ಉಡುಪಿ: ನೇಕಾರರ ಮನೆಗೆ ಭೇಟಿ ನೀಡಿದ ಜವುಳಿ ಸಚಿವರು
Update: 2021-12-31 19:26 IST
ಉಡುಪಿ, ಡಿ.31: ಉಡುಪಿ ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸಿದ ರಾಜ್ಯದ ಕೈಮಗ್ಗ ಮತ್ತು ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಬಿ. ಪಾಟೀಲ ಮುನೇನಕೊಪ್ಪ ಅವರು ಬೆಳಗ್ಗೆ ನಗರದ ನೇಕಾರರೊಬ್ಬರ ಮನೆಗೆ ತೆರಳಿ ಕರಾವಳಿಯ ಕೈಮಗ್ಗ ನೇಕಾರಿಕೆಯನ್ನು ಪ್ರತ್ಯಕ್ಷವಾಗಿ ಕಂಡು, ಹಿರಿಯ ನೇಕಾರರಿಂದ ಮಾಹಿತಿಗಳನ್ನು ಪಡೆದುಕೊಂಡರು.
ನಗರದ ದೊಡ್ಡಣಗುಡ್ಡೆಯಲ್ಲಿರುವ ನೇಕಾರರ ಕಾಲನಿಯ ಸೀತಾರಾಮ ಶೆಟ್ಟಿಗಾರ್ ಅವರ ಮನೆಯಲ್ಲಿ ಕೈಮಗ್ಗ ನೇಕಾರಿಕೆಯನ್ನು ಪ್ರತ್ಯಕ್ಷವಾಗಿ ಕಂಡು, ಅವರಿಂದ ನೇಕಾರಿಕೆಯ ಕಷ್ಟ, ಸಮಸ್ಯೆಗಳು, ಸರಕಾರದಿಂದ ನಿರೀಕ್ಷಿಸುವ ಸಹಾಯಗಳ ಕುರಿತು ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಕೈಮಗ್ಗ ಮತ್ತು ಜವುಳಿ ಇಲಾಖೆಯ ಅಧಿಕಾರಿಗಳು ಹಾಗೂ ಉಡುಪಿ ಪ್ರಾಥಮಿಕ ನೇಕಾರರ ಸಹಕಾರಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲೆಯ ನೇಕಾರರೊಬ್ಬರ ಮನೆಗೆ ಸಚಿವರೊಬ್ಬರು ಭೇಟಿ ನೀಡಿದ್ದು ಇದೇ ಮೊದಲ ಬಾರಿ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು.