ಅಮೆರಿಕ: 2,600ಕ್ಕೂ ಅಧಿಕ ವಿಮಾನ ಸಂಚಾರ ರದ್ದು; ಹವಾಮಾನ ವೈಪರೀತ್ಯ, ಒಮೈಕ್ರಾನ್ ಸೋಂಕು ಕಾರಣ

Update: 2022-01-02 17:23 GMT

ವಾಷಿಂಗ್ಟನ್, ಜ.2: ದೇಶದ ಹಲವೆಡೆ ಕೆಟ್ಟ ಹವಾಮಾನದ ಪರಿಸ್ಥಿತಿ ಮತ್ತು ಒಮೈಕ್ರಾನ್ ರೂಪಾಂತರಿ ಕೊರೋನ ಸೋಂಕು ಉಲ್ಬಣಿಸಿರುವ ಪರಿಣಾಮ ಅಮೆರಿಕದಲ್ಲಿ 2,600ಕ್ಕೂ ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದ್ದು ವಿಮಾನ ಪ್ರಯಾಣ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂದು ವರದಿಯಾಗಿದೆ.

ಶನಿವಾರ ವಿಶ್ವದಾದ್ಯಂತ 4,529 ವಿಮಾನಗಳ ಸಂಚಾರ ರದ್ದಾಗಿದ್ದು ಇದರಲ್ಲಿ ಅಮೆರಿಕದಲ್ಲಿ 50%ಕ್ಕೂ ಅಧಿಕ, ಅಂದರೆ 2,604 ವಿಮಾನಗಳ ಸಂಚಾರ ರದ್ದುಗೊಂಡಿದೆ ಎಂದು ಫ್ಲೈಟ್‌ಅವ್ಯಾರ್ ವೆಬ್‌ಸೈಟ್ ಹೇಳಿದೆ.

ಚೀನಾ ಈಸ್ಟರ್ನ್ ವಿಮಾನ ಯಾನ ಸಂಸ್ಥೆಯ 500ಕ್ಕೂ ಅಧಿಕ ವಿಮಾನ ಸಂಚಾರ, ಏರ್‌ಚೀನಾ ಸೌತ್‌ವೆಸ್ಟ್ ಏರ್‌ಲೈನ್ಸ್‌ನ 450 ವಿಮಾನಗಳ ಸಂಚಾರ ರದ್ದುಗೊಂಡಿದ್ದರೆ, ಅಮೆರಿಕನ್ ಏರ್‌ಲೈನ್ಸ್ ಮತ್ತು ಡೆಲ್ಟಾ ಏರ್‌ಲೈನ್ಸ್ ಸಂಸ್ಥೆಗಳು ತಲಾ 200 ವಿಮಾನಗಳ ಸಂಚಾರ ರದ್ದುಗೊಳಿಸಿದೆ.

ಯುನೈಟೆಡ್ ಏರ್‌ಲೈನ್ಸ್‌ನ 150ಕ್ಕೂ ಅಧಿಕ ವಿಮಾನ ಸಂಚಾರ ರದ್ದಾಗಿದೆ ಎಂದು ವೆಬ್‌ಸೈಟ್ ಹೇಳಿದೆ. ಅಮೆರಿಕನ್ ಈಗಲ್, ಡೆಲ್ಟಾ ಕನೆಕ್ಷನ್ ಮತ್ತು ಯುನೈಟೆಡ್ ಎಕ್ಸ್‌ಪ್ರೆಸ್ ಸಂಸ್ಥೆಗಳನ್ನು ನಿರ್ವಹಿಸುವ ಸ್ಕೈವೆಸ್ಟ್ 480 ವಿಮಾನಗಳ ಸಂಚಾರ ರದ್ದುಗೊಳಿಸಿದೆ. ಕೊರೋನ ಸೋಂಕಿನ ಜತೆಗೆ ಚಿಕಾಗೊ, ಡೆನ್ವರ್ ಮತ್ತು ಡೆಟ್ರಾಯ್ಟಾ ನಗರಗಳಲ್ಲಿನ ಕೆಟ್ಟ ಹವಾಮಾನ ಇದಕ್ಕೆ ಕಾರಣ . ಚಿಕಾಗೊದಲ್ಲಿ ಶನಿವಾರ ಹಿಮ ಚಂಡಮಾರುತದ ಮುನ್ಸೂಚನೆ ನೀಡಲಾಗಿದೆ ಎಂದು ಎಂದು ಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಒಹಾರೆ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುವ 800ಕ್ಕೂ ಅಧಿಕ ವಿಮಾನಗಳ ಸಂಚಾರವನ್ನು ಮಿಡ್ವೇ ವಿಮಾನನಿಲ್ದಾಣದಿಂದ ಕಾರ್ಯನಿರ್ವಹಿಸುವ 250ಕ್ಕೂ ಅಧಿಕ ವಿಮಾನಗಳ ಸಂಚಾರವನ್ನು ಮೊಟಕುಗೊಳಿಸಲಾಗಿದೆ. ಡಿಸೆಂಬರ್ 24ರ ಬಳಿಕ ಅಮೆರಿಕದ 12,000ಕ್ಕೂ ಅಧಿ ವಿಮಾನಗಳ ಸಂಚಾರ ರದ್ದಾಗಿದೆ.

ಈ ಮಧ್ಯೆ, ವಿಮಾನ ಪ್ರಯಾಣದ ಅವ್ಯವಸ್ಥೆ, ಗೊಂದಲ ನಿವಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ಹೇಳಿವೆ. ಜನವರಿ ತಿಂಗಳಿನ ಬಹುತೇಕ ದಿನಗಳಲ್ಲಿ ಕಾರ್ಯನಿರ್ವಹಿಸುವ ಪೈಲಟ್‌ಗಳಿಗೆ ಮೂರುಪಟ್ಟು ಹೆಚ್ಚು ವೇತನ ನೀಡುವುದಾಗಿ ಯುನೈಟೆಡ್ ಏರ್‌ಲೈನ್ಸ್ ಘೋಷಿಸಿದೆ. ಜನವರಿ 4ರಿಂದ ಅನ್ವಯಿಸುವಂತೆ, ಕ್ಯಾಬಿನ್ ಸಿಬಂದಿಗಳ ವೇತನ ದುಪ್ಪಟ್ಟುಗೊಳಿಸುವ ಒಪ್ಪಂದಕ್ಕೆ ಬರಲಾಗಿದೆ ಎಂದು ಸ್ಪಿರಿಟ್ ಏರ್‌ಲೈನ್ಸ್ ಹೇಳಿದೆ. ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅಥವಾ ಸೋಂಕಿತ ಪ್ರಯಾಣಿಕರೊಂದಿಗೆ ಸಂಪರ್ಕದಲ್ಲಿದ್ದ ಕಾರಣದಿಂದ ಹಲವು ಪೈಲಟ್‌ಗಳು  ಹಾಗೂ ಇತರ ಸಿಬಂದಿಗಳು ಕರ್ತವ್ಯಕ್ಕೆ ಗೈರು ಹಾಜರಾಗಿರುವುದು ಸಮ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News