ಸುಳ್ಳು ನಿಲ್ಲುವಂತೆ ಕಾಣುತ್ತಿಲ್ಲ: ಎನ್‌ಸಿಬಿ ವಿರುದ್ಧ ನವಾಬ್ ಮಲಿಕ್ ಟೀಕೆ

Update: 2022-01-02 14:56 GMT

ಮುಂಬೈ,ಜ.2: ಮಾದಕ ದ್ರವ್ಯ ನಿಯಂತ್ರ ಘಟಕ (ಎನ್‌ಸಿಬಿ)ದ ವಿರುದ್ಧ ರವಿವಾರ ಇನ್ನೊಂದು ಸುತ್ತಿನ ದಾಳಿಯನ್ನು ಆರಂಭಿಸಿದ ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಅವರು,ಪ್ರಕರಣದಲ್ಲಿ ಹಿಂದಿನ ದಿನಾಂಕದ ಪಂಚನಾಮೆಗೆ ಸಹಿ ಮಾಡಲು ಪಂಚನೋರ್ವನನ್ನು ಎನ್‌ಸಿಬಿ ಅಧಿಕಾರಿ ಕರೆಸಿದ್ದರು ಎಂದು ಆರೋಪಿಸಿದರು.

ಮಾದಕ ದ್ರವ್ಯ ಪ್ರಕರಣದಲ್ಲಿ ಮಲಿಕ್ ರ ಅಳಿಯನಿಗೆ ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಎನ್‌ಸಿಬಿ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಇತ್ತೀಚಿಗೆ ಅರ್ಜಿಯನ್ನು ಸಲ್ಲಿಸಿತ್ತು.

ಮಲಿಕ್ ಆರೋಪವನ್ನು ತಿರಸ್ಕರಿಸಿದ ಎನ್‌ಸಿಬಿ ಅಧಿಕಾರಿಯೋರ್ವರು, ಅದು ಸುಳ್ಳು ಮತ್ತು ಆಧಾರರಹಿತವಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಲಿಕ್ ಎರಡು ಆಡಿಯೋ ಕ್ಲಿಪ್‌ಗಳನ್ನೂ ಬಿಡುಗಡೆಗೊಳಿಸಿದರು. ಒಂದು ಕ್ಲಿಪ್ ಪ್ರಕರಣದಲ್ಲಿ ಎನ್‌ಸಿಬಿ ಅಧಿಕಾರಿಯು ಹಿಂದಿನ ದಿನಾಂಕದ ಪಂಚನಾಮೆಗೆ ಸಹಿ ಮಾಡುವಂತೆ ಪಂಚ ‘ಮ್ಯಾಡ್ಡಿ’ಗೆ ಮಾಡಿದ್ದರೆನ್ನಲಾದ ಕರೆಯ ಸಂಭಾಷಣೆಗಳನ್ನು ಒಳಗೊಂಡಿದ್ದರೆ,ಇನ್ನೊಂದು ಆಡಿಯೋ ಕ್ಲಿಪ್ ಎನ್‌ಸಿಬಿಯ ಮುಂಬೈ ವಲಯ ನಿರ್ದೇಶಕರಾಗಿದ್ದು ಡಿ.31ರಂದು ಅಧಿಕಾರಾವಧಿ ಅಂತ್ಯಗೊಂಡ ಸಮೀರ್ ವಾಂಖೆಡೆ ಮತ್ತು ಪಂಚನ ನಡುವಿನ ಫೋನ್ ಕರೆಯದಾಗಿದೆ ಎನ್ನಲಾಗಿದೆ.

ಎನ್‌ಸಿಬಿಯ ಸುಳ್ಳುಗಳು ನಿಲ್ಲುವಂತೆ ಕಾಣುತ್ತಿಲ್ಲ. ಅಧಿಕಾರಿಗಳು ಖಾಲಿ ಕಾಗದಗಳ ಮೇಲೆ ಸಹಿಗಳನ್ನು ಪಡೆದುಕೊಂಡು ಜನರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುತ್ತಿದ್ದಾರೆ. ಈಗ ಪ್ರಕರಣಗಳನ್ನು ಸಮರ್ಪಕಗೊಳಿಸಲು ಹಿಂದಿನ ದಿನಾಂಕದ ಪಂಚನಾಮೆಗಳಿಗೆ ಸಹಿ ಹಾಕುವಂತೆ ಪಂಚರನ್ನು ಕರೆಸುತ್ತಿದ್ದಾರೆ ಎಂದು ಹೇಳಿದ ಮಲಿಕ್, ತಾನು ಈ ಬಗ್ಗೆ ನ್ಯಾಯಾಲಯಕ್ಕೆ ಹೋಗುವುದಾಗಿ ತಿಳಿಸಿದರು.

ಕಳೆದ ವರ್ಷ ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿಸಲ್ಪಟ್ಟು ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ತನ್ನ ಅಳಿಯ ಸಮೀರ್ ಖಾನ್ ಮೇಲೆ ಒತ್ತಡ ಹೇರಲು ಅವರನ್ನು ಪ್ರತ್ಯೇಕಿಸಲಾಗುತ್ತಿದೆ,ಆದರೆ ಎನ್‌ಸಿಬಿ ಅಧಿಕಾರಿಗಳ ಸುಳ್ಳುಗಳನ್ನು ಬಯಲಿಗೆಳೆಯುವುದನ್ನು ತಾನು ಮುಂದುವರಿಸುತ್ತೇನೆ ಎಂದು ಮಲಿಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News