಿಯಾನಕ್ಕೆ ಅಭಿಸಾರಂಗ್ ಯುವ ಸಂಘಟನೆಯ ಸಂಕೇತ್ ಕುಮಾರ್, ಶಿಲ್ಪಾಬೆಂಗ್ರೆ, ಮಂಗಳೂರು ನಗರ ರೋಟರಿ ಕ್ಲಬ್‌ನ ಡಾ.ರಂಜನ್ ಮತ್ತಿತರರು ಸಾಥ್ ನೀಡಿದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವಾ, ಬೆಂಗ್ರೆ ಮಹಾಜನ ಸಭಾದ ಅಧ್ಯಕ್ಷ ಕೇಶವ ಕರ್ಕೇರಾ, ಸಂಕೇತ್ ಬೆಂಗ್ರೆ, ಶಿಲ್ಪಾಬೆಂಗ್ರೆ, ಡಾ.ರಾಜನ್, ನೆಹರೂ ಯುವ ಕೇಂದ್ರದ ಆಶಿಸ್, ರೋವಿನಾ, ಸೂಗನಗೌಡ, ಮೋಹನ್ ಬೆಂಗ್ರೆ ಉಪಸ್ಥಿತರಿದ್ದರು.

ಸ್ವಚ್ಚತಾ ಅಭಿಯಾನದಲ್ಲಿ 450ಕ್ಕೂ ಹೆಚ್ಚು ಎನ್‌ಸಿಸಿ ಕೆಡೆಟ್‌ಗಳು ಮತ್ತು ಸ್ವಯಂ ಸೇವಕರು ಕಡಲ ತೀರದಿಂದ ಸುಮಾರು 5,200 ಕೆಜಿ ಪ್ಲಾಸ್ಟಿಕ್ ಸಹಿತ ತ್ಯಾಜ್ಯವನ್ನು ಸಂಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News