×
Ad

ಮಂಗಳೂರು: ಕ್ರೀಡಾ ಭಾರತಿ ವತಿಯಿಂದ ಕ್ರೀಡಾಕೂಟ

Update: 2022-01-02 20:10 IST

ಮಂಗಳೂರು: ಕ್ರೀಡೆ ಮನಸ್ಸಿಗೆ ಆನಂದ ನೀಡುತ್ತಿದೆ. ಆನಂದದಲ್ಲಿದ್ದಾಗ ಮಾತ್ರ ವ್ಯಕ್ತಿ ಪರಿಪೂರ್ಣತ್ವದೆಡೆಗೆ ಸಾಗಲು ಸಾಧ್ಯ. ಅಂತಹ ಕ್ರೀಡೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರ ನಿರ್ಮಾಣದ ಕಾರ್ಯ ನಡೆಸುವುದು ಕ್ರೀಡಾಭಾರತಿಯ ಉದ್ದೇಶವಾಗಿದೆ ಎಂದು ವಾಗ್ಮಿ ಪ್ರಕಾಶ್ ಮಲ್ಪೆ ಹೇಳಿದರು.

ಕ್ರೀಡಾ ಭಾರತಿ ಮಂಗಳೂರು ವತಿಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ರವಿವಾರ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಕ್ರೀಡೆಯಲ್ಲಿ ಸ್ಪರ್ಧಾ ಮನೋಭಾವ ಮುಖ್ಯ. ಆದರೆ ಅದು ಯುದ್ಧವಲ್ಲ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವುದು ಕ್ರೀಡೆಯ ಗುಣವಾಗಿದೆ. ಈ ಮನೋಭಾವ ಜೀವನದ ಕಷ್ಟ ಸುಖಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಡಾ. ಪಿ. ವಾಮನ ಶೆಣೈ ಮಾತನಾಡಿದರು. ಅತಿಥಿಗಳಾಗಿ ಆರೆಸ್ಸೆಸ್ಸ್ ಮಂಗಳೂರು ಮಹಾನಗರ ಸಂಘಚಾಲಕ ಡಾ. ಸತೀಶ್ ರಾವ್, ಮೇಯರ್ ಪ್ರೇಮಾನಂದ ಶೆಟ್ಟಿ, ಸಂಸ್ಕಾರ ಭಾರತಿಯ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್‌ನ ಅಧ್ಯಕ್ಷ ಅಶೋಕ್ ಹೆಗ್ಡೆ ಭಾಗವಹಿಸಿದ್ದರು.

ಕ್ರೀಡಾಭಾರತಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯ ಭೋಜರಾಜ ಕಲ್ಲಡ್ಕ, ಮಂಗಳೂರು ಘಟಕದ ಅಧ್ಯಕ್ಷ ಕಾರಿಯಪ್ಪ ರೈ ಕೆ., ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೆಮಾರ್, ಜತೆ ಕಾರ್ಯದರ್ಶಿ ಹರೀಶ್ ರೈ ಬಿ., ಡಾ. ಕರುಣಾಕರ ಶೆಟ್ಟಿ, ಮಹಿಳಾ ಪ್ರಮುಖ್ ಹೇಮಪ್ರಭಾ ಲಾಲ ಉಪಸ್ಥಿತರಿದ್ದರು. ಬೆಳ್ತಂಗಡಿ ಘಟಕದ ಅಜಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೆ ಮುನ್ನ ಪಿವಿಎಸ್ ವೃತ್ತದಿಂದ ಕರಾವಳಿ ಮೈದಾನದವರೆಗೆ ಜಿಲ್ಲಾ ಸಮ್ಮೇಳನದ ಮೆರವಣಿಗೆ ನಡೆಯಿತು. ಬಳಿಕ ವಿವಿಧ ಪಂದ್ಯಾಟ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News