×
Ad

ಕೋಟ: ಕೊರಗ ಕಾಲನಿಗೆ ಮಂಜುನಾಥ ಭಂಡಾರಿ ಭೇಟಿ

Update: 2021-12-31 22:00 IST

ಕೋಟ, ಡಿ.31:ಕೋಟತಟ್ಟು ಬಾರಿಕೆರೆಯ ಕೊರಗ ಕಾಲೋನಿಯಲ್ಲಿ ಕೊರಗರ ಮೇಲೆ ನಡೆದ ಪೋಲಿಸ್ ದೌರ್ಜನ್ಯದ ಹಿನ್ನೆಲೆಯಲ್ಲಿ ಶುಕ್ರವಾರ ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಭೇಟಿ ನೀಡಿ ಸಾಂತ್ವನ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರಕಾರದ ಪ್ರಭಾವಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಹುಟ್ಟೂರಿನಲ್ಲಿ ಇಂಥ ಕೃತ್ಯ ನಡೆದಿರುವುದು ಶೋಚನೀಯ. ಅಲ್ಲದೆ ಸಚಿವರ ಆಶ್ವಾಸನೆ ನಂತರವು ಇಲಾಖೆ ಕೇಸು ದಾಖಲಿಸಿದೆ ಎಂದರೆ ರಾಜ್ಯದಲ್ಲಿರುವುದು ಸರಕಾರದ ಆಡಳಿತವೊ ಅಥವಾ ಅಧಿಕಾರಿಗಳ ಆಡಳಿತವೇ ಎಂಬ ಅನುಮಾನ ಕಾಡುತ್ತದೆ ಎಂದರು.

ಈ ಒಂದು ಘಟನೆಯಿಂದ, ಇಡೀ ವ್ಯವಸ್ಥೆ ಮೇಲೆ, ಸರಕಾರ ಹಾಗೂ ಅಧಿಕಾರಗಳ ಮೇಲೆ ನಂಬಿಕೆ ಹೊರಟು ಹೋಗುವಂತಾಗಿದೆ. ಕಾಂಗ್ರೆಸ್ ಪಕ್ಷ ಸದಾ ಬಡವರ, ದುರ್ಬಲರ ಜೊತೆ ನಿರಂತರವಾಗಿ ಹೋರಾಡುತ್ತದೆ. ಈ ಬಗ್ಗೆ ಶೀಘ್ರದಲ್ಲಿ ನ್ಯಾಯ ದೊರಕದಿದ್ದರೆ ಅವರ ಜೊತೆ ನಿಂತು ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂದು ನುಡಿದರು.

ಈ ಸಂದರ್ಭದಲ್ಲಿ ಪಕ್ಷದ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು, ಕೋಟ ಬ್ಲಾಕ್ ಅಧ್ಯಕ್ಷ ಶಂಕರ್ ಕುಂದರ್, ಕಾಂಗ್ರೆಸ್ ವಕೀಲರ ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ, ರಾಜೀವ್ ಗಾಂಧಿ ರಾಜ್ಯ ಪಂಚಾಯತ್ ರಾಜ್ ಸಹಸಂಚಾಲಕಿ ರೋಶನಿ ಒಲಿವೇರ, ಮುಖಂಡರಾದ ನಟರಾಜ್ ಹೊಳ್ಳ, ಬಸವ ಪೂಜಾರಿ, ಮಹಾಬಲ ಮಡಿವಾಳ, ರವೀಂದ್ರ ಕಾಮತ್, ರವೀಂದ್ರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News