ಜಾಲಿ ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ ಪ್ರಕಟ
ಭಟ್ಕಳ: ಡಿ.27ರಂದು ನಡೆದ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ ಗುರುವಾರ ಘೋಷಣೆ ಯಾಗಿದ್ದು ಆಡಳಿತ ಬಿಜೆಪಿ ಪಕ್ಷವು ಕೇವಲ ಮೂರು ಸ್ಥಾನಗಳಿಷ್ಟೇ ತೃಪ್ತಿಪಟ್ಟುಕೊಂಡರೆ ತಂಝೀಮ್ ಬೆಂಬಲಿತ ಪಕ್ಷೇತರ ಸದಸ್ಯರು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವುದರ ಮೂಲಕ ಮೊತ್ತೊಮ್ಮೆ ಪಾರುಮತ್ಯ ಮೆರೆದಿದ್ದಾರೆ.
ಜಾಲಿ ಪ.ಪಂನಲ್ಲಿ 20 ವಾರ್ಡುಗಳಿದ್ದು 7 ವಾರ್ಡುಗಳಲ್ಲಿ ತಂಝೀಮ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿ ದ್ದರು. ಉಳಿದ 13 ವಾರ್ಡಗಳಲ್ಲಿ ಚುನಾವಣೆ ನಡೆದಿದ್ದು ಅದರಲ್ಲಿ 6 ತಂಝೀಮ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಮತ್ತು 4 ವಾರ್ಡುಗಳಲ್ಲಿ ತಂಝೀಮ್ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಗಳ ಜಯಭೇರಿ ಬಾರಿಸಿದ್ದರೆ. ಆದರೆ ಆಡಳಿತ ಪಕ್ಷವಾಗಿರುವ ಬಿಜೆಪಿ ಕೇವಲ 3 ವಾರ್ಡುಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.
1ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಮೊಗೇರ 2ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿ ಪದ್ಮಾವತಿ ಸುಬ್ರಾಯ ನಾಯ್ಕ, 3ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿ ರಮೇಶ ಮಾದೇವ ನಾಯ್ಕ, 4 ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿ ಶಾಹೀನಾ ಶೇಖ್, 6ನೇ ವಾರ್ಡಿನಿಂದ ಪಕ್ಷೇತರ ಅಭ್ಯರ್ಥಿ ಮಿಸ್ಬಾ ಉಲ್ ಹಕ್ ಶೇಖ್, 8ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿ ಲೀಲಾವತಿ ಗಜಾನನ ಆಚಾರಿ, 9 ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿ ದಯಾನಂದ ನಾಯ್ಕ, 10ನೇ ವಾರ್ಡಿನಿಂದ ಪಕ್ಷೇತರ ಅಭ್ಯರ್ಥಿ ನಾಗರಾಜ ನಾಯ್ಕ, 11ನೇ ವಾರ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿ ರಮೇಶ ಈರಯ್ಯ ಗೊಂಡ, 19ನೇ ವಾರ್ಡಿನಿಂದ ಪಕ್ಷೇತರ ಅಭ್ಯರ್ಥಿ ಮಹ್ಮದ ತೌಫಿಖ್ ಬ್ಯಾರಿ, 20ನೇ ವಾರ್ಡಿನಿಂದ ಪಕ್ಷೇತರ ಅಭ್ಯರ್ಥಿ ಇರ್ಫಾನ್ ಅಹ್ಮದ್ ಜಯಗಳಿಸಿದ್ದಾರೆ.
ಜಾಲಿ ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 20 ವಾರ್ಡಗಳಿದ್ದು, 13 ವಾರ್ಡಗಳಿಗೆ ಚುನಾವಣೆ ನಡೆದಿತ್ತು. ವಾರ್ಡ್ ನಂ: 5, 7, 12, 13, 15, 16, 17 ರಲ್ಲಿ ತಜೀಮ್ ಬೆಂಬಲದಿಂದ ನಾಮಪತ್ರ ಸಲ್ಲಿಸಿದ್ದ ಪಕ್ಷೇತರ ಅಭ್ಯರ್ಥಿಗಳು ಚುನಾವಣೆ ಕಣದಲ್ಲಿ ಯಾವುದೇ ಸ್ಪರ್ಧಿಗಳು ಇರದ ಕಾರಣ ಅವಿರೋಧವಾಗಿ ಆಯ್ಕೆ ಆಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂತೋಷ್ ನಾಯ್ಕ, ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೇಸ್ ಹವಾ ಎದ್ದು ಕಾಣುತ್ತಿದ್ದು ಮುಂಬರುವ ದಿನಗಳಲ್ಲಿ ಕಾಂಗ್ರೇಸ್ ರಾಜ್ಯಕ್ಕೆ ಅನಿವಾರ್ಯ ಎಂದು ಮತದಾರರ ಒಲವು ತೋರಿಸಿದ್ದಾರೆ ಎಂದರು.
ಬಿಜೆಪಿ ಮಂಡಳ ಅಧ್ಯಕ್ಷ ಸುಭ್ರಾಯ ದೇವಾಡಿಗ ಮಾತನಾಡಿ, ಜಾಲಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯ ಮೂರು ಅಭ್ಯರ್ಥಿಗಳು ಗೆಲುವು ಸಾಧಿಸಿ ಹಿಂದಿನ ಕ್ಷೇತ್ರಗಳನ್ನು ನಾವು ಉಳಿಸಿಕೊಂಡಿದ್ದೇವೆ ಎಂದರು.
ಎಸ್.ಡಿ.ಪಿ.ಐ ಎಂಟ್ರಿ: ಭಟ್ಕಳ ತಾಲೂಕಿನಲ್ಲಿ ಎಸ್ಡಿಪಿಐ ಪಕ್ಷ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದು ಈ ಬಾರಿಯ ಜಾಲಿ ಪ.ಪಂ. ಚುನಾವಣೆಯಲ್ಲಿ ಎಸ್.ಡಿ.ಪಿಐ ಜಿಲ್ಲಾ ಉ.ಕ. ಜಿಲ್ಲಾಧ್ಯಕ್ಷ ತೌಸೀಫ್ ಬ್ಯಾರಿ ಹಾಗೂ ಭಟ್ಕಳ ತಾಲೂಕಾಧ್ಯಕ್ಷ ವಸೀಮ್ ಮನೆಗಾರ ತಂಝೀಮ್ ಸಂಸ್ಥೆಯ ಬೆಂಬಲದೊಂದಿಗೆ ಚುನಾವಣೆ ಎದುರಿಸಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಉತ್ತರ ಕನ್ನಡ ಜಿಲ್ಲಾ ರಾಜಕೀಯದಲ್ಲಿ ಎಸ್.ಡಿ.ಪಿಐ ಪಕ್ಷ ತನ್ನ ಬೇರನ್ನು ಗಟ್ಟಿಗೊಳಿಸಿಕೊಳ್ಳುತ್ತಿದೆ.