ಮಟ್ಟು: ಎಳ್ಳಮಾವಾಸ್ಯೆ ಪ್ರಯುಕ್ತ ಸ್ವಾಮೀಜಿಗಳಿಂದ ಸಮುದ್ರ ಸ್ನಾನ
ಕಾಪು, ಜ.2: ಎಳ್ಳಮಾವಾಸ್ಯೆ ಪ್ರಯುಕ್ತ ಪಲಿಮಾರು ಹಿರಿಯ ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ರವಿವಾರ ಮಟ್ಟು ಕಡಲ ಕಿನಾರೆಯಲ್ಲಿ ಸಮುದ್ರ ಸ್ನಾನ ಮಾಡಿ ದಂಡೋಧಕ ಹಾಗೂ ತರ್ಪಣ ನೀಡಿದರು.
ಸ್ವಾಮೀಜಿಯವರಿಗೆ ಮಟ್ಟು ಶ್ರೀವಿಷ್ಣುಮೂರ್ತಿ ದೇವಸ್ಥಾನದ ತಂತ್ರಿಗಳಾದ ಪ್ರವೀಣ ತಂತ್ರಿ, ಮಟ್ಟು ಲಕ್ಷ್ಮೀನಾರಾಯಣ ರಾವ್, ದೇವಳದ ಅರ್ಚಕ ಶ್ರೀಕಾಂತ ಆಚಾರ್ಯ, ಚಂದಪ್ಪಕೋಟ್ಯಾನ್ ಸ್ವಾಗತಿಸಿ ಫಲಪುಷ್ಪದೊಂದಿಗೆ ಮಟ್ಟು ಗುಳ್ಳವನ್ನು ನೀಡಿದರು. ಬಳಿಕ ಸ್ಥಳೀಯ ಭಕ್ತರ ಕೋರಿಕೆಯ ಮೇರೆಗೆ ಸ್ವಾಮೀಜಿಯವರು ದೋಣಿಯಲ್ಲಿ ಕುಳಿತು ವಿಹಾರ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನ ಗಣೇಶ್, ಕೋಟೆ ಗ್ರಾಪಂ ಮಾಜಿ ಉಪಾಧ್ಯಕ್ಷ ಗಣೇಶ ಕುಮಾರ್ ಮಟ್ಟು, ಕೋಟೆ ಗ್ರಾಪಂ ಸದಸ್ಯ ನಾಗರಾಜ್ ಮಟ್ಟು, ರಮೇಶ್ ಪೂಜರಿ, ಪ್ರೇಮ ಕುಂದರ್, ರತ್ನಾಕರ್, ಹಿರಿಯರಾದ ಸದರಾಮ ಮೆಂಡನ್, ಕೇಶವ ಸುವರ್ಣ ಮಟ್ಟು, ಹರ್ಷ ಮಟ್ಟು, ಕರಾವಳಿ ಮಟ್ಟು ವ್ಯಾಪ್ತಿಯ ಭಜನಾ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.