×
Ad

ಬೀಡಿ ಕಾರ್ಮಿಕರಿಗೆ ವಾರಪೂರ್ತಿ ಕೆಲಸ, ಇ-ನಾಮಿನೇಷನ್ ಅವಧಿ ವಿಸ್ತರಣೆಗೆ ಒತ್ತಾಯ

Update: 2021-12-31 19:48 IST

ಉಡುಪಿ, ಡಿ.31: ಕೇಂದ್ರ-ರಾಜ್ಯ ಸರಕಾರಗಳು ಧೂಮಪಾನ ನಿಷೇಧ ಜಾರಿಗೆ ತರಲು ನಿರಂತರವಾಗಿ ಕೆಲಸ ಮಾಡುತ್ತಿದ್ದು, ತಂಬಾಕು ಕೈಗಾರಿಕೆಯಲ್ಲಿ ಇರುವ ಲಕ್ಷಾಂತರ ಬೀಡಿ ಕಾರ್ಮಿಕರು, ತಂಬಾಕು ಬೆಳೆಗಾರರು, ಲೇಬಲ್ ಕಾರ್ಮಿಕರು, ಸಾಗಾಣಿಕೆದಾರರು, ಮಾರಾಟಗಾರರಿಗೆ ಪರಿಹಾರ ನೀಡದೆ ಬೀದಿಗೆ ತಳ್ಳುವ ನೀತಿಯನ್ನು ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕ ಫೆಡರೇಶನ್ (ಸಿಐಟಿಯು) ಖಂಡಿಸಿದೆ.

ಸರಕಾರ ಇವರಿಗೆ ಪರ್ಯಾಯ-ಪರಿಹಾರವನ್ನು ನೀಡುವ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಬೀಡಿ ಕಾರ್ಮಿಕ ಫೆಡರೇಶನ್ ಇತ್ತೀಚೆಗೆ ಜೆ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರಕಾರವನ್ನು ಆಗ್ರಹಿಸಿದೆ.

ಹತ್ತಿಪ್ಪತ್ತು ವರ್ಷಗಳಿಂದ ಇದೇ ಉದ್ಯೋಗವನ್ನು ನಂಬಿರುವ ಕಾರ್ಮಿಕರಿಗೆ ವಾರದಲ್ಲಿ 2-3 ದಿನದ ಕೆಲಸ ಮಾತ್ರ ನೀಡುತ್ತಿದೆ. ಉಳಿದ 3-4 ದಿನಗಳ ಗಳಿಕೆ ಸಂಸಾರ ಸಾಗಿಸಲು ಸಾಕಾಗುತ್ತಿಲ್ಲ. ಹೀಗಾಗಿ ವಾರ ಪೂರ್ತಿ ಕೆಲಸ ಅಥವಾ ಕೆಲಸ ನೀಡದೆ ಇರುವ ದಿನಗಳಿಗೆ ಗ್ಯಾರೆಂಟೇಡ್ ವೇತನ ನೀಡುವಂತೆ ಸಹ ಬೀಡಿ ಕಾರ್ಮಿಕರ ಫೆಡರೇಶನ್ ಒತ್ತಾಯಿಸಿದೆ.

ಕಳಪೆ ಎಲೆ ನೀಡಿ ಅತಿ ಹೆಚ್ಚು ಎವರೇಜ್ ಪಡೆಯುವ ಬೀಡಿ ಕಾರ್ಮಿಕ ರಿಗೆ ಸಿಗುವ ಕೂಲಿಯಲ್ಲಿ ಸಹ ಕಡಿತವಾಗುತ್ತಿದೆ. ರಾಜ್ಯ ಕಾರ್ಮಿಕ ಇಲಾಖೆ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಲು ಬೀಡಿ  ಕಾರ್ಮಿಕ ಫೆಡರೇಶನ್ ಆಗ್ರಹಿಸಿದೆ.

ಇ- ನಾಮಿನೇಶನ್‌ಗೆ ಅವಧಿ ವಿಸ್ತರಣೆಗೆ ಒತ್ತಾಯ: ಕಾರ್ಮಿಕರ ವಿಷ್ಯ ನಿಧಿಗೆ (ಪಿಎಫ್) ಸದಸ್ಯರು ನಾಮಿನೇಶನ್ ಸಲ್ಲಿಸಲು ಇರುವ ಕಡೆ ದಿನಾಂಕ ವನ್ನು ವಿಸ್ತರಿಸುವಂತೆಯೂ ಫೆಡರೇಷನ್ ಒತ್ತಾಯಿಸಿದೆ. ಬೀಡಿ ಕೈಗಾರಿಕೆಯಲ್ಲಿ ಆಧಾರ್ ಕಾರ್ಡ್, ಕೆವೈಸಿ ಶರತ್ತುಗಳು, ಜನ್ಮ ದಿನಾಂಕ ಸಮಸ್ಯೆಗಳನ್ನು ಸರಿಪಡಿಸಿ ಡಿಜಿಟಲ್ ನಾಮಿನೇಶನ್ ಸಲ್ಲಿಸಲು ಹೋದರೆ ಅಲ್ಲಿ ಸರ್ವರ್ ಸಮಸ್ಯೆ ಯಿಂದಾಗಿ ಸಾವಿರಾರು ಬೀಡಿ ಕಾರ್ಮಿಕರ ನಾಮಿನೇಶನ್ ಸಲ್ಲಿಸಲು ಸಾಧ್ಯ ಲಾಗುತ್ತಿಲ್ಲ. ಹೀೀಗಾಗಿ ಸಾವಿರಾರು ಬೀಡಿ ಕಾರ್ಮಿಕರು ನಾಮಿನೇಶನ್ ಮಾಡದೆ ಇರುವ ಕಾರಣ ಕಡೆಯ ದಿನಾಂಕವನ್ನು ವಿಸ್ತರಿಸುವಂತೆ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಶನ್ ಒತ್ತಾಯಿಸಿದೆ.

ಫೆ.22-23ರಂದು ಬೀಡಿ ಕಾರ್ಮಿಕರಿಂದ ಮುಷ್ಕರ

ಕೇಂದ್ರ ಸರಕಾರ ಬೀಡಿ ಕಾರ್ಮಿಕರನ್ನು ಬೀದಿಗೆ ತಳ್ಳುವ ನೀತಿ ಕೈ ಬಿಡಬೇಕು. ಹತ್ತಾರು ವರ್ಷಗಳ ಹೋರಾಟಗಳಿಂದ ಜಾರಿಗೆ ತಂದಿ ರುವ ಬೀಡಿ ಮತ್ತು ಸಿಗಾರ್ ಕಾರ್ಮಿಕರ ಸೇವಾ ಶರತ್ತು ಕಾಯ್ದೆ -1966 ಹಾಗೂ ಬೀಡಿ ಕಾರ್ಮಿಕ ಕಲ್ಯಾಣ ಸೆಸ್- ಕಾಯ್ದೆ -1976ನ್ನು ಇಲ್ಲವಾಗಿಸುವ ನೀತಿ ಮತ್ತು ಬೆಲೆ ಏರಿಕೆಯನ್ನು ಖಂಡಿಸಿ ಮುಂದಿನ ಫೆಬ್ರವರಿ 22-23ರಂದು ಬೀಡಿ ಕಾರ್ಮಿಕರು ಮುಷ್ಕರ ನಡೆಸಲಿದ್ದಾರೆ ಎಂದು ಫೆಡರೇಶನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ತಿಳಿಸಿದ್ದಾರೆ.

ಉಡುಪಿ ಬೀಡಿ ಕಾರ್ಮಿಕ ಫೆಡರೇಶನ್‌ನ ಜಿಲ್ಲಾ ಅಧ್ಯಕ್ಷ ಮಹಾಬಲ ವಡೇರಹೋಬಳಿ ಮಾತನಾಡಿ ಒಂದು ಬೀಡಿಗೆ ಒಂದು ರೂ. ತೆರಿಗೆಹಾಕಿ ಬೀಡಿ ಉದ್ಯಮ ನಿರ್ನಾಮ ಮಾಡುವ ಸರಕಾರ ಕಾರ್ಮಿಕರಿಗೆ ಏನು ಪರಿಹಾರ ನೀಡುತ್ತದೆ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಸಿಐಟಿಯು ಉಡುಪಿ ಜಿಲ್ಲಾ ಅಧ್ಯಕ್ಷ ಕೆ. ಶಂಕರ್, ಉಡುಪಿ ಬೀಡಿ ಕಾರ್ಮಿಕ ಸಂಘಟನೆಯ ನಳಿನಿ, ಉಮೇಶ್ ಕುಂದರ್, ಕುಂದಾಪುರ ಬೀಡಿ ಕಾರ್ಮಿಕ ಸಂಘದ ಬಲ್ಕಿಸ್ ಬಾನು, ರಾಜ್ಯ ಬೀಡಿ ಕಾರ್ಮಿಕ ಫೆಡರೇಶನ್ ಸದಾಶಿವದಾಸ್, ಬಾಬು ದೇವಾಡಿಗ, ರಾಧ, ಗಿರಿಜಾ ಭಾಗವಹಿಸಿದ್ದರು.

ಬೀಡಿ ಕಾರ್ಮಿಕರಿಗೆ ಬೆಲೆ ಏರಿಕೆಗೆ ಅನುಗುಣವಾದ ಕನಿಷ್ಠ ಕೂಲಿ ಹೆಚ್ಚಳಕ್ಕೆ ಸಭೆ ರಾಜ್ಯ ಸರಕಾರವನ್ನು ಒತ್ತಾಯಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News