ಕಾಂಗ್ರೆಸ್ ಪುರಸಭೆ ಸದಸ್ಯೆಗೆ ಬಿಜೆಪಿ ಕಾರ್ಯಕರ್ತರಿಂದ ಜೀವ ಬೆದರಿಕೆ: ದೂರು
Update: 2021-12-31 22:16 IST
ಕಾಪು, ಡಿ.31: ಕಾಪು ಪುರಸಭೆಯ ಕೈಪುಂಜಾಲು ವಾರ್ಡಿನಲ್ಲಿ ಗೆಲವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಶೋಭಾ ಎ. ಬಂಗೇರಾ ಹಾಗೂ ಇತರ ಮಹಿಳೆಯರನ್ನು ಬಿಜೆಪಿ ಕಾರ್ಯಕರ್ತರು ಎಳೆದಾಡಿ ಬೆದರಿಕೆಯೊಡ್ಡಿದ್ದಾರೆ ಎನ್ನಲಾದ ಘಟನೆ ಡಿ.30ರಂದು ಮಧ್ಯಾಹ್ನ ಕೈಪುಂಜಾಲಿನ ಕೆಂಪುಗುಡ್ಡೆ ರಸ್ತೆಯಲ್ಲಿ ನಡೆದಿದೆ.
ಶೋಬಾ ಬಂಗೇರಾ ಇತರ ಕೆಲವು ಮಹಿಳೆಯರೊಂದಿಗೆ ನಡೆದುಕೊಂಡು ಹೋಗುತ್ತಿದ್ದು, ಈ ವೇಳೆ ಉಳಿಯಾರಗೋಳಿ ಗ್ರಾಮದ ಕರಾವಳಿ ವಾರ್ಡಿನ ಬಿಜೆಪಿ ಕಾರ್ಯಕರ್ತರಾದ ಸನತ್, ಸೂರಜ್ ಹಾಗೂ ಸಂಜಯ್ ಮತ್ತಿತರರು ಬೈಕಿನಲ್ಲಿ ವೇಗವಾಗಿ ಬಂದು ಶೋಭಾ ಹಾಗೂ ಅವರೊಂದಿಗೆ ಇದ್ದ ಇತರ ಮಹಿಳೆಯರನ್ನು ಎಳೆದಾಡಿದರೆಂದು ದೂರಲಾಗಿದೆ.
‘ನೀನು ಕೈಪುಂಜಾಲು ವಾರ್ಡಿನಲ್ಲಿ ಗೆದ್ದಿರುವೇ, ನಾವು ನಮ್ಮ ವಾರ್ಡಿನಲ್ಲಿ ಜಯಗಳಿಸಿದ್ದೇವೆ, ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.