ನಿವೃತ್ತಿ ಬೆನ್ನಲ್ಲೇ ಧೋನಿ ಹಾಗೂ ಬಿಸಿಸಿಐ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹರ್ಭಜನ್‌ ಸಿಂಗ್‌

Update: 2022-01-02 10:52 GMT

ಹೊಸದಿಲ್ಲಿ: ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟ್‌ ತಂಡದ ಪರವಾಗಿ 211 ವಿಕೆಟ್‌ ಗಳನ್ನು 28 ಐದು ವಿಕೆಟ್‌ ಹಾಗೂ 5 ಹತ್ತು ವಿಕೆಟ್‌ ಗಳ ಗೊಂಚಲನ್ನು ಪಡೆದು ಮಿಂಚಿದ್ದ ಹರ್ಭಜನ್‌ ಸಿಂಗ್‌ ಎಲ್ಲಾ ಪ್ರಕಾರದ ಕ್ರಿಕೆಟ್‌ ನಿಂದ ನಿವೃತ್ತಿ ಹೊಂದಿದ ಬೆನ್ನಲ್ಲೇ ತಮ್ಮ ವೃತ್ತಿಜೀವನವನ್ನು ಹಾಳುಗೆಡವಿದ್ದಾರೆಂದು ಬಿಸಿಸಿಐ ಅಧಿಕಾರಿಗಳ ಹಾಗೂ ನಾಯಕ ಧೋನಿ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.

ತಮ್ಮ ವೃತ್ತಿಜೀವನದ ಪಯಣವನ್ನು ಮುಗಿಸಿ ನೂತನ ಅಧ್ಯಾಯ ಪ್ರಾರಂಭಿಸುತ್ತಿರುವ ಬೆನ್ನಲ್ಲೇ ತಮ್ಮ ಕ್ರಿಕೆಟ್‌ ಪಯಣದ ಕುರಿತು ಸ್ಫೋಟಕ ಮಾಹಿತಿಗಳನ್ನು ಹರ್ಭಜನ್‌ ಬಹಿರಂಗಪಡಿಸಿದ್ದಾರೆ. ಭಾರತೀಯ ತಂಡದಿಂದ ತಾನು ಪದಚ್ಯುತಗೊಳ್ಳಲು ಎಂಎಸ್ ಧೋನಿ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕಾರಿಗಳು ಕಾರಣ ಎಂದು ಹೇಳುವ ಮೂಲಕ ಹಿರಿಯ ಕ್ರಿಕೆಟಿಗ ಬಾಂಬ್ ಸಿಡಿಸಿದ್ದಾರೆ.

"ಅದೃಷ್ಟ ನನ್ನ ಜೊತೆಗಿದ್ದರೂ ಕೆಲ ಬಾಹ್ಯ ಅಂಶಗಳು ನನ್ನ ಜೊತೆಗಿರಲಿಲ್ಲ ಮತ್ತು ಅವುಗಳು ಸಂಪೂರ್ಣ ವಿರುದ್ಧವೂ ಆಗಿದ್ದವು. ನನಗೆ ಅವಕಾಶಗಳನ್ನು ನೀಡಿದ್ದರೆ ಇನ್ನೂ 100-150 ವಿಕೆಟ್‌ ಗಳನ್ನು ಪಡೆಯುತ್ತಿದ್ದೆ. "ಹೌದು. ಎಂಎಸ್ ಧೋನಿ ಆಗ ನಾಯಕರಾಗಿದ್ದರು ಆದರೆ ಈ ವಿಚಾರ ಧೋನಿಯ ತಲೆಗಿಂತ ಮೇಲಿತ್ತು ಎಂದು ನಾನು ಭಾವಿಸುತ್ತೇನೆ. ಸ್ವಲ್ಪ ಮಟ್ಟಿಗೆ, ಕೆಲವು ಬಿಸಿಸಿಐ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದರು ಮತ್ತು ನಾಯಕ ಅದನ್ನು ಬೆಂಬಲಿಸಿರಬಹುದು ಆದರೆ ನಾಯಕ ಎಂದಿಗೂ ಬಿಸಿಸಿಐಗಿಂತ ಮೇಲಿರಲು ಸಾಧ್ಯವಿಲ್ಲ. ಬಿಸಿಸಿಐ ಅಧಿಕಾರಿಗಳು ಯಾವಾಗಲೂ ನಾಯಕ, ಕೋಚ್ ಅಥವಾ ತಂಡಕ್ಕಿಂತ ದೊಡ್ಡವರು, ”ಎಂದು ಅವರು ಬಹಿರಂಗಪಡಿಸಿದರು.

"ಧೋನಿ ಇತರ ಆಟಗಾರರಿಗಿಂತ ಹೆಚ್ಚಿನ ಬೆಂಬಲವನ್ನು ಹೊಂದಿದ್ದರು ಮತ್ತು ಉಳಿದ ಆಟಗಾರರು ಅದೇ ರೀತಿಯ ಬೆಂಬಲವನ್ನು ಪಡೆದಿದ್ದರೆ ಅವರು ಕೂಡಾ ಚೆನ್ನಾಗಿ ಆಡುತ್ತಿದ್ದರು ಎಂದ ಹರ್ಭಜನ್‌, ಇತರ ಉತ್ತಮ ಆಟಗಾರರಂತೆ ತಾನೂ ವಿದಾಯ ಪಂದ್ಯ ಪಡೆಯದಿರುವ ಕುರಿತು ಬೇಸರ ವ್ಯಕ್ತಪಡಿಸಿದರು. 

"ಪ್ರತಿಯೊಬ್ಬ ಆಟಗಾರನೂ ಭಾರತದ ಜೆರ್ಸಿ ಧರಿಸಿ ನಿವೃತ್ತಿ ಹೊಂದಲು ಬಯಸುತ್ತಾನೆ ಆದರೆ ಅದೃಷ್ಟ ಯಾವಾಗಲೂ ನಿಮ್ಮ ಕಡೆ ಇರುವುದಿಲ್ಲ ಮತ್ತು ಕೆಲವೊಮ್ಮೆ ನೀವು ಬಯಸಿದ್ದು ನಡೆಯುವುದಿಲ್ಲ. ನೀವು ಉಲ್ಲೇಖಿಸಿದ ದೊಡ್ಡ ಹೆಸರುಗಳಾದ ವಿವಿಎಸ್ (ಲಕ್ಷ್ಮಣ್), ರಾಹುಲ್ (ದ್ರಾವಿಡ್), ವೀರು (ವೀರೇಂದ್ರ ಸೆಹ್ವಾಗ್), ಮತ್ತು ನಂತರ ನಿವೃತ್ತಿ ಪಡೆದ ಅನೇಕರಿಗೆ ಈ ಅವಕಾಶ ಸಿಗಲಿಲ್ಲ," ಎಂದು ಹರ್ಭಜನ್‌ ಸಿಂಗ್‌ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News