×
Ad

ಜಮೀನು ಕೊಡುವುದಾಗಿ ಹಣ ಪಡೆದು ವಂಚನೆ; ಜ.3ರಂದು ಆರೋಪಿತನ ಮನೆ ಮುಂದೆ ಪ್ರತಿಭಟನೆ: ಸೇಸಪ್ಪ ಬೆದ್ರಕಾಡು

Update: 2021-12-31 20:05 IST

ಬಂಟ್ವಾಳ, ಡಿ‌.31: ಜಮೀನು ಕೊಡಿಸುವುದಾಗಿ ಜನರಿಂದ ಹಣ ಪಡೆದು ವಂಚಿಸುತ್ತಿರುವ ಥೋಮಸ್ ಡಿಸೋಜ ಎಂಬವರ ವಿರುದ್ಧ ಪೊಲೀಸ್ ಇಲಾಖೆ ಕಾನೂನು ಕ್ರಮ ಜರುಗಿಸುವಂತೆ ಅಗ್ರಹಿಸಿ ಆರೋಪಿತನ ಮನೆ ಎದುರು ಜ.3ರಂದು ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದು ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಹೇಳಿದರು.

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಕಳ್ಳಿಗೆ ಗ್ರಾಮದ ಕೊಡಂಬಿಲ ನಿವಾಸಿ ಥೋಮಸ್ ಡಿಸೋಜ ಎಂಬವರು ಜಮೀನು ಕೊಡಿಸುವುದಾಗಿ ಇದೇ ಊರಿನ ನಿವಾಸಿ ವಿಜಯ ಎಂಬವರಿಂದ 3 ಲಕ್ಷ ರೂ. ಪಡೆದು ಬಳಿಕ ಜಮೀನು ನೀಡದೆ ವಂಚಿಸಿದ್ದಾರೆ ಎಂದು ದೂರಿದರು.

ಜಮೀನು ನೀಡುವಂತೆ ಅಥವಾ ನೀಡಿದ ಹಣ ವಾಪಸ್ ಕೊಡುವಂತೆ ಥೋಮಸ್ ಡಿಸೋಜ ಬಳಿ ಹಲವು ಬಾರಿ ಕೇಳಿಕೊಂಡರೂ ಅವರು ಉಡಾಫೆಯಿಂದ ವರ್ತಿಸುತ್ತಿದ್ದು ಬೆದರಿಕೆ ಕೂಡಾ ಹಾಕಿದ್ದಾರೆ. ವಿಜಯ ಅವರು ನ್ಯಾಯ ಒದಗಿಸುವಂತೆ ಆಗ್ರಹಿಸಿ ಪೊಲೀಸರಿಗೆ ದೂರು ನೀಡಿದ್ದು ಆದರೆ ಪೊಲೀಸರು ಈ ಬಗ್ಗೆ ಯಾವುದೇ ಕ್ರಮ ಜರುಗಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ಆರೋಪಿಸಿದರು.

ಥೋಮಸ್ ಡಿಸೋಜ ಇದೇ ರೀತಿ ಹಲವು ಜನರಿಂದ ಹಣ ಪಡೆದು ವಂಚಿಸಿರುವ ಬಗ್ಗೆ ದೂರುಗಳು ಇವೆ. ವಿಜಯ ಅವರು ಎಸ್ಸಿ ಸಮುದಾಯಕ್ಕೆ ಸೇರಿದವರಾಗಿದ್ದು ಅವರಿಂದ ಹಣ ಪಡೆದು ಮಾಡಿರುವ ವಂಚನೆ ದಲಿತ ದೌರ್ಜನ್ಯ ಪ್ರಕರಣಕ್ಕೆ ಸಮವಾಗಿದೆ‌. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಕೂಡಾ ಗಂಭೀರವಾಗಿ ಪರಿಗಣಿಸದ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಥೋಮಸ್ ಡಿಸೋಜ ಮನೆ ಮುಂದೆ ಜ.3ರಂದು 11 ಗಂಟೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು. 

ಪ್ರತಿಭಟನೆ ನಡೆಸುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನ್ಯಾಯ ಸಿಗುವ ವರೆಗೆ ಪ್ರತಿಭಟನೆ ಮುಂದುವರಿಸಲಾಗು ವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಾಗರಾಜ್ ಲೈಲ, ವಿಜಯ, ಶಾಲಿನಿ ಪಿ., ಸೋಮಪ್ಪ ಎಸ್., ಗಣೇಶ್, ಚಂದ್ರಶೇಖರ ಯು. ವಿಟ್ಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News