ಪಡುಬಿದ್ರಿ ಸಿಎ ಸೊಟೈಟಿಯಲ್ಲಿ ಸಹಕಾರ ಸಂಗಮ-ಸಮೃದ್ಧಿ ಸಂಭ್ರಮ ಕಾರ್ಯಕ್ರಮ

Update: 2022-01-02 11:44 GMT

ಪಡುಬಿದ್ರಿ: ಸಹಕಾರಿ ಬ್ಯಾಂಕ್‍ಗಳು ವಾಣಿಜ್ಯ ಬ್ಯಾಂಕ್‍ಗೆ ಪೈಪೋಟಿ ನೀಡುತ್ತಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರಿ ಬ್ಯಾಂಕ್‍ಗಳಲ್ಲಿ ವ್ಯವಹಾರ ನಡೆಸಬೇಕು. ಸಹಕಾರಿ ಸಂಸ್ಥೆಗಳ ಉತ್ತಮ ಕೆಲಸದಿಂದ ಸಹಕಾರಿ ಸಂಸ್ಥೆಗಳ ಅಧ್ಯಕ್ಷರಿಗೆ ಗೌರವ ಹೆಚ್ಚಾಗುವಂತಾಗಿದೆ ಎಂದು ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು. 

ಶತಕೋಟಿ ಠೇವಣಿಯ ಗುರಿಯನ್ನು ಸಾಧಿಸಿರುವ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಆಶ್ರಯದಲ್ಲಿ ಪಡುಬಿದ್ರಿ ಬಂಟರ ಭವನದ ಹೊರಾಂಗಣ ಸಭಾಂಗಣದಲ್ಲಿ ರವಿವಾರ ನಡೆದ ಸಹಕಾರ ಸಂಗಮ-ಸಮೃದ್ಧಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ವಾಣಿಜ್ಯ ಬ್ಯಾಂಕ್‍ನ ಠೇವಣಾತಿಯಿಂದ ಸ್ಥಳೀಯವಾಗಿ ಯಾವುದೇ ಸಹಕಾರ ಸಿಗುವುದಿಲ್ಲ. ಸಹಕಾರಿ ಸಂಘಗಳಲ್ಲಿ ಇರಿಸುವ ಠೇವಣಾತಿಯಿಂದ ಊರಿಗೆ ಸಹಾಯವಾಗುತ್ತದೆ ಎಂದ ಅವರು, ಸರ್ಕಾರದ ಯಾವುದೇ ಸವಲತ್ತುಗಳು ಪೂರ್ಣ ಪ್ರಮಾಣದಲ್ಲಿ ಫಲಾನುಭವಿಗಳಿಗೆ ಒದಗಿಸುವಲ್ಲಿ ಇತರೆಲ್ಲ ಇಲಾಖೆಗಳಿಂತ ಸಹಕಾರಿ ಸಂಸ್ಥೆಗಳು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು  ಮೆಚ್ಚುಗೆ ವ್ಯಕ್ತಪಡಿಸಿದರು.

ಪಡುಬಿದ್ರಿ ಸೊಸೈಟಿಗೆ ಚಿನ್ನದ ನಾಣ್ಯ: ಗುರಿ ಮೀರಿದ ಠೇವಣಿ ಸಂಗ್ರಹಕ್ಕಾಗಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯನ್ನು ದ.ಕ. ಕೇಂದ್ರ ಸಹಕಾರಿ ಬ್ಯಾಂಕ್ ಮೂಲಕ ಪ್ರತ್ಯೇಕವಾಗಿ ಚಿನ್ನದ ನಾಣ್ಯ ನೀಡಿ ಅಭಿನಂದಿಸಲಾಗುವುದು. ಪಲಿಮಾರು ಮತ್ತು ಹೆಜಮಾಡಿ ಶಾಖೆಯ ನವೀಕರಣಕ್ಕೆ ಡಿಸಿಸಿ ಮೂಲಕ ಅನುದಾನ ನೀಡಲಾಗುವುದು ಎಂದು ದಕ್ಷಿಣಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್  ಭರವಸೆ ನೀಡಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಸಾಮಾಜಿಕ ಬದ್ದತೆಗೆ ರಕ್ಷಣಾ ಕವಚವಾಗಿ ಸಹಕಾರಿ ಕ್ಷೇತ್ರಗಳು ಕೆಲಸ ಮಾಡುತ್ತಿವೆ. ಸಹಕಾರಿ ಕ್ಷೇತ್ರದಲ್ಲಿ ದೂರ ದೃಷ್ಟಿ ಇಟ್ಟುಕೊಂಡು ಆಡಳಿತ ಮಂಡಳಿ, ಸಿಬ್ಬಂದಿ ಸಂಘಟಿತರಾಗಿ ಕೆಲಸ ಮಾಡಿದಲ್ಲಿ ಪ್ರಗತಿ ಸಾಧ್ಯ ಎಂದರು.

ಹೆಜಮಾಡಿಯಲ್ಲಿ ಗೋದಾಮು: ಕೃಷಿ ಸಂಬಂಧಿತ ಸಲಕರಣೆಗಳ ದಾಸ್ತಾನಿಗೆ ಹೆಜಮಾಡಿಯಲ್ಲಿ ನೂತನ ಗೋದಾಮು ನಿರ್ಮಿಸಲಾಗುವುದು. ಹೆಜಮಾಡಿ ಹಾಗೂ ಪಲಿಮಾರು ಶಾಖೆಗಳನ್ನು ಹವಾನಿಯಂತ್ರಿತ ಶಾಖೆಗಳನ್ನಾಗಿ ನಿರ್ಮಾಣ ಮಾಡಲಾಗುವುದು. ಸಂಘದ ವ್ಯಾಪ್ತಿಯ ರೈತರಿಗೆ ಸಬ್ಸಿಡಿ ಬೆಲೆಯಲ್ಲಿ ರಸಗೊಬ್ಬರ ವಿತರಿಸಲಾಗುವುದು ಎಂದು ಅಧ್ಯಕ್ಷ ವೈ ಸುಧೀರ್ ಕುಮಾರ್ ಹೇಳಿದರು. 

ಒಂದು ವರ್ಷಗಳ ಸತತ ತರಬೇತಿ ಮೂಲಕ ಐಎಎಸ್, ಐಪಿಎಸ್ ಪರೀಕ್ಷೆಗಾಗಿ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವ `ಮಾಸ್ಟರ್ ಮೈಂಡ್' ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲೆಯ 8 ಸಹಕಾರಿ ಸಂಘಗಳ  ಸಾಂಸ್ಕೃತಿಕ ಸ್ಪರ್ಧೆ ನಡೆಯಿತು.

ಮೆರವಣಿಗೆ: ಸಂಘದ ಪ್ರಧಾನ ಕಚೇರಿಯಂದ ಹೊರಟ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಬಂಟರಭವನವರೆಗೆ ನಡೆಯಿತು. ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು. 

ಸನ್ಮಾನ: ಡಾ.ಎಂ. ಎನ್. ರಾಜೇಂದ್ರ ಕುಮಾರ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅವರನ್ನು ಸನ್ಮಾನಿಸಲಾಯಿತು. ಸೊಸೈಟಿ ನಿರ್ದೇಶಕರು ಹಾಗೂ ಸಿಬ್ಬಂದಿ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಮತ್ತು ಉಪಾಧ್ಯಕ್ಷ ಗುರುರಾಜ ಪೂಜಾರಿ ಅವರನ್ನು ಅಭಿನಂದಿಸಿದರು.

ಜಿಲ್ಲಾ ರಾಜ್ತೋತ್ಸವ ಪ್ರಶಸ್ತಿ ಪುರಸ್ಕೃತರಾದ ಪೂವಪ್ಪ ಪೂಜಾರಿ, ಶೇಖರ ಪಾಣಾರ, ಯುವ ಸಾಧಕ ಪುಷ್ಪರಾಜ್ ಅಮೀನ್ ಅವರನ್ನು ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ: ದ್ವಿತೀಯ ಪಿಯುಸಿಯಲ್ಲಿ ಶೇ. 90ಕ್ಕೂ ಅಧಿಕ ಅಂಕ ಹಾಗೂ ಎಸ್‍ಎಸ್‍ಎಲ್‍ಸಿಯಲ್ಲಿ ಶೇ. 95ಕ್ಕಿಂತ ಅಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.  ಎರಡು ವಿದ್ಯಾರ್ಥಿಗಳಿಗೆ ಸಹಾಯ ಧನ ವಿತರಿಸಲಾಯಿತು. 

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಮಂಜುನಾಥ್ ಎಸ್. ಕೆ., ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪನಿಬಂಧಕ  ಗಣೇಶ್ ಮಯ್ಯ, ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಐ. ದೇವಿಪ್ರಸಾದ್ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ರಾಜೇಶ್ ರಾವ್ ಇನ್ನಂಜೆ, ಸಂಘದ ನಿರ್ದೇಶಕರಾದ ವೈ.ಜಿ.ರಸೂಲ್, ಗಿರೀಶ್ ಪಲಿಮಾರು, ಶಿವರಾಮ ಎನ್. ಶೆಟ್ಟಿ, ರಾಜಾರಾಮ್ ರಾವ್, ವಾಸುದೇವ ದೇವಾಡಿಗ, ಯಶವಂತ ಪಿ.ಬಿ., ಮಾಧವ ಆಚಾರ್ಯ, ಸ್ಟ್ಯಾನಿ ಕ್ವಾಡ್ರಸ್, ಸುಚರಿತಾ ಎಲ್. ಅಮೀನ್, ಕುಸುಮಾ ಎಮ್. ಕರ್ಕೇರ, ಕಾಂಚನ, ಬಾಲಕೃಷ್ಣ ರಾವ್, ಮುಖ್ಯಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್, ಕಾರ್ಯಕ್ರಮ ಸಂಚಾಲಕ ಪಿ.ಎಸ್.ರವೀಂದ್ರ ರಾವ್ ಉಪಸ್ಥಿತರಿದ್ದರು. ಉಪನ್ಯಾಸಕ ದಯಾನಂದ ಡಿ. ತೇಜಸ್ ಬಂಗೇರ ಕಾರ್ಯಕ್ರಮ ನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News