ರಕ್ತದಾನ ಎಂಬುದು ಜೀವ ರಕ್ಷಣೆಯ ಮಾರ್ಗವಾಗಿದೆ : ಮುಝಮ್ಮಿಲ್ ಕಾಝಿಯಾ
ಭಟ್ಕಳ: ರಕ್ತದಾನ ಪವಿತ್ರ ದಾನವಾಗಿದ್ದು ಈ ಪವಿತ್ರ ಕಾರ್ಯದಲ್ಲಿ ಯುವಕ ಯುವತಿಯರು ತಮ್ಮನ್ನು ತಾವು ತೊಡಗಿಸಿಕೊಂಡು ಪರೋಕ್ಷವಾಗಿ ಜೀವರಕ್ಷಣೆಯ ಪುಣ್ಯ ಕಾರ್ಯ ಮಾಡಬೇಕೆಂದು ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಮುಝಮ್ಮಿಲ್ ಕಾಝಿಯಾ ಹೇಳಿದರು.
ಅವರು ಸ್ಥಳೀಯ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕ ಮತ್ತು ರೆಡ್ ರಿಬ್ಬನ್ ಘಟಕಗಳು ಜಂಟಿಯಾಗಿ ಹಮ್ಮಿಕೊಂಡ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ್ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದು ಶ್ಲಾಘನೀಯ. ಬೇರೆ ಯಾವುದನ್ನಾದರೂ ನಾವು ಕೃತಕವಾಗಿ ಸೃಷ್ಟಿಸಬಹುದು, ಆದರೆ ರಕ್ತವನ್ನು ಹಾಗೆ ಸೃಷ್ಟಿಸಲು ಸಾಧ್ಯವಿಲ್ಲ. ಆ ಕಾರಣಕ್ಕಾಗಿ ರಕ್ತದ ಕೊರತೆ ನಮ್ಮನ್ನು ಕಾಡುತ್ತಲಿದೆ. ಇಂತಹ ಶಿಬಿರಗಳ ಮೂಲಕ ಆ ಕೊರತೆಯನ್ನು ನೀಗಿಸಬಹುದು ಎಂದರು.
ಉಡುಪಿಯ ಬ್ಲಡ್ ಬ್ಯಾಂಕ್ ಅಧಿಕಾರಿ ಡಾ. ವೀಣಾ ಕುಮಾರಿ ಮಾತನಾಡಿ, ರಕ್ತವೆಂದರೆ ರಕ್ತ ಮಾತ್ರ, ಅದಕ್ಕೆ ಯಾವುದೇ ಜಾತಿ ಮತ ಧರ್ಮದ ಹಂಗಿಲ್ಲ ಎನ್ನುವುದರ ಮೂಲಕ ಮನುಷ್ಯರೆಲ್ಲ ಒಂದೇ ಎಂಬ ಸಂದೇಶವನ್ನು ನೀಡಿದರು.
ರಕ್ತದಾನ ಶಿಬಿರದಲ್ಲಿ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ಸಿಬ್ಬಂಧಿಗಳು ಸ್ವಯಂಪ್ರೇರಿತರಾಗಿ ರಕ್ತದಾನಗೈದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಮುಷ್ತಾಕ್ ಕೆ. ಶೇಖ್ ಸ್ವಾಗತಿಸಿದರು. ಪ್ರೊ. ಗಾನಿಮ್ ಮತ್ತು ಪ್ರೊ. ಶಾಝಿರ್ ಹುಸೇನ್ ಕಾರ್ಯಕ್ರಮ ನಿರೂಪಿಸಿದರು.