×
Ad

ಕೋಟ ಕೊರಗ ಕಾಲನಿಗೆ ಸಚಿವ ಸುನೀಲ್ ಕುಮಾರ್ ಭೇಟಿ

Update: 2022-01-02 11:49 IST

ಕೋಟ, ಜ.2: ಮೆಹಂದಿ ಕಾರ್ಯಕ್ರಮದಲ್ಲಿ ಕೊರಗ ಸಮುದಾಯದ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ಹಿನ್ನೆಲೆಯಲ್ಲಿ ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟು ಕೊರಗ ಸಮುದಾಯದ ಕಾಲೋನಿಗೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ರವಿವಾರ ಭೇಟಿ ನೀಡಿದರು.

ಬಳಿಕ ಮಾತನಾಡಿದ ಅವರು, ನಾನು ರಾಜ್ಯ ಪ್ರವಾಸದಲ್ಲಿ ಇದ್ದುದರಿಂದ ಇಲ್ಲಿಗೆ ಬರಲು ತಡವಾಗಿದೆ. ನಮ್ಮ ಜಿಲ್ಲೆಯಲ್ಲಿ ಆರ್ಥಿಕ ಹಾಗೂ ಸಾಮಾಜಿಕ ವಾಗಿ ಅತ್ಯಂತ ಹಿಂದುಳಿದವರ್ಗ ಸಮುದಾಯವಾಗಿರುವ ಕೊರಗರ ಮನೆಯಲ್ಲಿ ಒಂದು ಒಳ್ಳೆಯ ಕಾರ್ಯ ನಡೆಸುವ ಸಂದರ್ಭದಲ್ಲಿ ನಮ್ಮ ಅಧಿಕಾರಿಗಳಿಂದ ತಪ್ಪಾಗಿದೆ. ಇದನ್ನು ನಾನು ಯಾವುದೇ ಕಾರಣಕ್ಕೂ ಸಮರ್ಥನೆ ಮಾಡಿ ಕೊಳ್ಳುವುದಿಲ್ಲ. ಇದನ್ನು ನಾನು ಖಂಡಿಸುತ್ತೇನೆ ಎಂದರು.

ಈ ಘಟನೆ ನಡೆದ ತಕ್ಷಣವೇ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ ನಿನ್ನೆ ಗೃಹ ಸಚಿವರು ಕೂಡ ಬಂದು ಭೇಟಿ ನೀಡಿ, ಗೃಹ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಏನೇನು ಕ್ರಮಗಳನ್ನು ಕೈಗೊಳ್ಳಲು ಸಾಧ್ಯ ಆಗುತ್ತೋ ಆ ಎಲ್ಲಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಆದೇಶ ಹಾಗೂ ಭರವಸೆಯನ್ನು ನೀಡಿ ಹೆಗಿದ್ದಾರೆ ಎಂದು ಅವರು ತಿಳಿಸಿದರು.

ಅಧಿಕಾರಿಗಳು ಇತಿಮಿತಿಯಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಬೇಕು. ಸರಕಾರದ ಕಾರ್ಯದ ಕೆಲಸ ಮಾಡಬೇಕಾದರೆ ಯಾರ ಮನಸ್ಸಿಗೂ ನೋವಾಗದಂತೆ ಎಚ್ಚರ ವಹಿಸುವುದು ಬಹಳ ಅಗತ್ಯ. ಆ ಸೂಚನೆಯನ್ನು ಈಗಾಗಲೇ ಜಿಲ್ಲಾಧಿಕಾರಿ ಮತ್ತು ಉನ್ನತ ಅಧಿಕಾರಿಗಳಿಗೆ ನೀಡಿದ್ದೇನೆ. ಕೊರಗ ಸಮುದಾಯದ ಮೇಲೆ ಸುಳ್ಳು ಆರೋಪ ಹಾಕಿರುವ ಬಗ್ಗೆ ಅವರ ಕುಟುಂಬ ಹಾಗೂ ಆ ಭಾಗದ ಜನರು ದೂರಿದ್ದಾರೆ ಎಂದರು.

ಜಿಲ್ಲಾಧಿಕಾರಿಯೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ, ಗೃಹ ಸಚಿವರು ಕೊಟ್ಟಿರುವ ಸೂಚನೆಯನ್ನು ಗಮನದಲ್ಲಿರಿಸಿ ಕೊರಗ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ನ್ಯಾಯವನ್ನು ಒದಗಿಸಲಾಗುವುದು. ಇದಕ್ಕೆ ಜಿಲ್ಲಾಡಳಿತ ಬದ್ಧವಾಗಿದೆ. ಮುಂದೆ ಇಂತಹ ಘಟನೆಗಳು ಆಗದಂತೆ ಎಚ್ಚರಿಕೆಯನ್ನು ವಹಿಸಬೇಕೆಂದು ಅಧಿಕಾರಿಗಳ ಜೊತೆ ಮಾತುಕತೆ ಮಾಡುತ್ತೇನೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ಈ ಸಂದರ್ಭದಲ್ಲಿ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್ ಮೂರ್ತಿ, ಜಿಲ್ಲಾ ಹೆಚ್ಚುವರಿ ಎಸ್ಪಿಕುಮಾರಚಂದ್ರ, ಡಿವೈಎಸ್ಪಿಸುಧಾಕರ್ ನಾಯಕ್, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ, ಕೋಟ ಪ್ರಭಾರ ಠಾಣಾಧಿಕಾರಿ ತಿಮ್ಮೇಶ್, ಕೋಟ ಕಂದಾಯ ಅಧಿಕಾರಿ ರಾಜು ಕೆ., ಕೋಟತಟ್ಟು ಗ್ರಾಪಂ ಸದಸ್ಯರಾದ ಪ್ರಮೋದ್ ಹಂದೆ, ಸತೀಶ್ ಕುಂದರ್, ವಾಸು ಪೂಜಾರಿ, ವಿದ್ಯಾ ಸಾಲಿಯಾನ್, ಕೊರಗ ಮುಖಂಡ ಗಣೇಶ್ ಬಾರ್ಕೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News