×
Ad

ಒಲಂಪಿಕ್ಸ್‌ಗಾಗಿ 75 ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ: ಸಚಿವ ಸುನೀಲ್ ಕುಮಾರ್

Update: 2022-01-02 18:22 IST

ಉಡುಪಿ: ರಾಜ್ಯ ಸರಕಾರ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು 75 ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲು ಯೋಜನೆ ರೂಪಿಸಿದೆ. ಮೂರು ವರ್ಷಗಳ ಕಾಲ ಆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಕ್ರೀಡಾ ಭಾರತಿ ವತಿಯಿಂದ ರವಿವಾರ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಜಿಲ್ಲಾ ಕ್ರೀಡಾ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.

ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಕ್ರೀಡಾ ವಸತಿ ಶಾಲೆಯನ್ನು ಸ್ಥಾಪಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಕುರಿತು ಎಲ್ಲ ರೀತಿಯ ಸಿದ್ಧತೆ ಹಾಗೂ ಮಾತುಕತೆ ನಡೆಸಲಾಗಿದೆ. ಅದರಂತೆ ಈ ವರ್ಷವೇ ಆ ಶಾಲೆಯನ್ನು ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಶಿಕ್ಷಣದಲ್ಲಿ ಕ್ರೀಡೆಯೂ ಒಂದು ಭಾಗ ಎಂಬುದನ್ನು ನಾವೆಲ್ಲ ಮರೆತಿದ್ದೇವೆ. ಅಂಕಪಟ್ಟಿಗೆ ಮಾತ್ರ ಸೀಮಿತವಾಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರೀಡೆಯೂ ಮುಖ್ಯವಾಗಿದೆ. ಇದು ನಮ್ಮೆಲ್ಲರ ಗಮನದಲ್ಲಿ ಇರಬೇಕು. ಆ ಮೂಲಕ ಕ್ರೀಡೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.

ಸಮಾರಂಭವನ್ನು ಮಾಹೆ ಮಣಿಪಾಲದ ಸಹ ಕುಲಪತಿ ಡಾ.ಎಚ್.ಎಸ್. ಬಲ್ಲಾಳ್ ಉದ್ಘಾಟಿಸಿದರು. ಸಾಮಾಜಿಕ ಕಾರ್ಯಕರ್ತ ಸತೀಶ್ ಕುತ್ಯಾರು ದಿಕ್ಸೂಚಿ ಭಾಷಣ ಮಾಡಿದರು. ಅಧ್ಯಕ್ಷತೆಯನ್ನು ಶಾಸಕ ಕೆ.ರಘುಪತಿ ಭಟ್ ವಹಿಸಿದ್ದರು.

ಹಿಂದುಳಿದ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಡುಪಿ ನಗರ ಸಂಘಚಾಲಕ ರಾಮಚಂದ್ರ ಸನಿಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಸಂಸ್ಥೆ ಮಾಜಿ ಅಧ್ಯಕ್ಷ ಅಶೋಕ್ ಅಡ್ಯಂತಾಯ, ಕ್ರೀಡಾ ಸಮ್ಮೇಳನದ ಕಾರ್ಯಾ ಧ್ಯಕ್ಷ ಮಹೇಶ್ ಠಾಕೂರ್, ಉಡುಪಿ ಜಿಲ್ಲಾ ಕ್ರೀಡಾ ಭಾರತಿ ಅಧ್ಯಕ್ಷ ಬಿ.ವಸಂತ ಶೆಟ್ಟಿ, ಕಾರ್ಯದರ್ಶಿ ಲಿಂಗಯ್ಯ, ಮಂಗಳೂರು ವಿಭಾಗದ ಕ್ರೀಡಾ ಭಾರತಿ ಸಂಯೋಜಕ ಪ್ರಸನ್ನ ಕಾರ್ಕಳ ಉಪಸ್ಥಿತರಿದ್ದರು.

ಕ್ರೀಡಾ ಸಮ್ಮೇಳನದ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಸ್ವಾಗತಿಸಿದರು. ರೋಶನ್ ಕುಮಾರ್ ಶೆಟ್ಟಿ ವಂದಿಸಿದರು. ಕೆ.ಸಿ.ರಾಜೇಶ್ ಮತ್ತು ಆರೂರು ತಿಮ್ಮಪ್ಪಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News