ರಾಜ್ಯದಲ್ಲಿ ಶೀಘ್ರವೇ ‘ಎಥೆನಾಲ್ ಪಾಲಿಸಿ’ ಜಾರಿಗೆ ನಿರ್ಧಾರ: ಸಚಿವ ಶಂಕರ ಬಿ.ಪಾಟೀಲ
ಉಡುಪಿ, ಡಿ.31: ಕಬ್ಬು, ಭತ್ತ ಹಾಗೂ ಮೆಕ್ಕೆ ಜೋಳಗಳಲ್ಲಿ ಉಪ ಉತ್ಪನ್ನಗಳಾಗಿ ಎಥೆನಾಲ್‌ನ್ನು ರಾಜ್ಯದಲ್ಲಿ ಉತ್ಪಾದಿಸುವುದಕ್ಕೆ ಒತ್ತು ನೀಡುವ ಎಥೆನಾಲ್ ಪಾಲಿಸಿಯನ್ನು ರಾಜ್ಯ ಸರಕಾರ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ, ಕೈಮಗ್ಗ ಮತ್ತು ಜವಳಿ ಸಚಿವ ಶಂಕರ ಬಿ.ಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ.
ಉಡುಪಿ ನೇಕಾರರ ಪ್ರಾಥಮಿಕ ಸಹಕಾರ ಸಂಘದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿಗಳ ಸಭೆ ಹಾಗೂ ಉಡುಪಿ ಜಿಲ್ಲಾ ನೇಕಾರರ ಕುಂದು ಕೊರತೆಗಳನ್ನು ಆಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಪೆಟ್ರೋಲ್ ಹಾಗೂ ಡೀಸೆಲ್‌ನೊಂದಿಗೆ ಬಳಸಲು ಸಾಧ್ಯವಿರುವ ಎಥೆನಾಲ್ ಉತ್ಪಾದನೆಗೆ ಒತ್ತು ನೀಡಿ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಯೋಜನೆಯನ್ನು ರೂಪಿಸಿದ್ದು, ಪ್ರತಿ ರಾಜ್ಯಗಳಲ್ಲೂ ಇದನ್ನು ಜಾರಿಗೊಳಿಸುವಂತೆ ಸೂಚಿಸಿದಂತೆ ರಾಜ್ಯದಲ್ಲೂ ಎಥೆನಾಲ್ ಪಾಲಿಸಿಯನ್ನು ಜಾರಿಗೊಳಿಸಲು ಸರಕಾರ ನಿರ್ಧರಿಸಿದೆ ಎಂದರು.
ಈಗಾಗಲೇ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಎಥೆನಾಲ್ ಪಾಲಿಸಿಯನ್ನು ಪ್ರಕಟಿಸಿದ್ದು, ವ್ಯಾಪಕವಾಗಿ ಅದನ್ನು ಉತ್ಪಾದಿಸಲು ಮುಂದಾಗಿದೆ. ರಾಜ್ಯದಲ್ಲೂ ಎಥನಾಲ್ ಉತ್ಪಾದನೆಗೆ ಒತ್ತು ನೀಡಬೇಕಾಗಿದೆ ಎಂದವರು ಹೇಳಿದರು.
ರಾಜ್ಯದಲ್ಲಿ ರೈತರು ಬೆಳೆಯುವ ಕಬ್ಬು, ಭತ್ತ ಮತ್ತು ಮೆಕ್ಕೆ (ಗೋನ) ಜೋಳದಿಂದ ಎಥೆನಾಲ್ ಉತ್ಪಾದಿಸಲು ಸಾಧ್ಯವಿದ್ದು, ರಾಜ್ಯದ ಸಂಶೋಧಕರ ತಂಡ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ತಾನೂ ಶೀಘ್ರವೇ ಹೊಸದಿಲ್ಲಿಗೆ ತೆರಳಿ ಪ್ರಹ್ಲಾದ್ ಜೋಷಿ ಜೊತೆ ಕೇಂದ್ರ ಸಚಿವರೊಂದಿಗೆ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ 88 ಸಕ್ಕರೆ ಕಾರ್ಖಾನೆಗಳಿವೆ. 65ರಲ್ಲಿ ಇವುಗಳ ಉತ್ಪಾದನೆಗೆ ಕ್ರಮ ವಹಿಸಲಾಗುತ್ತಿದೆ. ಕಬ್ಬಿನಿಂದ ಸಕ್ಕರೆ ಜೊತೆ ಎಥೆನಾಲ್, ಬಯೋಗ್ಯಾಸ್ ಹಾಗೂ ಕೋ ಜನರೇಷನ್‌ನ್ನು ಉಪ ಉತ್ಪನ್ನವಾಗಿ ಉತ್ಪಾದಿಸಲು ಸಾಧ್ಯವಿದೆ. ಎಥೆನಾಲ್ ಉತ್ಪಾದಕರಿಗೆ ಸಬ್ಸಿಡಿ ಹಾಗೂ ಪ್ರೋತ್ಸಾಹಧನ ನೀಡಲಾಗುವುದು. ಇದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದ್ದು, ರೈತರಿಗೂ ಲಾಭವಾಗಲಿದೆ. ಸಕ್ಕರೆ ಉದ್ದಿಮೆಗಳ ಪುನ:ಶ್ಚೇತನ ಕೂಡಾ ಇದರಿಂದ ಸಾಧ್ಯವಾಗಲಿದೆ ಎಂದರು.
ರಾಜ್ಯದಲ್ಲಿ ಉತ್ಪಾದಿಸಲಾಗುವ ಎಥೆನಾಲ್‌ನ್ನು ಸರಕಾರವೇ ಖರೀದಿಸಿ, ಅದನ್ನು ಪೆಟ್ರೋಲಿಯಂ ಕಂಪೆನಿಗಳಿಗೆ ಮಾರಾಟ ಮಾಡಲಿದೆ. ರಾಜ್ಯದಲ್ಲಿ ಎಥೆನಾಲ್ ಉತ್ಪಾದಿಸಲು ಅನುಮತಿ ಕೋರುವ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಸರಕಾರದಿಂದ ಅನುಮತಿ ನೀಡಲಾಗುವುದು. ಸಕ್ಕರೆ ಕಾರ್ಖಾನೆಗಳು ಸಕ್ಕರೆ ಯೊಂದಿಗೆ ಇತರೆ ಉಪ ಉತ್ಪನ್ನಗಳನ್ನು ತಯಾರಿಸುವ ಮೂಲಕ ಆರ್ಥಿಕವಾಗಿ ಲಾಭ ಹೊಂದಲು ಸಾಧ್ಯವಿದೆ ಎಂದು ಸಚಿವ ಶಂಕರ ಪಾಟೀಲ ಹೇಳಿದರು.
ಈಗ ಮುಚ್ಚಿರುವ ಬ್ರಹ್ಮಾವರದ ಸಹಕಾರಿ ಸಕ್ಕರೆ ಕಾರ್ಖಾನೆ ಪುನರಾರಂಭದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಬಗ್ಗೆ ಕಾರ್ಖಾನೆಯ ಆಡಳಿತ ಮಂಡಳಿಯ ಸದಸ್ಯರೊಂದಿಗೆ ಚರ್ಚಿಸಿ, ಕಾರ್ಖಾನೆ ಆರಂಭಕ್ಕೆ ಸರಕಾರದಿಂದ ನಿರೀಕ್ಷಿಸುವ ಹಾಗೂ ಸರಕಾರ ನೀಡಲು ಸಾಧ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಈ ವೇಳೆ ಉಡುಪಿ ಶಾಸಕ ರಘುಪತಿ ಭಟ್, ಕೈಮಗ್ಗ ಮತ್ತು ಜವಳಿ ಇಲಾಖೆ ಅಪರ ನಿರ್ದೇಶಕ ಪ್ರಕಾಶ್, ಜಂಟಿ ನಿರ್ದೇಶಕ ಶ್ರೀಧರ ನಾಯ್ಕ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.