ಕೋಟ ಪ್ರಕರಣ: ಪೊಲೀಸರನ್ನು ಬಂಧಿಸಲು ಆಗ್ರಹ

Update: 2022-01-02 11:41 GMT

ಪಡುಬಿದ್ರಿ: ಪೊಲೀಸರು ತಮ್ಮ ಕರ್ತವ್ಯವನ್ನು ಮರೆತು ಕೋಟದಲ್ಲಿ ಕೊರಗರ ಮೇಲೆ ದೌರ್ಜನ್ಯ ನಡೆಸಿರುವುದು ನಡೆಸಿರುವುದು ಸ್ಪಷ್ಟವಾಗಿದ್ದು, ಸೂಕ್ತ ಪ್ರಕರಣದಡಿ ಪಿಎಸ್‍ಐ ಸಹಿತ ಎಲ್ಲಾ ಪೊಲೀಸರನ್ನು ಬಂಧಿಸಬೇಕು ಎಂದು ದಲಿತ ಮುಖಂಡ ಅಶೋಕ್ ಕೊಂಚಾಡಿ ಆಗ್ರಹಿಸಿದರು.

ಪಡುಬಿದ್ರಿ ಪೇಟೆಯಲ್ಲಿ ರವಿವಾರ ಅಂಬೇಡ್ಕರ್ ಯುವ ಸೇನೆ ಕಾಪು ತಾಲ್ಲೂಕು ಸಮಿತಿಯ ವತಿಯಿಂದ ಕೊರಗರ ಮೇಲೆ ದೌರ್ಜನ್ಯ ಎಸಗಿದ ಕೋಟಾ ಎಸ್‍ಐ ವಿರುದ್ಧ ಎಫ್‍ಐಆರ್ ದಾಖಲಿಸಲು ಮತ್ತು ಜಿಲ್ಲಾ ಎಸ್‍ಪಿಯನ್ನು ವರ್ಗಾವಣೆಗೊಳಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. 

ಪೊಲೀಸರು ಎಸಗಿದ ದೌರ್ಜನ್ಯದ ವಿರುದ್ಧ ಪ್ರಕರಣವನ್ನು ಸೂಕ್ತ ಕಾಯಿದೆಯನ್ವಯ ಮಾರ್ಪಾಟು ಮಾಡಿ ಅವರೆಲ್ಲರನ್ನೂ ದಲಿತ ದೌರ್ಜನ್ಯ ಕಾನೂನಡಿ ಬಂಧಿಸಬೇಕು. ಕೆಲಸದಿಂದ ವಜಾಗೊಳಿಸಬೇಕು. ಪಕ್ಷಪಾತ ಮೆರೆದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರನ್ನು ತಕ್ಷಣ ವರ್ಗಾಯಿಸಬೇಕು ಎಂದು ಆಗ್ರಹಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಗುಜರಾತ್, ಯುಪಿ ಮಾದರಿಯನ್ನು ಪ್ರತಿಬಿಂಬಿಸುತ್ತದೆ. ಈ ಮೂಲಕ ಜನರಲ್ಲಿ ಗೊಂದಲದ ವಾತಾವರಣ ನಿರ್ಮಿಸುತ್ತಿದೆ ಎಂದು ಅವರು ದೂರಿದರು.  

ಅಂಬೇಡ್ಕರ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಭಾಸ್ಕರ್ ಪಡುಬಿದ್ರಿ, ಕಾನೂನನ್ನು ಮೀರಿ ವರ್ತಿಸಿರುವ ಪೊಲೀಸರ ಅನಾಗರಿಕ ಕ್ರಮವನ್ನು ಖಂಡಿಸಿದರು. ಕಾಂಗ್ರೆಸ್ ಮುಖಂಡ ವೈ. ಸುಕುಮಾರ್, ಬಿಜೆಪಿ ಮುಖಂಡ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ದಲಿತ ಮುಖಂಡ ಶೇಖರ್ ಹೆಜಮಾಡಿ, ಕಾಪು ತಾಲ್ಲೂಕು ಅಂಬೇಡ್ಕರ್ ಯುವ ಸೇನೆಯ ಅಧ್ಯಕ್ಷ ಲೋಕೇಶ್ ಕಂಚಿನಡ್ಕ ಮಾತನಾಡಿದರು.

ಅಂಬೇಡ್ಕರ್ ಯುವ ಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಹರೀಶ್, ಮೋಹನ್ ಕೊರಗ ಮುದರಂಗಡಿ, ಗ್ರಾಮ ಪಂಚಾಯಿತಿ ಸದಸ್ಯ ಫಿರೋಝ್, ಎಸ್‍ವೈಎಸ್ ಅಧ್ಯಕ್ಷ ಹಸನ್ ಕಂಚಿನಡ್ಕ, ರಕ್ಷಣಾ ವೇದಿಕೆಯ ಅಧ್ಯಕ್ಷ ನಿಝಾಮ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾಪು ತಾಲ್ಲೂಕು  ಅಂಬೇಡ್ಕರ್ ಯುವ ಸೇನೆಯ ಗೌರವಾಧ್ಯಕ್ಷ ಪಿ. ಕೃಷ್ಣ ಬಂಗೇರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News