ಕೋಟ: ಪೊಲೀಸ್ ದೌರ್ಜನ್ಯದ ವಿರುದ್ಧ ಜ.1ರಂದು ಪ್ರತಿಭಟನೆ
ಕೋಟ, ಡಿ.31: ಕೋಟತಟ್ಟು ಬಾರಿಕೆರೆ ಕೊರಗರ ಕಾಲನಿಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಕೊರಗರ ಮೇಲೆ ಕೋಟ ಪೊಲೀಸರು ನಡೆಸಿದ ದೌರ್ಜನ್ಯ ಹಾಗೂ ಪೆಟ್ಟು ತಿಂದ ಯುವಕರ ಮೇಲೆ ಸುಳ್ಳು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಪೊಲೀಸರ ಕ್ರಮವನ್ನು ಪ್ರತಿಭಟಿಸಿ, ಸಂತ್ರಸ್ಥ ಕೊರಗ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ವಿವಿಧ ಸಂಘಸಂಸ್ಥೆಗಳು, ಸಾರ್ವಜನಿಕರು ಹಾಗೂ ಸಂತ್ರಸ್ಥ ಕುಟುಂಬ ಗಳಿಂದ ಜ.1ರಂದು ಅಪರಾಹ್ನ ಕೋಟ ಠಾಣೆಗೆ ಮೆರವಣಿಗೆ ಹಾಗೂ ನ್ಯಾಯ ನೀಡುವಂತೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಡಿಜೆ ಸೌಂಡ್ ಹಾಕಿದ್ದಾರೆ ಎಂಬ ಕಾರಣಕ್ಕೆ ಸ್ಥಳಕ್ಕೆ ತೆರಳಿದ ಕೋಟ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಮಹಿಳೆ ಮತ್ತು ಮಕ್ಕಳು ವಯಸ್ಕರೆನ್ನದೇ ಲಾಠಿಚಾರ್ಜ್ ಮಾಡಿ ದೌರ್ಜನ್ಯ ನಡೆಸಿದ್ದಲ್ಲದೇ, ಕೊರಗ ಮೇಲೆಯೇ ಸುಳ್ಳು ಕೇಸನ್ನು ದಾಖಲೆ ಮಾಡಿದ್ದಾರೆ, ಇದೇ ರೀತಿ ಕೋಟ ಪೊಲೀಸರು ಈ ಹಿಂದೆ ಸಾಯಿಬ್ರಕಟ್ಟೆ ಒಬ್ಬ ಯುವಕನಿಗೆ ಹೊಡೆದು ಅವನ ಮೇಲೆ ಸುಳ್ಳು ಪ್ರಕರಣವನ್ನು ದಾಖಲು ಮಾಡಿದ್ದಾರೆ. ಕೋಟ ಹೈಸ್ಕೂಲ್ ಸಮೀಪ ಅಮ್ಮ ಮಗನಿಗೆ ಹೊಡೆದು ಅವರ ಮೇಲೆಯೂ ಸುಳ್ಳು ಪ್ರಕರಣ ದಾಖಲಿಸಿದ್ದಾರೆ, ಇದೇ ರೀತಿ ಐದಾರು ಘಟನೆಗಳು ನಡೆದರೂ ಕೂಡ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಮಾನವ ಹಕ್ಕು ಆಯೋಗದ ರಾಜ್ಯ ಪ್ರಧಾನ ಕಾರ್ಯದರ್ಶಿ, ಸಾಮಾಜಿಕ ಹೋರಾಟಗಾರ ದಿನೇಶ್ ಗಾಣಿಗ ಕೋಟ ತಿಳಿಸಿದ್ದಾರೆ.
ಇದೀಗ ಮುಗ್ಧ ಕೊರಗ ಬಂಧುಗಳ ಮೇಲೆ ನಡೆದ ಹಲ್ಲೆ ಮತ್ತು ಸುಳ್ಳು ದೂರು ದಾಖಲಿಸಿದ್ದಕ್ಕಾಗಿ ಜ.1 ಶನಿವಾರದ ಅಪರಾಹ್ನ 3 ಗಂಟೆಗೆ ಕೋಟ ಬಾರಿಕೆರೆ ಕೊರಗ ಕಾಲೋನಿಯಿಂದ ಹಲ್ಲೆಗೊಳಗಾದ ಮತ್ತು ನೊಂದ ಕೊರಗ ಕುಟುಂಬಗಳೊಂದಿಗೆ ಶಾಂತಿಯುತವಾಗಿ ಮೆರವಣಿಗೆಯಲ್ಲಿ ಕೋಟ ಪೊಲೀಸ್ ಠಾಣೆಗೆ ತೆರಳಿ ನ್ಯಾಯ ದೊರಕಿಸಿಕೊಡುವಂತೆ ಮನವಿಯನ್ನು ಸಲ್ಲಿಸಲಿದ್ದೇವೆ ಎಂದು ದಿನೇಶ್ ಗಾಣಿಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.